ಕರ್ನಾಟಕ

ನಿಗಮ-ಮಂಡಳಿಯ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ನೇಮಕದ ಕಡತ ವಿಲೇವಾರಿಯಲ್ಲಿ ನಿರತ ಸಿಎಂ

Pinterest LinkedIn Tumblr

sidduಬೆಂಗಳೂರು, ಏ.4- ಹಲವು ದಿನಗಳಿಂದ ಚಾತಕ ಪಕ್ಷಿಯಂತೆ ಎದುರು ನೋಡುತ್ತಿದ್ದ ನಿಗಮ-ಮಂಡಳಿಯ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ನೇಮಕ ಪ್ರಕ್ರಿಯೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅಂತಿಮಗೊಳಿಸಿದ್ದಾರೆ. ಇಂದು ಸಂಜೆ ಅಥವಾ ಯಾವುದೇ ವೇಳೆ ಎಂಟು ನಿಗಮ-ಮಂಡಳಿಯ ಅಧ್ಯಕ್ಷ-ಉಪಾಧ್ಯಕ್ಷರ ನೇಮಕ ಮತ್ತು 800ಕ್ಕೂ ಹೆಚ್ಚು ನಿರ್ದೇಶಕರು ಹಾಗೂ ಸದಸ್ಯರ ನೇಮಕಾತಿ ಆದೇಶ ಹೊರಬೀಳಲಿದೆ ಎಂದು ತಿಳಿದುಬಂದಿದೆ. ಇದಕ್ಕಾಗಿಯೇ ಇಂದು ಸಿದ್ದರಾಮಯ್ಯ ಅವರು ಬೆಂಗಳೂರಿನ ಸೌಖ್ಯ ಪ್ರಕೃತಿ ಚಿಕಿತ್ಸಾ ಕೇಂದ್ರಕ್ಕೆ ತೆರಳಿ ವಿಶ್ರಾಂತಿ ಪಡೆಯಬೇಕಿತ್ತು.

ಆದರೆ, ನಿಗಮ-ಮಂಡಳಿಯ ಅಧ್ಯಕ್ಷ , ಉಪಾಧ್ಯಕ್ಷ, ನಿರ್ದೇಶಕರು ಮ್ತು ಸದಸ್ಯರ ನೇಮಕಾತಿ ಆದೇಶಕ್ಕೆ ಸಹಿ ಹಾಕಬೇಕಿದ್ದರಿಂದ ತಮ್ಮೆಲ್ಲ ಅಧಿಕೃತ ಕಾರ್ಯಕ್ರಮಗಳನ್ನು ರದ್ದುಪಡಿಸಿದರು.ಬೆಳಗಿನಿಂದಲೇ ತಮ್ಮ ಅಧಿಕೃತ ನಿವಾಸ ಕಾವೇರಿಯಲ್ಲಿ ನಿಗಮ-ಮಂಡಳಿ ಪಟ್ಟಿಗೆ ಸಹಿ ಹಾಕುವುದು, ಕಡತಗಳ ಪರಿಶೀಲನೆಯಲ್ಲಿ ತೊಡಗಿಸಿಕೊಂಡಿದ್ದರು. ಮೂಲಗಳ ಪ್ರಕಾರ, ಸಂಜೆ ಇಲ್ಲವೆ ಯಾವುದೇ ವೇಳೆ ಪಟ್ಟಿ ಅಧಿಕೃತವಾಗಿ ಹೊರಬೀಳಲಿದೆ. ಈ ಬಾರಿ ಪಕ್ಷದ ಕಾರ್ಯಕರ್ತರಿಗೆ ಹೆಚ್ಚು ಆದ್ಯತೆ ನೀಡಲಾಗಿದೆ ಎಂದು ತಿಳಿದುಬಂದಿದೆ.

ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದು ಮೂರು ವರ್ಷ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಖಾಲಿ ಇರುವ ನಿಗಮ-ಮಂಡಳಿಗೆ ಅಧ್ಯಕ್ಷ, ಉಪಾಧ್ಯಕ್ಷ, ನಿರ್ದೇಶಕರು, ಸದಸ್ಯರನ್ನು ನೇಮಕ ಮಾಡುವಂತೆ ಒತ್ತಡ ಹೆಚ್ಚಾಗುತ್ತಲೇ ಇತ್ತು. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಮೇಲೆ ಕಾರ್ಯಕರ್ತರು ನಿರಂತರವಾಗಿ ಒತ್ತಡ ಹಾಕುತ್ತಲೇ ಇದ್ದರು. ಸಂಪುಟ ಪುನಾರಚನೆ, ಸರ್ಕಾರದಲ್ಲಿ ಉಂಟಾಗಿದ್ದ ಗೊಂದಲಗಳ ಹಿನ್ನೆಲೆಯಲ್ಲಿ ನಿಗಮ-ಮಂಡಳಿ ಅಧ್ಯಕ್ಷರ ನೇಮಕಾತಿ ಮುಂದೂಡಲ್ಪಟ್ಟಿತ್ತು.

ಇನ್ನು ಸರ್ಕಾರ ಕೇವಲ ಎರಡು ವರ್ಷ ಅಧಿಕಾರದಲ್ಲಿರುವುದರಿಂದ ಹೆಚ್ಚು ಸತಾಯಿಸಿದರೆ ಕಾರ್ಯಕರ್ತರು ಮುನಿಸಿಕೊಳ್ಳಬಹುದೆಂಬ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ಒಲ್ಲದ ಮನಸ್ಸಿನಿಂದಲೇ ನೇಮಕ ಪ್ರಕ್ರಿಯೆಗೆ ಹಸಿರು ನಿಶಾನೆ ತೋರಿದ್ದಾರೆ. ಪಕ್ಷಕ್ಕೆ ಸಲ್ಲಿಸಿರುವ ಸೇವೆಯನ್ನು ಪರಿಗಣಿಸಿ ನಿಗಮ-ಮಂಡಳಿಯಲ್ಲಿ ತಮಗೂ ಅವಕಾಶ ನೀಡುವಂತೆ ಕೆಲವು ತಮ್ಮ ತಮ್ಮ ಗಾಡ್‌ಫಾದರ್‌ಗಳ ಮೂಲಕ ಕೊನೆ ಕ್ಷಣದವರೆಗೂ ಸಿಎಂ ಹಾಗೂ ಕೆಪಿಸಿಸಿ ಅಧ್ಯಕ್ಷರ ಮೇಲೆ ಒತ್ತಡ ಹೇರುತ್ತಿರುವುದಾಗಿ ತಿಳಿದುಬಂದಿದೆ.

Write A Comment