ಕರ್ನಾಟಕ

ಕೃಷಿ ವಿವಿ ವಿದ್ಯಾರ್ಥಿಗಳ ಮುಷ್ಕರ

Pinterest LinkedIn Tumblr

protestಬೆಂಗಳೂರು, ಏ. ೧ – ಕೃಷಿ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಬೇಕು ಎಂದು ಆಗ್ರಹಪಡಿಸಿ ಬೆಂಗಳೂರು, ಶಿವಮೊಗ್ಗ, ಧಾರವಾಡ ಹಾಗೂ ರಾಯಚೂರು ಕೃಷಿ ವಿಶ್ವವಿದ್ಯಾಲಯಗಳ ವಿದ್ಯಾರ್ಥಿಗಳು ನಡೆಸುತ್ತಿರುವ ಅನಿರ್ದಿಷ್ಟಾವಧಿ ಮುಷ್ಕರದ ಬಿಸಿ ಎಲ್ಲಾ ವಿವಿಗಳಿಗೆ ತಗುಲಿದ್ದು, ಪಾಠ ಪ್ರವಚನ ಕಾರ್ಯ ಸ್ಥಗಿತಗೊಂಡಿದೆ.
ಬೆಂಗಳೂರಿನ ಜಿ.ಕೆ.ವಿ.ಕೆ. ಆವರಣ ಪ್ರವೇಶಿಸುವ ಎಲ್ಲ ಪ್ರಮುಖ ದ್ವಾರಗಳನ್ನು ವಿದ್ಯಾರ್ಥಿಗಳು ಮುಚ್ಚಿದ್ದರಿಂದ ಬೆಳಿಗ್ಗೆ ವಾಹನ ಸಂಚಾರ ಇಲ್ಲದೇ ಸಿಬ್ಬಂದಿ ನಡೆದುಕೊಂಡು ವಿವಿ ತಲುಪಬೇಕಾಯಿತು. ಕೆಲ ಕಾಲದ ನಂತರ ಪೊಲೀಸರ ಮಧ್ಯಪ್ರವೇಶದಿಂದ ಸಂಚಾರ ಸುಗಮಗೊಂಡಿತು.
ಧಾರವಾಡ ವರದಿ
ವಿದ್ಯಾರ್ಥಿಗಳ ಆಕ್ರೋಶ
ಕೃಷಿ ಇಲಾಖೆಯ ನೇಮಕಾತಿ ಪ್ರಕ್ರಿಯೆಯಲ್ಲಿರುವ ಗೊಂದಲ ನಿವಾರಣೆ ಮಾಡಬೇಕು ಹಾಗೂ ಕೃಷಿ ವಿಶ್ವವಿದ್ಯಾಲಯಗಳನ್ನು ಖಾಸಗೀಕರಣಗೊಳಿಸುತ್ತಿರುವುದನ್ನು ವಿರೋಧಿಸಿ ನಗರದ ಕೃಷಿ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ನಡೆಸುತ್ತಿರುವ ಪ್ರತಿಭಟನೆ ಇಂದು ಮೂರನೇ ದಿನಕ್ಕೆ ಕಾಲಿಟ್ಟಿದೆ.
ಶುಕ್ರವಾರ ಬೆಳಿಗ್ಗೆಯಿಂದಲೇ ವಿಶ್ವವಿದ್ಯಾಲಯದ ಆವರಣದಲ್ಲಿ ಪ್ರತಿಭಟನೆ ಆರಂಭಿಸಿದ ಸಾವಿರಾರು ವಿದ್ಯಾರ್ಥಿಗಳು ಕೃಷಿ ಸಚಿವ ಕೃಷ್ಣಬೈರೆಗೌಡ ಹಾಗೂ ರಾಜ್ಯ ಸರಕಾರದ ವಿರುದ್ಧ ಘೋಷಣೆ ಹಾಕಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆ ವೇಳೆ ಮಾತನಾಡಿದ ವಿದ್ಯಾರ್ಥಿಗಳು, ಹೊಸ ಖಾಸಗಿ ಕೃಷಿ ವಿದ್ಯಾಲಯಗಳಿಗೆ ಪರವಾನಿಗೆ ನೀಡಬಾರದು ಹಾಗೂ ಅಸ್ತಿತ್ವದಲ್ಲಿರುವ ಖಾಸಗಿ ಕೃಷಿವಿದ್ಯಾಲಯಗಳ ಮಾನ್ಯತೆ ರದ್ದುಪಡಿಸಬೇಕು. ಕೃಷಿ ಹಾಗೂ ಕೃಷಿಯೇತರ ಇಲಾಖೆಗಳಲ್ಲಿ ತಳಮಟ್ಟದ ಕಾರ್ಯ ನಿರ್ವಹಣೆಯನ್ನು ಬಲಪಡಿಸುವ ನಿಟ್ಟಿನಲ್ಲಿ ಕೃಷಿ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಬೇಕು ಹಾಗೂ ಮೂಲ ಸೌಲಭ್ಯಗಳನ್ನು ಉತ್ತಮಗೊಳಿಸಬೇಕು, ಸರಕಾರದ ಯೋಜನೆಗಳನ್ನು ಮತ್ತು ಕೃಷಿ ತಂತ್ರಜ್ಞಾನವನ್ನು ಕೃಷಿಕ ಸಮುದಾಯಗಳಿಗೆ ತಲುಪಿಸಬೇಕು ಎಂದು ಒಕ್ಕೊರಲಿನಿಂದ ಆಗ್ರಹಿಸಿದರು.
