ಕರ್ನಾಟಕ

ಮೋದಿಗೆ ಕೇಂದ್ರ ಸಚಿವರ ಬಹುಪರಾಕ್ ವೆಂಕಯ್ಯ ನಾಯಿಡು ವಾಗ್ವಿಲಾಸ

Pinterest LinkedIn Tumblr

veಬೆಂಗಳೂರು, ಏ. ೧- ಎಂಓಡಿಐ ಮೋದಿ ಎಂದರೆ ಮೇಕಿಂಗ್ ಆಫ್ ಡೆವಲಪ್ಡ್ ಇಂಡಿಯಾ ಎಂದು ಕೇಂದ್ರದ ನಗರಾಭಿವೃದ್ಧಿ ಹಾಗೂ ಸಂಸದೀಯ ವ್ಯವಹಾರಗಳ ಸಚಿವ ವೆಂಕಯ್ಯನಾಯ್ಡು ಹೇಳಿದರು.
ನಗರದಲ್ಲಿಂದು ನಡೆದ ರಾಜ್ಯ ಬಿಜೆಪಿ ಕಾರ್ಯಕಾರಿಣಿಯನ್ನು ಉದ್ಘಾಟಿಸಿ ಮಾತನಾಡಿದ ವೆಂಕಯ್ಯನಾಯ್ಡು ತಮ್ಮ ಉದ್ಘಾಟನಾ ಭಾಷಣದಲ್ಲಿ ಪ್ರಧಾನಿ ಮೋದಿಯವರನ್ನು ಹಾಡಿ ಹೊಗಳಿದರು.
ವಿಶ್ವದಾದ್ಯಂತ ಮೋಡಿ ಮಾಡಿರುವ ಮೋದಿ ಎಂದರೆ ಮೇಕಿಂಗ್ ಆಫ್ ಡೆವಲಪ್ಡ್ ಇಂಡಿಯಾ ಎಂದೆಲ್ಲಾ ವೆಂಕಯ್ಯನಾಯ್ಡು ಹೇಳಿದರು.
ಕೇಂದ್ರ ಸರ್ಕಾರ 2 ವರ್ಷ ಪೂರೈಸುತ್ತಿದೆ. ನಮ್ಮ ಸರ್ಕಾರ ಅಧಿಕಾರಕ್ಕೆ ಬರುವ ಮೊದಲು ಇದ್ದ ದೇಶದ ಸ್ಥಿತಿಗತಿ ಹಾಗೂ ನಂತರ ಸ್ಥಿತಿಗತಿಗಳ ಬಗ್ಗೆ ದಾಖಲೆಗಳನ್ನು ಸಿದ್ದಪಡಿಸುತ್ತಿದ್ದೇವೆ. ಸದ್ಯದಲ್ಲಿಯೇ ಎಲ್ಲವನ್ನೂ ಬಿಡುಗಡೆ ಮಾಡಿ ಜನರಿಗೆ ತಲುಪಿಸಲಾಗುವುದು ಎಂದರು.
ರಾಷ್ಟ್ರದಲ್ಲಿ ಶೀಘ್ರದಲ್ಲೇ 5 ಕೋಟಿ ಬಡ ಮಹಿಳೆಯರಿಗೆ ಉಚಿತ ಎಲ್‌ಪಿಜಿ ಸಂಪರ್ಕ ಯೋಜನೆಯನ್ನು ಜಾರಿಗೊಳಿಸಲಾಗುತ್ತಿದೆ ಎಂದರು.
ದೇಶದ್ರೋಹಿ ಅಫ್ಜಲ್ ಗುರುವನ್ನು ಓಲೈಸುವ ಸಂಘಟನೆಗಳನ್ನು ನಾವು ಸುಮ್ಮನೆ ಬಿಡುವುದಿಲ್ಲ. ಕಠಿಣ ಕ್ರಮ ಕೈಗೊಂಡು ಅಂತಹ ಸಂಘಟನೆಗಳನ್ನು ಹತ್ತಿಕ್ಕುತ್ತೇವೆ ಎಂದು ವೆಂಕಯ್ಯನಾಯ್ಡು ಹೇಳಿದರು.
ಹೈದರಾಬಾದ್ ವಿ.ವಿ.ಯಲ್ಲಿ ದಲಿತ ವಿದ್ಯಾರ್ಥಿ ಆತ್ಮಹತ್ಯೆ ಪ್ರಕರಣ ವಿಚಾರವನ್ನು ಪ್ರಸ್ತಾಪಿಸಿದ ಅವರು, ರಾಜ್ಯದ ದಲಿತ ಮುಖಂಡ ಮಲ್ಲಿಕಾರ್ಜುನ ಖರ್ಗೆ ಒಮ್ಮೆಯೂ ವಿಶ್ವವಿದ್ಯಾಲಯಕ್ಕೆ ಭೇಟಿ ನೀಡಲಿಲ್ಲ. ವಿವಿಗಳ ಇಂದಿನ ಸ್ಥಿತಿಗೆ ಕಾಂಗ್ರೆಸ್‌ನ ಮತಬ್ಯಾಂಕ್ ರಾಜಕಾರಣ ಕಾರಣ ಎಂದು ಅವರು ದೂರಿದರು.
ಕಳೆದ 10 ವರ್ಷದಲ್ಲಿ ಹೈದರಾಬಾದ್ ವಿಶ್ವವಿದ್ಯಾಲಯದಲ್ಲಿ 11 ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆಗ ರಾಹುಲ್‌ಗಾಂಧಿಯವರಾಗಲೀ, ಖರ್ಗೆಯವರಾಗಲೀ ಅಲ್ಲಿಗೆ ಏಕೆ ಭೇಟಿ ನೀಡಲಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ ಅವರು, ಹೈದರಾಬಾದ್ ಮತ್ತು ಜವಾಹರಲಾಲ್ ವಿವಿಯಲ್ಲಿನ ಸಮಸ್ಯೆಗಳಿಗೆ ಕಾಂಗ್ರೆಸ್ ಮತ್ತು ಎಡಪಕ್ಷಗಳ ಚಿತಾವಣೆಯೇ ಕಾರಣ ಎಂದು ಟೀಕಿಸಿದರು.
ವಿಶ್ವವಿದ್ಯಾಲಯಗಳಲ್ಲಿ ಕಿಸ್ ಫೆಸ್ಟಿವಲ್ ಮಾಡುತ್ತಾರೆ, ಭೀಪ್ ಫೆಸ್ಟಿವಲ್ ಮಾಡುತ್ತಾರೆ. ದುರ್ಗಾಮಾತೆಯನ್ನು ಕೆಟ್ಟದಾಗಿ ಚಿತ್ರೀಕರಿಸುತ್ತಾರೆ. ವಿವಿಗಳಿರುವುದು ಅಧ್ಯಯನ ಮಾಡಲಿಕ್ಕೆ ಹೊರತು, ವಿಕೃತ ಕಾರ್ಯಕ್ರಮಗಳನ್ನು ಮಾಡಲಿಕ್ಕೆ ಅಲ್ಲ. ಇದನ್ನೆಲ್ಲಾ ಸಹಿಸಿಕೊಳ್ಳಲು ಸಾಧ್ಯವೇ ಎಂದರು.
ಕೆಲವರಂತೂ ಭಾರತ್ ಮಾತಾಕಿ ಜೈಗೂ ವಿರೋಧ ವ್ಯಕ್ತಪಡಿಸುತ್ತಾರೆ. ಅದಕ್ಕೂ ಧರ್ಮದ ಲೇಪ ಬಳಿಯಲು ಯತ್ನಿಸುತ್ತಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಕೇಂದ್ರ ಸರ್ಕಾರದ ಜನಪರ ಕಾರ್ಯಕ್ರಮಗಳು ಕಾಂಗ್ರೆಸ್ ಪಕ್ಷದವರಿಗೆ ಹೊಟ್ಟೆಕಿಚ್ಚು ತರಿಸುತ್ತಿವೆ. ಅನಗತ್ಯವಾಗಿ ಸರ್ಕಾರವನ್ನು ಟೀಕಿಸುತ್ತಿದ್ದಾರೆ. ನಮ್ಮದು ಸೂಟುಬೂಟಿನ ಸರ್ಕಾರ ಎಂದು ಹೇಳುತ್ತಾರೆ. ರಾಹುಲ್‌ಗಾಂಧಿಯವರ ಅಪ್ಪ, ತಾತ, ಮುತ್ತಾತ ಸೂಟುಬೂಟಿ ಹಾಕಿಕೊಳ್ಳುತ್ತಿರಲಿಲ್ಲವೆ, ಅಂಬಾನಿ, ಅದಾನಿ ಅವರೆಲ್ಲಾ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲೂ ಇರಲಿಲ್ಲವೆ ಎಂದು ಪ್ರಶ್ನಿಸಿದ ವೆಂಕಯ್ಯನಾಯ್ಡು, ಮೋದಿಯವರಿಗೆ ಕೆಟ್ಟ ಹೆಸರು ತರಲು ಕಾಂಗ್ರೆಸ್ ಪಕ್ಷ ಪ್ರಯತ್ನ ನಡೆಸಿದೆ ಎಂದು ಹರಿಹಾಯ್ದರು.
@12bc = ಹೋರಾಟ
ರಾಜ್ಯ ಸರ್ಕಾರದ ವೈಫಲ್ಯಗಳ ವಿರುದ್ಧ ರಾಜ್ಯ ಬಿಜೆಪಿ ಹೋರಾಟ ನಡೆಸಲಿದೆ. ರಾಜ್ಯಾದ್ಯಂತ ಈ ಹೋರಾಟ ನಡೆಯಲಿದೆ ಎಂದು ಅವರು ಹೇಳಿದರು.
ಆರ್ಎಸ್ಎಸ್ ಜತೆ ನಮ್ಮ ಸಂಬಂಧ ಇರುವುದಕ್ಕೆ ನಾವು ಹೆಮ್ಮೆ ಪಡುತ್ತೇವೆ. ಬಿಜೆಪಿ ಅಧಿಕಾರಕ್ಕೆ ಬಂದರೆ ನಾಗಪುರದಿಂದ ಆಡಳಿತ ಎನ್ನುತ್ತಾರೆ. ಆದರೆ ಕಾಂಗ್ರೆಸ್ ಆಡಳಿತ ರೋಮ್, ಇಟಲಿಯಿಂದ ಆಗುತ್ತಿತ್ತು ಎಂದು ವ್ಯಂಗ್ಯವಾಡಿದರು.
ಈ ಸಂದರ್ಭದಲ್ಲಿ ರಾಜ್ಯ ಬಿಜೆಪಿ ಅಧ್ಯಕ್ಷ ಪ್ರಹ್ಲಾದ್ ಜೋಶಿ, ಕೇಂದ್ರ ಸಚವರುಗಳಾದ ಸದಾನಂದಗೌಡ, ಅನಂತಕುಮಾರ್, ವಿಪಕ್ಷ ನಾಯಕರುಗಳಾದ ಜಗದೀಶ್‌ಶೆಟ್ಟರ್, ಕೆ.ಎಸ್. ಈಶ್ವರಪ್ಪ, ರಾಜ್ಯ ಬಿಜೆಪಿ ಉಸ್ತುವಾರಿ ನೋಡಿಕೊಳ್ಳುವ ಮುರುಳೀಧರ್‌ರಾವ್ ಸೇರಿದಂತೆ ಹಲವು ಪ್ರಮುಖ ನಾಯಕರುಗಳು ಉಪಸ್ಥಿತರಿದ್ದರು.

Write A Comment