ಕರ್ನಾಟಕ

ಎಸಿಬಿ ವಿರುದ್ಧ ಗೌಡರ ರ್‍ಯಾಲಿ

Pinterest LinkedIn Tumblr

4J2ಬೆಂಗಳೂರು,ಏ,೪-ಲೋಕಾಯುಕ್ತ ಸಂಸ್ಥೆಯನ್ನು ನಿಷ್ಕ್ರೀಯ ಗೊಳಿಸಿ ಭ್ರಷ್ಟಾಚಾರ ನಿಗ್ರಹ ದಳ(ಎಸಿಬಿ) ರಚಿಸಿರುವ ರಾಜ್ಯ ಸರ್ಕಾರದ ಕ್ರಮವನ್ನು ವಿರೋಧಿಸಿ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ ಅವರ ನೇತೃತ್ವದಲ್ಲಿ ಜೆಡಿಎಸ್ ಕಾರ್ಯಕರ್ತರು ನಗರದಲ್ಲಿ ಇಂದು ರಾಜಭವನ ಚಲೋ ಮೆರವಣಿಗೆ ನಡೆಸಿದರು.
ಎಸಿಬಿ ರಚಿಸುವ ಮೂಲಕ ಲೋಕಾಯುಕ್ತ ಮುಚ್ಚುವ ಹುನ್ನಾರ ನಡೆಸಿ ವಿದ್ಯುತ್ ದರ ಹೆಚ್ಚಿಸಿ ಗ್ರಾಹಕರನ್ನು ಸಂಕಷ್ಟಕ್ಕೆ ಸಿಲುಕಿಸಿರುವ ಕ್ರಮವನ್ನು ಮೆರವಣಿಗೆಯಲ್ಲಿ ಖಂಡಿಸಲಾಯಿತು.
ಎಸಿಬಿ ರಚನೆ ವಿರೋಧಿಸುವ ಬ್ಯಾನರ್‌ಗಳು ಪೋಸ್ಟರ್‌ಗಳ ಹಿಡಿದ ಕಾರ್ಯಕರ್ತರು ಕಾಂಗ್ರೆಸ್ ಸರ್ಕಾರ ಹಾಗೂ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ವಿರುದ್ಧ ಘೋಷಣೆಗಳನ್ನು ಕೂಗುತ್ತಾ ಕೂಡಲೇ ಎಸಿಬಿಯನ್ನು ರದ್ದುಪಡಿಸುವಂತೆ ಆಗ್ರಹಿಸಿದರು.
ನಗರದ ಮೌರ್ಯಸರ್ಕಲ್ ನಿಂದ ಫ್ರೀಡಂ ಪಾರ್ಕ್ ವರೆಗೆ ದೇವೇಗೌಡರ ನೇತೃತ್ವದಲ್ಲಿ ಬೃಹತ್ ಮೆರವಣಿಗೆ ಹೊರಟ ಪಕ್ಷದ ಹಲವು ಶಾಸಕರು ಮಾಜಿ ಸಚಿವರು ಮುಖಂಡರುಗಳು ಫ್ರೀಡಂ ಪಾರ್ಕ್‌ನಲ್ಲಿ ಸಮಾವೇಶಗೊಂಡರು.
ಸಮಾವೇಶಗೊಂಡ ಪಕ್ಷದ ಕಾರ್ಯಕರ್ತರು ಮುಖಂಡರನ್ನು ಉದ್ದೇಶಿಸಿ ಮಾತನಾಡಿದ ದೇವೇಗೌಡರು ಎಸಿಬಿ ರಚನೆ ಮಾಡುವ ಮೂಲಕ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಭ್ರಷ್ಟರನ್ನು ರಕ್ಷಿಸಲು ಹೊರಟಿದ್ದಾರೆ ಎಂದು ಹರಿಹಾಯ್ದರು.
