ಕರ್ನಾಟಕ

ಖದೀಮರಿಗೆ ಗಾಳ : ಎಡಬಿಡದ ಸಿಐಡಿ ತನಿಖೆ ಆಸಾಮಿಗಳ ಸುಳಿವು

Pinterest LinkedIn Tumblr

puc-examfiಬೆಂಗಳೂರು,ಏ,೧-ದ್ವಿತೀಯ ಪಿಯುಸಿ ರಸಾಯನಶಾಸ್ತ್ರ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದ ತನಿಖೆಯನ್ನು ತೀವ್ರಗೊಳಿಸಿರುವ ಸಿಐಡಿಯ ವಿಶೇಷ ತನಿಖಾತಂಡದ ಅಧಿಕಾರಿಗಳು ಶಿಕ್ಷಣ ಇಲಾಖೆಯ ಅಧಿಕಾರಿಗಳು ಸೇರಿ ೨೦ ಮಂದಿಯನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಿದ್ದಾರೆ.
ರಸಾಯನಶಾಸ್ತ್ರದ ಪ್ರಶ್ನೆಪತ್ರಿಕೆ ಎರಡನೇ ಬಾರಿಗೆ ಸೋರಿಕೆಯ ಜಾಡು ಹಿಡಿದು ಕಾರ್ಯಾಚರಣೆ ನಡೆಸಿದ ಅಧಿಕಾರಿಗಳು ಪಿಯು ಮಂಡಳಿಯ ಪರೀಕ್ಷಾ ವಿಭಾಗದ ಇಬ್ಬರು ಸೇರಿದಂತೆ ಶಿಕ್ಷಣ ಇಲಾಖೆಯ ೨೦ ಮಂದಿಯನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಿ ಮಹತ್ವದ ಮಾಹಿತಿಯನ್ನು ಸಂಗ್ರಹಿಸಿದ್ದಾರೆ.
ವಶಕ್ಕೆ ತೆಗೆದುಕೊಂಡಿರುವ ಪಿಯು ಮಂಡಳಿಯ ಪರೀಕ್ಷಾ ವಿಭಾಗದ ಇಬ್ಬರು ಸೇರಿ ೨೦ ಮಂದಿ ಪ್ರಶ್ನೆ ಪತ್ರಿಕೆ ಸೋರಿಕೆಯ ಹಿಂದೆ ದೊಡ್ಡ ಜಾಲವೇ ಇರುವುದು ಹಲವು ವರ್ಷಗಳಿಂದ ಇದೇ ದಂಧೆ ನಡೆಸುತ್ತಿರುವುದು ಅಲ್ಲದೇ ಅವರಿಗೆ ಪ್ರಭಾವಿ ವ್ಯಕ್ತಿಗಳ ಬೆಂಬಲವಿರುವುದು ವಿಚಾರಣೆಯಲ್ಲಿ ತಿಳಿದುಬಂದಿದೆ.
ವಶಕ್ಕೆ ತೆಗೆದುಕೊಂಡಿರುವವರು ನೀಡಿರುವ ಮಾಹಿತಿ ಆಧರಿಸಿ ಸಿಐಡಿಯ ಉಪ ಪೊಲೀಸ್ ಮಹಾ ನಿರೀಕ್ಷಕರಾದ (ಡಿಐಜಿ) ಸೋನಿಯಾ ನಾರಂಗ್ ಮಾರ್ಗದರ್ಶನದಲ್ಲಿ ಎಸ್‌ಪಿ ಮಾರ್ಟಿನ್ ನೇತೃತ್ವದ ವಿಶೇಷ ತನಿಖಾ ತಂಡದ ಅಧಿಕಾರಿಗಳು ಹಗಲಿರುಳೆನ್ನದೆ ಬೆಂಗಳೂರು ನಗರ,ತುಮಕೂರು ಆನೇಕಲ್,ಮಾಲೂರು ಚಿಕ್ಕಮಗಳೂರು, ಕೋಲಾರ,ಸೇರಿದಂತೆ ಹಲವೆಡೆ ಕಾರ್ಯಾಚರಣೆ ನಡೆಸಿ ಪ್ರಶ್ನೆ ಪತ್ರಿಕೆ ಸೋರಿಕೆಯ ಜಾಲದಲ್ಲಿ ಭಾಗಿಯಾಗಿರುವವರಿಗಾಗಿ ಶೋಧ ನಡೆಸಿದ್ದಾರೆ.