ಈ ಸಂದರ್ಭದಲ್ಲಿ ಕೃಷಿ ವಿಶ್ವವಿದ್ಯಾಲಯದ ಪಿ.ಎಚ್.ಡಿ, ಎಮ್.ಎಸ್ಸಿ ಹಾಗೂ ಬಿ.ಎಸ್ಸಿ ವಿಭಾಗದ ಸಾವಿರಾರು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ಶಿವಮೊಗ್ಗದಲ್ಲೂ ಪ್ರತಿಭಟನೆ
ನಾನಾ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ನಗರದ ಹೊರವಲಯ ನವುಲೆಯಲ್ಲಿರುವ ಕೃಷಿ ಮತ್ತು ತೋಟಗಾರಿಕೆ ವಿಶ್ವ ವಿದ್ಯಾನಿಲಯದ ವಿದ್ಯಾರ್ಥಿಗಳು ನಡೆಸುತ್ತಿರುವ ಅನಿರ್ದಿಷ್ಟಾವದಿ ಮುಷ್ಕರ ಗುರುವಾರ ಎರಡನೇ ದಿನಕ್ಕೆ ಕಾಲಿಟ್ಟಿದೆ.
ಕಾಲೇಜು ಆವರಣದಲ್ಲಿ ಪ್ರತಿಭಟನೆ ನಡೆಸಿದ್ದ ವಿದ್ಯಾರ್ಥಿಗಳು, ಡಿ.ಸಿ. ಕಚೇರಿಯ ಮುಂಭಾಗ ಧರಣಿ ನಡೆಸಿದರು. ಜಿಲ್ಲಾಡಳಿತದ ಮೂಲಕ ಸಿಎಂ ಸಿದ್ದರಾಮಯ್ಯ, ಕೃಷಿ ಸಚಿವರಿಗೆ ಬೇಡಿಕೆಗಳನ್ನೊಳಗೊಂಡ ಮನವಿ ಪತ್ರ ಅರ್ಪಿಸಿದರು.
ಭರ್ತಿ ಮಾಡಿ
ಕಳೆದ 5 ವರ್ಷಗಳಿಂದ ಕೃಷಿ ಇಲಾಖೆಯಲ್ಲಿ ಖಾಲಿ ಇರುವ ಯಾವುದೇ ಕೃಷಿ ಸಂಬಂಧಿತ ಹುದ್ದೆಗಳನ್ನು ಭರ್ತಿ ಮಾಡಿಲ್ಲ. ಇದರಿಂದಾಗಿ ಕೃಷಿ ಅಧಿಕಾರಿಗಳ ಕೊರತೆಯಿಂದ ರೈತರಿಗೆ ಸರಿಯಾದ ಸಮಯಕ್ಕೆ ಬೀಜ ಬಿತ್ತನೆ, ಯಂತ್ರೋಪಕರಣಗಳ ವಿತರಣೆಯು ಆಗುತ್ತಿಲ್ಲ ಹಾಗೂ ಕೃಷಿ ವಿವಿಗಳಿಂದ ಬಿಡುಗಡೆ ಯಾಗುವ ತಳಿಗಳ ಮತ್ತು ತಾಂತ್ರಿಕತೆಯ ಬಗ್ಗೆ ರೈತರಿಗೆ ಸರಿಯಾದ ಮಾಹಿತಿ ಸಿಗುತ್ತಿಲ್ಲ ಎಂದು ಪ್ರತಿಭಟನಾಕಾರರು ದೂರಿದ್ದಾರೆ.
ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳು ಕೃಷಿ ಸಚಿವರನ್ನು ಭೇಟಿ ಮಾಡಿ ತೊಂದರೆಗಳನ್ನು ಬಗೆಹರಿಸುವಂತೆ ಮನವಿ ಸಲ್ಲಿಸಲು ಹೋದಾಗ, ಸಚಿವರು ಧಿಮಾಕಿನ ಉತ್ತರ ನೀಡಿದ್ದಾರೆ. ಪದವೀಧರರ ಸ್ವಾಭಿಮಾನಕ್ಕೆ ಧಕ್ಕೆಯಾಗುವ ರೀತಿಯಲ್ಲಿ ನಡೆದುಕೊಂಡಿದ್ದಾರೆ. ಈ ಕುರಿತಂತೆ ಸಚಿವರು ಬಹಿರಂಗವಾಗಿ ಕ್ಷಮೆಯಾಚಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದ್ದಾರೆ.

Write A Comment