ಭ್ರಷ್ಟಾಚಾರವನ್ನು ಹತ್ತಿಕ್ಕಲು ರಚಿಸಿದ್ದ ಲೋಕಾಯುಕ್ತವನ್ನು ದುರ್ಬಲಗೊಳಿಸಿ ತಮ್ಮ ಸರ್ಕಾರದ ಸಚಿವರು ಕಾಂಗ್ರೆಸ್ ಮುಖಂಡರ ರಕ್ಷಣೆಗಾಗಿ ಎಸಿಬಿ ರಚಿಸಲಾಗಿದೆ ಮುಖ್ಯಮಂತ್ರಿಗಳು ತಮ್ಮ ಆಡಳಿತದಲ್ಲಿನ ಭ್ರಷ್ಟಾಚಾರವನ್ನು ರಕ್ಷಿಸಲು ಎಸಿಬಿ ರಚನೆ ಮಾಡಿದ್ದಾರೆ ಎಂದು ತರಾಟೆಗೆ ತೆಗೆದುಕೊಂಡರು.
ಲೋಕಾಯುಕ್ತವನ್ನು ಬಲಪಡಿಸಿ ಭ್ರಷ್ಟಾಚಾರವನ್ನು ನಿರ್ಮೂಲನೆ ಮಾಡುವುದನ್ನು ಬಿಟ್ಟು ಎಸಿಬಿ ರಚನೆಮಾಡಿ ಭ್ರಷ್ಟಾಚಾರಕ್ಕೆ ನೆರವಾಗುತ್ತಿರುವ ಸಿದ್ದರಾಮಯ್ಯ ಅವರ ವಿರುದ್ಧ ಹೋರಾಟಕ್ಕೆ ಸನ್ನದ್ದರಾಗುವಂತೆ ಪಕ್ಷದ ಕಾರ್ಯಕರ್ತರಿಗೆ ಕರೆ ನೀಡಿದರು.
ಮಾಜಿ ಮುಖ್ಯಮಂತ್ರಿ ಹೆಚ್,ಡಿ.ಕುಮಾರಸ್ವಾಮಿ,ಜೆಡಿಎಸ್ ಶಾಸಕರಾದ ಜಿಟಿ ದೇವೇಗೌಡ,ಶರವಣ,ವೈಎಸ್ ವಿ ದತ್ತಾ ,ಗೋಪಾಲಯ್ಯ ಬಿಬಿಎಂಪಿ ಉಪಮೇಯರ್ ಹೇಮಲತಾ ಸೇರಿದಂತೆ ಹಲವು ಮುಖಂಡರ ಮೆರವಣಿಗೆಯಲ್ಲಿ ಭಾಗವಹಿಸಿದ್ದರು.
ನಂತರ ದೇವೇಗೌಡರ ನೇತೃತ್ವದಲ್ಲಿ ಮಾಜಿ ಮುಖ್ಯಮಂತ್ರಿ ಹೆಚ್,ಡಿ.ಕುಮಾರಸ್ವಾಮಿ ಸೇರಿದಂತೆ ಪಕ್ಷದ ಮುಖಂಡರ ನಿಯೋಗ ಮೆರವಣಿಗೆಯ ಮೂಲಕ ರಾಜಭವನಕ್ಕೆ ತೆರಳಿ ರಾಜ್ಯಪಾಲ ವಜುಭಾಯಿ ವಾಲ ಅವರಿಗೆ ದೂರು ಸಲ್ಲಿಸಿ ಎಸಿಬಿ ರಚಿಸಿರುವ ಸರ್ಕಾರದ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು.
ಬೃಹತ್ ಮೆರವಣಿಗೆಯ ಹಿನ್ನೆಲೆಯಲ್ಲಿ ಮೌರ್ಯ ಸರ್ಕಲ್ ಬಳಿ ೨ ಕೆಎಸ್ ಆರ್ ಪಿ ತುಕಡಿ, ನೂರಕ್ಕೂ ಹೆಚ್ಚು ಪೊಲೀಸರನ್ನು ನಿಯೋಜಿಸಿ ಬಿಗಿ ಬಂದೋಬಸ್ಥ್ ಮಾಡಲಾಗಿದೆ.

Write A Comment