ಇಲ್ಲಿಯವರೆಗಿನ ಶೋಧದಲ್ಲಿ ೨೦ ಮಂದಿ ಪತ್ತೆಯಾಗಿದ್ದು ಅವರನ್ನು ರಹಸ್ಯ ಸ್ಥಳದಲ್ಲಿ ವಿಚಾರಣೆಗೊಳಪಡಿಸಲಾಗಿದೆ ಅವರು ನೀಡುವ ಮಾಹಿತಿ ಆಧರಿಸಿ ಇನ್ನೂ ಕೆಲವರನ್ನು ವಶಕ್ಕೆ ತೆಗೆದುಕೊಳ್ಳಲು ಅಧಿಕಾರಿಗಳು ಕಾರ್ಯಾಚರಣೆ ನಡೆಸಿದ್ದಾರೆ ವಾಟ್ಸಾಪ್‌ನಲ್ಲಿ ಪ್ರಶ್ನೆ ಪತ್ರಿಕೆಯು ಒಬ್ಬರಿಂದ ಒಬ್ಬರಿಗೆ ರವಾನೆಯಾಗಿರುವುದರಿಂದ ಮೊಬೈಲ್ ಸಂಖ್ಯೆಗಳನ್ನು ಅಧುನಿಕ ತಂತ್ರಜ್ಞಾನದ ನೆರವಿನಿಂದ ಪತ್ತೆ ಮಾಡಿ ಅವರನ್ನು ವಿಚಾರಣೆಗೊಳಪಡಿಸಲು ಅಧಿಕಾರಿಗಳು ಮುಂದಾಗಿದ್ದಾರೆ.
ರಸಾಯನ ಶಾಸ್ತ್ರ ಮರುಪರೀಕ್ಷೆಯು ಏ.೧೨ಕ್ಕೆ ನಿಗಧಿಯಾಗಿರುವುದರಿಂದ ಅಷ್ಟರೊಳಗೆ ವಿದ್ಯಾರ್ಥಿಗಳಿಗೆ ತೊಂದರೆಯಾಗದಂತೆ ಸೋರಿಕೆಯಲ್ಲಿ ಭಾಗಿಯಾಗಿರುವವರನ್ನು ಪತ್ತೆಮಾಡಿ ಬಂಧಿಸಲು ತನಿಖಾಧಿಕಾರಿಗಳು ಕಾರ್ಯೋನ್ಮುಖರಾಗಿದದ್ದಾರೆ.ನಿನ್ನೆಯಷ್ಟೇ ತುಮಕೂರಿನಲ್ಲಿ ಇಬ್ಬರನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಿದ್ದ ಅಧಿಕಾರಿಗಳೂ ಅವರು ನೀಡಿರುವ ಮಾಹಿತಿ ಆಧರಿಸಿ ೨೦ ಮಂದಿಯನ್ನು ವಶಕ್ಕೆ ತೆಗೆದುಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಪ್ರಶ್ನೆಪತ್ರಿಕೆ ಸೋರಿಕೆ ಸಂಬಂಧ ಕೆಲವರನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಲಾಗಿದ್ದು ಇಲ್ಲಿಯವರೆಗೆ ಯಾರನ್ನೂ ಬಂಧಿಸಿಲ್ಲ ಎಂದು ಸಿಐಡಿಯ ಹಿರಿಯ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ಈ ಮಧ್ಯೆ ವೇತನ ಹೆಚ್ಚಳಕ್ಕೆ ಆಗ್ರಹಿಸಿ ಉಪನ್ಯಾಸಕರು ಪಿಯು ಪರೀಕ್ಷೆಯ ಉತ್ರ ಪತ್ರಿಕೆಯ ಮೌಲ್ಯಮಾಪನವನ್ನು ಬಹಿಷ್ಕರಿಸಲು ನಿರ್ಧರಿಸಿರುವುದರಿಂದ ಶಿಕ್ಷಣ ಸಚಿವರಿಗೆ ಹೊಸ ಬಿಕ್ಕಟ್ಟು ಎದುರಾಗಿದೆ ಬಹಿಷ್ಕಾರಕ್ಕೆ ಮುಂದಾಗಿರುವ ಉಪನ್ಯಾಸಕರ ಮನವೊಲಿಸಲು ಸರ್ಕಾರ ಮುಂದಾಗಿದೆ
