ಕರ್ನಾಟಕ

ಸೆಲ್ಫಿ ಗೀಳು : ಜೀಪಿಗೆ ರೈಲು ಡಿಕ್ಕಿ – ದಂಪತಿ ಪಾರು

Pinterest LinkedIn Tumblr

jeepರಾಮನಗರ, ಏ.೯: ರೈಲ್ವೆ ಹಳಿಯ ಮೇಲೆ ಜೀಪನ್ನು ನಿಲ್ಲಿಸಿ ಪತಿ, ಪತ್ನಿ ಇಬ್ಬರು ಸೆಲ್ಫಿ ಫೋಟೊ ತೆಗೆದುಕೊಳ್ಳುವ ಸಂದರ್ಭದಲ್ಲಿ ತಕ್ಷಣ ರೈಲು ಬಂದು ಜೀಪಿಗೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ನಗರಕ್ಕೆ ಸಮೀಪದ ಬಸವನಪುರದ ಬಳಿ ನಡೆದಿದೆ.
ಇಂದು ಸುಮಾರು ೭.೨೦ರ ಸಮಯದಲ್ಲಿ ಈ ಘಟನೆ ನಡೆದಿದ್ದು, ಮೈಸೂರು ಕಡೆ ಪ್ರವಾಸಕ್ಕೆ ಮಿಲಿಟರಿ ಟೈಪ್ ಇರುವ ಜೀಪಿನಲ್ಲಿ ಹೊರಟಿದ್ದ ಬೆಂಗಳೂರು ಕೊತ್ತನೂರು ವಾಸಿಗಳಾದ ಪ್ರದೀಪ ಮತ್ತು ಆತನ ಪತ್ನಿ ಪ್ರತಿಭಾ ಇಬ್ಬರು ಮಧ್ಯದಲ್ಲಿ ರೈಲ್ವೆ ಹಳಿಯ ಮೇಲೆ ಜೀಪನ್ನು ನಿಲ್ಲಿಸಿ ಫೋಟೊ ಶೂಟಿಂಗ್ ಮಾಡಿಕೊಳ್ಳುತ್ತಿದ್ದರೆಂದು ತಿಳಿದುಬಂದಿದೆ.
ಮೈಸೂರು ಕಡೆಯಿಂದ ಬೆಂಗಳೂರು ಕಡೆ ಹೊರಟಿದ್ದ ಮಂಗಳ ಎಕ್ಸ್‌ಪ್ರೆಕ್ಸ್ ರಾಮನಗರ ಕಡೆಯಿಂದ ನಿಧಾನವಾಗಿ ಬರುತ್ತಿತ್ತೆಂದು ಹೇಳಲಾಗಿದೆ. ರೈಲ್ವೆ ಹಳಿಯ ಮೇಲೆ ನಿಂತಿದ್ದ ಜೀಪಿಗೆ ನಿಧಾನವಾಗಿ ಬರುತ್ತಿದ್ದ ರೈಲು ಡಿಕ್ಕಿ ಹೊಡೆದಿದೆ. ಇದರಿಂದ ಜೀಪಿನಲ್ಲಿದ್ದ ಇವರಿಬ್ಬರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಆದರೆ ಜೀಪ್ ಸಂಪೂರ್ಣವಾಗಿ ಜಖಂಗೊಂಡಿದೆ.
ಬೆಂಗಳೂರಿನ ಕೊತ್ತನೂರು ವಾಸಿ ಪ್ರದೀಪ ಖಾಸಗಿ ಸಾಫ್ಟ್‌ವೇರ್ ಕಂಪನಿಯಲ್ಲಿ ನೌಕರ. ಇವರಿಗೆ ಒಂದು ಮಗುವಿದೆ. ನಿನ್ನೆ ಚಂದ್ರಮಾನ ಯುಗಾದಿ ಹಬ್ಬ ಆಚರಣೆಯಾಗಿದೆ. ಮಿಲಿಟರಿ ಟೈಪ್ ಹೋಲಿಕೆ ಇರುವ ತೆರೆದ ಜೀಪಿನಲ್ಲಿ ಮನೆಯಲ್ಲಿಯೇ ಮಗುವನ್ನು ಬಿಟ್ಟು ಪತಿ, ಪತ್ನಿ ಇಬ್ಬರು ಮೈಸೂರು ಕಡೆ ಪ್ರವಾಸಕ್ಕೆ ಹೊರಟಿದ್ದರೆಂದು ತಿಳಿದುಬಂದಿದೆ.
ದಾರಿ ಮಧ್ಯದಲ್ಲಿ ಬಸವನಪುರ ಗೇಟ್ ಮತ್ತು ವಡೇರಹಳ್ಳಿ ನಡುವೆ ಇರುವ ಬಂಡೆಯ ಸಮೀಪ ರೈಲ್ವೆ ಹಳಿಯ ಮೇಲೆ ತೆರೆದ ಜೀಪನ್ನು ನಿಲ್ಲಿಸಿ ಪತಿ ಪತ್ನಿ ಇಬ್ಬರು ಫೋಟೊ ಶೂಟಿಂಗ್ ಮಾಡಿಕೊಳ್ಳುವ ಸಂದರ್ಭದಲ್ಲಿ ಈ ದುರಂತ ಘಟನೆ ನಡೆದಿದೆ. ಅದೃಷ್ಟವಶಾತ್ ಜೀಪಿನಲ್ಲಿ ಇಲ್ಲದ ಕಾರಣದಿಂದಾಗಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಸುದ್ದಿ ತಿಳಿದ ತಕ್ಷಣ ರಾಮನಗರ ಗ್ರಾಮಾಂತರ ಪೊಲೀಸ್ ಠಾಣೆ ಸಬ್‌ಇನ್ಸ್‌ಪೆಕ್ಟರ್ ಕುಮಾರ್ ಮತ್ತು ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ರೈಲ್ವೆ ಹಳಿ ತಿರುವುಗೊಳಿಸುವಲ್ಲಿ ಶ್ರಮಿಸಿದ್ದಾರೆ. ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ರೈಲು ತಡವಾಗಿ ಬೆಂಗಳೂರು ಕಡೆಗೆ ಸಂಚರಿಸಿದೆ. ಸ್ಥಳಕ್ಕೆ ಚನ್ನಪಟ್ಟಣ ರೈಲ್ವೆ ಪೊಲೀಸ್ ಠಾಣೆ ಸಿಬ್ಬಂದಿ ಆಗಮಿಸಿದೆ. ರೈಲ್ವೆ ಪೊಲೀಸ್ ಇನ್ಸ್‌ಪೆಕ್ಟರ್ ಜೆ.ಬಿ. ಮೊಕಾಶಿ ಭೇಟಿ ನೀಡಿದ್ದಾರೆ. ಚನ್ನಪಟ್ಟಣ ರೈಲ್ವೆ ಪೊಲೀಸ್ ಠಾಣಿಯಲ್ಲಿ ಪ್ರಕರಣ ದಾಖಲಾಗಿದೆ.

Write A Comment