ಕರ್ನಾಟಕ

ಪಿಯು ಪ್ರಶ್ನೆಪತ್ರಿಕೆ ಸೋರಿಕೆಯಲ್ಲಿ ವಿದ್ಯಾರ್ಥಿಗಳು, ಪೋಷಕರು, ಕೆಲವು ಏಜೆಂಟರು ಭಾಗಿ: ಸಿಐಡಿ

Pinterest LinkedIn Tumblr

sonia

ಬೆಂಗಳೂರು: ದ್ವಿತೀಯ ಪಿಯುಸಿ ರಸಾಯನಶಾಸ್ತ್ರ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದಲ್ಲಿ ವಿದ್ಯಾರ್ಥಿಗಳು ಹಾಗೂ ಅವರ ಪೋಷಕರು ಮತ್ತು ಕೆಲವು ಏಜೆಂಟರು ಭಾಗಿಯಾಗಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ ಎಂದು ಪ್ರಕರಣದ ತನಿಖೆ ನಡೆಸುತ್ತಿರುವ ಸಿಐಡಿ ಡಿಐಜಿ ಸೋನಿಯಾ ನಾರಂಗ್ ಶನಿವಾರ ಹೇಳಿದ್ದಾರೆ.

ಪ್ರಶ್ನೆ ಪತ್ರಿಕೆ ಸೋರಿಕೆಗೆ ಸಂಬಂಧಿಸಿದಂತೆ ಈಗಾಗಲೇ 100ಕ್ಕೂ ಹೆಚ್ಚು ಮಂದಿಯನ್ನು ವಿಚಾರಣೆಗೆ ಒಳಪಡಿಸಿದ್ದು, ವಿಚಾರಣೆ ವೇಳೆ ಒಂದು ಪ್ರಶ್ನೆಪತ್ರಿಕೆಯನ್ನು ನಾಲ್ಕು ಸಾವಿರ ರುಪಾಯಿಯವರೆಗೆ ಮಾರಾಟ ಮಾಡಲಾಗಿದೆ ಎಂದರು.

ಪ್ರಶ್ನೆಪತ್ರಿಕೆ ಸೋರಿಕೆಯಾದ ಕೆಲವೇ ಗಂಟೆಗಳಲ್ಲಿ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದ್ದು, ಪ್ರಕರಣದ ತನಿಖೆಯನ್ನು ತೀವ್ರಗೊಳಿಸಲಾಗಿದೆ ಎಂದು ನಾರಂಗ್‌ ತಿಳಿಸಿದ್ದಾರೆ.

ಪೂರ್ವ ನಿಗದಿಯಂತೆ ಇಲಾಖೆ ನಡೆಸಲು ಉದ್ದೇಶಿಸಿದ್ದ ಪಿಯು ರಸಾಯನಶಾಸ್ತ್ರ ಪ್ರಶ್ನೆಪತ್ರಿಕೆ ಮಾರ್ಚ್ 21ರಂದು ಸೋರಿಕೆಯಾಗಿತ್ತು. ಈ ಹಿನ್ನೆಲೆಯಲ್ಲಿ ಮರು ಪರೀಕ್ಷೆಯನ್ನು ಮಾರ್ಚ್ 31ರಂದು ನಡೆಸಲು ಇಲಾಖೆ ತಯಾರಿ ನಡೆಸಿದ್ದರೂ ಮತ್ತೆ ಪ್ರಶ್ನೆ ಪತ್ರಿಕೆ ಸೋರಿಯಾಗಿದ್ದರಿಂದ ಈಗ ಏಪ್ರಿಲ್ 12ಕ್ಕೆ ಪರೀಕ್ಷೆ ನಿಗದಪಡಿಸಲಾಗಿದೆ.

ಎರಡು ಬಾರಿ ಪ್ರಶ್ನೆಪತ್ರಿಕೆ ಸೋರಿಕೆಯಾದ ಹಿನ್ನೆಲೆಯಲ್ಲಿ ಸರ್ಕಾರ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ, ಸೋನಿಯಾ ನಾರಂಗ್ ನೇತೃತ್ವದಲ್ಲಿ ವಿಶೇಷ ತನಿಖಾ ತಂಡವನ್ನು ರಚನೆ ಮಾಡಿದೆ.

ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣದ ವಿರುದ್ಧ ವಿದ್ಯಾರ್ಥಿಗಳು, ಪೋಷಕರು ತೀವ್ರ ಪ್ರತಿಭಟನೆ ನಡೆಸಿ, ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ್ ಅವರ ರಾಜಿನಾಮೆಗೆ ಆಗ್ರಹಿಸಿದ್ದರು.

Write A Comment