ಪ್ರತಿಭಟನೆ ತೀವ್ರ
ನಗರದ ಪಿಯು ಮಂಡಳಿ ಕಚೇರಿ ಮುಂಭಾಗ ವಿದ್ಯಾರ್ಥಿಗಳು ಪೋಷಕರು ವಿದ್ಯಾರ್ಥಿ ಸಂಘಟನೆಗಳ ಪ್ರತಿಭಟನೆಗಳು ತೀವ್ರಗೊಂಡಿದ್ದು ಪಿಯುಸಿ ಪ್ರಶ್ನೆ ಪತ್ರಿಕೆ ಸೋರಿಕೆಯ ನೈತಿಕ ಹೊಣೆ ಹೊತ್ತು ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ ಅವರ ರಾಜೀನಾಮೆಗೆ ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ.
ಎಬಿವಿಪಿ ಸೇರಿದಂತೆ ವಿವಿಧ ವಿದ್ಯಾರ್ಥಿ ಸಂಘಟನೆಗಳ ಕಾರ್ಯಕರ್ತರು ಪ್ರತಿಭಟನೆ ನಡೆಸಿ, ಮಂಡಳಿಗೆ ನುಗ್ಗಲು ಪ್ರಯತ್ನಿಸಿದರು ತಕ್ಷಣ ಪೊಲೀಸರು ವಿದ್ಯಾರ್ಥಿಗಳನ್ನು ವಶಕ್ಕೆ ಪಡೆದರು. ಕೆಲವು ವಿದ್ಯಾರ್ಥಿಗಳು ಬ್ಯಾರಿಕೇಡ್ ಹತ್ತಲು ಪ್ರಯತ್ನಿಸಿದಾಗ ತಳ್ಳಾಟ, ನೂಕಾಟ ನಡೆಯಿತು. ಪೊಲೀಸರು ವಿದ್ಯಾರ್ಥಿಗಳನ್ನು ಬಲವಂತವಾಗಿ ಎಳೆದೊಯ್ದು ಪೊಲೀಸ್ ವಾಹನದಲ್ಲಿ ಕರೆದೊಯ್ದರು.
ಪಿಯು ಪ್ರಶ್ನೆ ಪತ್ರಿಕೆ ಸೋರಿಕೆಗೆ ಸಚಿವರೇ ನೇರ ಹೊಣೆ. ಈ ಹಿಂದೆಯೂ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿತ್ತು. ಆಗಲೂ ಅವರು ಕಠಿಣ ಕ್ರಮಕೈಗೊಳ್ಳಲಿಲ್ಲ. ಇದರಿಂದಾಗಿ ಎರಡನೇ ಬಾರಿಗೆ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದೆ. ಅವರ ನಿರ್ಲಕ್ಷ್ಯ ಹಾಗೂ ಉದಾಸೀನವೇ ಇದಕ್ಕೆ ಕಾರಣ. ಆದ್ದರಿಂದ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು ಎಂದು ಎಬಿವಿಪಿ ಮುಖಂಡ ರಾಜೇಶ್ ಗುರಾಣಿ ಆಗ್ರಹಿಸಿದರು.
ಮತ್ತೆ ಮತ್ತೆ ಪರೀಕ್ಷೆ ಬರೆಯಲು ಸಾಧ್ಯವಿಲ್ಲ. ಈಗಾಗಲೇ ವಿದ್ಯಾರ್ಥಿಗಳು ಒತ್ತಡದಲ್ಲಿದ್ದು, ಪಿಯು ಪರೀಕ್ಷೆ ