ದಾವಣಗೆರೆ, ಏ.2- ಸರ್ಕಾರ ಮೂಢನಂಬಿಕೆ ನಿಷೇಧ ಕಾಯ್ದೆ ತರುವುದನ್ನು ಬಿಟ್ಟು ಸಮಾಜದಲ್ಲಿರುವ ಸಮಸ್ಯೆಗಳನ್ನು ಪರಿಹರಿಸಲು ಗಮನ ಹರಿಸಬೇಕು ಎಂದು ಹ್ಯಾಟ್ರಿಕ್ ಹೀರೋ ಶಿವರಾಜ್ಕುಮಾರ್ ಸಲಹೆ ನೀಡಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳಸಾ-ಬಂಡೂರಿ ಹೋರಾಟ ಇನ್ನಷ್ಟು ತೀವ್ರಗೊಳಿಸಬೇಕಿದೆ. ಹೋರಾಟಕ್ಕೆ ಸೆಲಬ್ರಿಟಿಗಳು ಅಷ್ಟೇ ಅಲ್ಲ, ರಾಜಕಾರಣಿಗಳು ಹಾಗೂ ಜನಸಾಮಾನ್ಯರು ಬೆಂಬಲ ನೀಡಬೇಕಿದೆ ಎಂದು ಅಭಿಪ್ರಾಯಪಟ್ಟರು.
ರಾಜ್ಯದಲ್ಲಿರುವ ಸಮಸ್ಯೆಗಳ ನಿವಾರಣೆಗೆ ಕನ್ನಡಪರ ಸಂಘಟನೆಗಳು ಒಂದಾಗಿ ಶ್ರಮಿಸಬೇಕಿದೆ ಎಂದ ಅವರು, ಮೂಢನಂಬಿಕೆ ನಿಷೇಧದಂತಹ ಕಾಯ್ದೆ ಜಾರಿಗೊಳಿಸುವ ಬದಲು ರಾಜ್ಯದಲ್ಲಿರುವ ಜ್ವಲಂತ ಸಮಸ್ಯೆಗಳ ಬಗ್ಗೆ ಎಚ್ಚೆತ್ತುಕೊಂಡು ಅದನ್ನು ಬಗೆಹರಿಸುವ ಮೂಲಕ ಜನರಿಗೆ ಸೂಕ್ತ ಅನುಕೂಲ ಕಲ್ಪಿಸಬೇಕು ಎಂದು ಹೇಳಿದರು.ಶಿವಲಿಂಗ ಚಿತ್ರ 120 ಚಿತ್ರಮಂದಿರಗಳಲ್ಲಿ 50 ದಿನ ಪೂರೈಸಿರುವುದು ಸಂತಸ ತಂದಿದೆ. ಚಿತ್ರಕ್ಕಾಗಿ ಚಿತ್ರತಂಡದ ಎಲ್ಲರೂ ಸಾಕಷ್ಟು ಶ್ರಮಿಸಿದ್ದಾರೆ ಎಂದು ಸ್ಮರಿಸಿದರು.
ಕನ್ನಡದಲ್ಲಿ ಇನ್ನಷ್ಟು ಒಳ್ಳೆಯ ಚಿತ್ರಗಳು ಬರುತ್ತಿವೆ. ಮತ್ತಷ್ಟು ಬರಬೇಕಿದೆ ಎಂದು ತಿಳಿಸಿದರು.