ಕರ್ನಾಟಕ

ಮೌಲ್ಯ ಮಾಪನಕ್ಕೆ ಉಪನ್ಯಾಸಕ ರು ಹಾಜರಾಗಲಿದ್ದಾರೆ : ಕಿಮ್ಮನೆ ರತ್ನಾಕರ್ ವಿಶ್ವಾಸ

Pinterest LinkedIn Tumblr

kiಬೆಂಗಳೂರು, ಏ.2- ದ್ವಿತೀಯ ಪಿಯುಸಿ ರಸಾಯನಶಾಸ್ತ್ರ ಪ್ರಶ್ನೆ ಪತ್ರಿಕೆ ಸೋರಿಕೆ ಮತ್ತು ಲೋಪಗಳ ಬಗ್ಗೆ ಚರ್ಚೆ ನಡೆಸಿದ್ದು, ಮುಂದೆ ತೆಗೆದುಕೊಳ್ಳಬೇಕಾದ ಕ್ರಮದ ಬಗ್ಗೆಯೂ ಚರ್ಚೆ ನಡೆಸಿ ಖುದ್ದಾಗಿ ನಾನೇ ರಸಾಯನಶಾಸ್ತ್ರ ಮರು ಪರೀಕ್ಷೆಯ ಮೇಲ್ವಿಚಾರಣೆ ಮಾಡುತ್ತೇನೆಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ್ ತಿಳಿಸಿದರು. ಈ ಸಂಬಂಧ ಉನ್ನತ ಅಧಿಕಾರಿಗಳ ಜತೆ ಸಭೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇದುವರೆಗೂ ಆಗಿರುವ ತೊಂದರೆಗಳ ಬಗ್ಗೆ ವಿದ್ಯಾರ್ಥಿಗಳು ಹಾಗೂ ಪೋಷಕರಲ್ಲಿ ಕ್ಷಮೆ ಯಾಚಿಸುತ್ತೇನೆ. ಮುಂದೆ ಇದಕ್ಕೆ ಅವಕಾಶ ಕೊಡುವುದಿಲ್ಲ ಎಂದರು.ರಸಾಯನಶಾಸ್ತ್ರ ಮರು ಪರೀಕ್ಷೆ ಮುಗಿಯುವವರೆಗೂ ನನ್ನದೇ ಮೇಲುಸ್ತುವಾರಿ. ಈ ಬಾರಿ ಎಲ್ಲ ರೀತಿಯಲ್ಲೂ ಮುನ್ನೆಚ್ಚರಿಕೆ ವಹಿಸುತ್ತೇನೆ. ನಾನೇ ನಿಂತು ಪರೀಕ್ಷೆ ಮುಗಿಯುವವರೆಗೂ ಮೇಲುಸ್ತುವಾರಿ ವಹಿಸುತ್ತೇನೆ.

ಯಾವುದೇ ಕಾರಣಕ್ಕೂ ಮತ್ತೆ ಪ್ರಶ್ನೆ ಪತ್ರಿಕೆ ಸೋರಿಕೆಯಾಗಲ್ಲ. ಪೋಷಕರು ಹಾಗೂ ವಿದ್ಯಾರ್ಥಿಗಳು ಆತಂಕ ಪಡಬೇಕಿಲ್ಲ. ವಿದ್ಯಾರ್ಥಿಗಳು ಧೈರ್ಯವಾಗಿ ಪರೀಕ್ಷೆ ಎದುರಿಸಿ ಎಂದು ವಿದ್ಯಾರ್ಥಿಗಳಿಗೆ ಕಿಮ್ಮನೆ ಅಭಯ ನೀಡಿದರು.ಸಿಇಟಿ ಪರೀಕ್ಷೆ ದಿನಾಂಕವನ್ನು ಮುಂದೂಡುವ ಅಗತ್ಯವಿಲ್ಲ ಎಂದು ಇದೇ ವೇಳೆ ಸ್ಪಷ್ಟಪಡಿಸಿದರು. ದ್ವಿತೀಯ ಪಿಯುಸಿ ಉತ್ತರ ಪತ್ರಿಕೆ ಮೌಲ್ಯಮಾಪನ ಬಹಿಷ್ಕಾರದ ಬಗ್ಗೆಯೂ ಪ್ರತಿಕ್ರಿಯಿಸಿ ಶಿಕ್ಷಕರೊಂದಿಗೆ ಮಾತುಕತೆ ನಡೆಸಿ ಅವರನ್ನು ಮನವೊಲಿಸಿದ್ದೇವೆ. ಅವರು ಮೌಲ್ಯಮಾಪನಕ್ಕೆ ಹಾಜರಾಗುವ ವಿಶ್ವಾಸವಿದೆ. ಫಲಿತಾಂಶ ಪ್ರಕಟಗೊಂಡ ನಂತರ ಮುಖ್ಯಮಂತ್ರಿಯವರೊಂದಿಗೆ ಚರ್ಚಿಸಿ ಉಪನ್ಯಾಸಕರ ಬೇಡಿಕೆಗಳಿಗೆ ಮಧ್ಯಂತರ ಪರಿಹಾರ ಕೊಡಿಸಲು ನಾನೇ ಜವಾಬ್ದಾರಿ ವಹಿಸಿ ಪರಿಹಾರ ಕೊಡಿಸುವುದಾಗಿ ಭರವಸೆ ನೀಡಿದರು.

ಪ್ರಶ್ನೆ ಪತ್ರಿಕೆ ಸೋರಿಕೆಯನ್ನು ಮುಂದಿಟ್ಟುಕೊಂಡು ಎಬಿವಿಪಿ ರಾಜಕಾರಣ ಮಾಡುತ್ತಿದೆ. ಈ ಹಿಂದೆ ವಿಶ್ವೇಶ್ವರ ಹೆಗಡೆ ಕಾಗೇರಿಯವರು ಸಚಿವರಾಗಿದ್ದಾಗಲೂ ಗಣಿತ ಮತ್ತು ಭೌತಶಾಸ್ತ್ರ ಪ್ರಶ್ನೆ ಪತ್ರಿಕೆ ಬಹಿರಂಗವಾಗಿತ್ತು. ಆಗ ಏಕೆ ಪ್ರತಿಭಟನೆ ಮಾಡಲಿಲ್ಲ. ಈಗ ರಾಜಕಾರಣ ಮಾಡುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು. ಬಿಜೆಪಿಯಲ್ಲಿ ಹಲವರು ಜೈಲಿಗೆ ಹೋಗಿ ಬಂದಿದ್ದಾರೆ. ಹಲವು ಹಗರಣಗಳಲ್ಲಿ ಭಾಗಿಯಾಗಿದ್ದಾಗಲೂ ಪ್ರತಿಭಟನೆ ಮಾಡಲಿಲ್ಲ. ಇದೀಗ ಪ್ರಶ್ನೆ ಪತ್ರಿಕೆ ಸೋರಿಕೆ ವಿಚಾರವಾಗಿ ವಿನಾಕಾರಣ ರಾಜಕಾರಣ ಮಾಡುತ್ತ ಪ್ರತಿಭಟನೆಗೆ ಮುಂದಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪ್ರಶ್ನೆ ಪತ್ರಿಕೆ ಸೋರಿಕೆ ವಿಚಾರದಲ್ಲಿ ನನ್ನದು ನೈತಿಕ ಜವಾಬ್ದಾರಿಯಾಗಿದೆ. ಬಿಜೆಪಿಯವರಂತೆ ನನ್ನಿಂದ ಏನಾದರೂ ಆಗಿದ್ದರೆ ನಾನು ರಾಜೀನಾಮೆ ಕೊಟ್ಟು ರಾಜಕೀಯ ಸನ್ಯಾಸತ್ವ ತೆಗೆದುಕೊಂಡು ವಾಪಸ್ ಹೋಗುತ್ತಿದ್ದೆ. ಈಗಲೂ ಅಧಿಕಾರದ ಆಸೆ ಇಲ್ಲ. ವ್ಯವಸ್ಥೆ ಸರಿಹೋಗುವುದಾದರೆ ರಾಜೀನಾಮೆ ಕೊಡುತ್ತೇನೆ. ಬಿಜೆಪಿಯವರಿಂದ ಆದರ್ಶದ ಪಾಠ ಕಲಿಯಬೇಕಿಲ್ಲ ಎಂದರು. ತೀರ್ಥಹಳ್ಳಿಯಲ್ಲಿ ನಂದಿತಾ ಕೊಲೆ ಪ್ರಕರಣವನ್ನು ದೊಡ್ಡದು ಮಾಡಿ ಪ್ರತಿಭಟನೆ ಮಾಡಿದ್ದರು. ಈಗ ಶೃಂಗೇರಿ ಮತ್ತು ಕೊಪ್ಪದಲ್ಲಿ ಅತ್ಯಾಚಾರ, ಆತ್ಮಹತ್ಯೆ, ಕೊಲೆಗಳಾಗಿವೆ. ಕೊಪ್ಪ ಪ್ರಕರಣದಲ್ಲಿ ಭಜರಂಗದಳದ ಪ್ರಮುಖನೇ ಆರೋಪಿಯಾಗಿದ್ದಾನೆ. ಈ ಬಗ್ಗೆ ಏಕೆ ಪ್ರತಿಭಟನೆ ಮಾಡುತ್ತಿಲ್ಲ ಎಂದು ಅವರು ಪ್ರಶ್ನಿಸಿದರು.

ಪಿಯುಸಿ ರಸಾಯನಶಾಸ್ತ್ರ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣದಲ್ಲಿ ಮಂಡಳಿ ನಿರ್ದೇಶಕಿ ಪಲ್ಲವಿ ಅಕುರಾತಿ ಅವರನ್ನು ಶಿಕ್ಷೆಗೆ ಗುರಿಪಡಿಸುವುದು ಇಷ್ಟವಿಲ್ಲ.ಈ ಹಿಂದೆ ಇದ್ದ ನಿರ್ದೇಶಕರು ಮುಂದುವರೆದಿದ್ದರೆ ಅವರನ್ನು ಅಮಾನತು ಶಿಕ್ಷೆಗೆ ಗುರಿಪಡಿಸಬಹುದಿತ್ತು. ಆದರೆ, ಪಲ್ಲವಿ ಅಕುರಾತಿ ಅವರು ಒಂದು ತಿಂಗಳ ಹಿಂದೆಯಷ್ಟೆ ಬಂದಿರುವುದು. ಆ ಮಧ್ಯೆ ಮದುವೆ ಎಂದು ರಜೆ ಹಾಕಿದ್ದರು. ಹೀಗಾಗಿ ಅವರ ಬಗ್ಗೆ ಅನುಕಂಪವಿದೆ ಎಂದು ಅವರು ಹೇಳಿದರು.

Write A Comment