ಕರ್ನಾಟಕ

ಯೋಗಗುರು ಬಸವ ಪ್ರಶಸ್ತಿ

Pinterest LinkedIn Tumblr

basavaಬೆಂಗಳೂರು, ಏ. ೩ -ವರನಟ ಡಾ.ರಾಜ್‌ಕುಮಾರ ಅವರ ಯೋಗಗುರು ,ನಿವೃತ್ತ ಪೋಲಿಸ್ ಡಿ.ಐ.ಜಿ. ಹಠಯೋಗಿ ಪಶುಪತಿಹಾಳದ ಡಾ.ಹೊನ್ನಪ್ಪ ಫಕೀರಪ್ಪ ನಾಯ್ಕರ ಅವರಿಗೆ ,ನಾಡಿನ ಪ್ರತಿಷ್ಠಿತ ಗದುಗಿನ ತೋಂಟದಾರ್ಯ ಸಂಸ್ಥಾನ ಮಠ ಪ್ರಸಕ್ತ ಸಾಲಿನ ಮಹಾಮಾನವತಾವಾದಿ ಬಸವ ಪ್ರಶಸ್ತಿ ಘೋಷಿಸಿದೆ.
ಕಳೆದ ಸುಮಾರು ನಲವತ್ತಕ್ಕೂ ಹೆಚ್ಚು ವರ್ಷಗಳಿಂದ ಬೆಂಗಳೂರಿನಲ್ಲಿ ನೆಲೆಸಿ ಹಠಯೋಗದಲ್ಲಿ ಉನ್ನತ ಸಾಧನೆಗೈದಿರುವ ಡಾ.ಎಚ್.ಎಫ್.ನಾಯ್ಕರ್ . ಯೋಗವಿದ್ಯೆಯಲ್ಲಿ ಕಠಿಣ ಸಾಧನೆ ಮಾಡಿರುವ ಜೊತೆಗೆ ಸಾವಿರಾರು ತತ್ವಪದಗಳನ್ನೂ ಸಹ ರಚಿಸಿದ್ದಾರೆ. ಕನ್ನಡದ ವರನಟ ಡಾ.ರಾಜಕುಮಾರ ಸೇರಿದಂತೆ ಅನೇಕ ಮಹನೀಯರಿಗೆ ಈ ವಿದ್ಯೆ ಧಾರೆ ಎರೆದಿರುವ ಹೆಚ್.ಎಫ್.ನಾಯ್ಕರ್ ಅವರು. ಯೋಗವಿದ್ಯೆಗೆ ವಾಣಿಜ್ಯದ ಸೋಂಕು,ಪ್ರಚಾರದ ಗೀಳು ತಗುಲದಂತೆ ಸದ್ದಿಲ್ಲದೆ ಸತತ ಸಾಧನೆ ಮಾಡುತ್ತ ವಿಶ್ವದ ಯೋಗ ಸಾಧಕರಿಗೆ ಮಾದರಿಯೆನಿಸಿದ್ದಾರೆ. ಮೂಲತಃ ಧಾರವಾಡ ಜಿಲ್ಲೆ ಕುಂದಗೋಳ ತಾಲ್ಲೂಕಿನ ಪಶುಪತಿಹಾಳ ಗ್ರಾಮದವರಾದ ಹೊನ್ನಪ್ಪ ನಾಯ್ಕರ ಅವರು, ಪೋಲಿಸ್ ಇಲಾಖೆಯ ನಾನಾ ಉನ್ನತ ಹುದ್ದೆಗಳಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ . ಬೆಂಗಳೂರಿನಲ್ಲಿ ಮಹಾಯೋಗಕೇಂದ್ರ ಎಂಬ ವಿಶಾಲವಾದ ಯೋಗಾಶ್ರಮವನ್ನೂ ನಿರ್ವಹಿಸುತ್ತಿದ್ದಾರೆ. ಡಾ.ರಾಜ್ ಅವರನ್ನು ವೀರಪ್ಪನ್ ಅಪಹರಿಸಿದ ವೇಳೆ ಕಾಡಿನಲ್ಲಿ ಅವರಿಗೆ ತೊಂದರೆಯಾಗದಂತೆ ಯೋಗ ಸಾಧನೆ ಮಾಡಲು ಆಕಾಶವಾಣಿ ಮೂಲಕ ಸಂದೇಶ ಕಳುಹಿಸಿದ ಹಿರಿಮೆಯೂ ಇವರದಾಗಿದೆ.
ಮೇ ೯ ರಂದು ಜರುಗುವ ಬಸವ ಜಯಂತಿಯಂದು ಪ್ರಶಸ್ತಿ ನೀಡಿ ಗೌರವಿಸಲಾಗುವದು ಎಂದು ಶ್ರೀಮಠದ ಪ್ರಕಟಣೆ ತಿಳಿಸಿದೆ.

Write A Comment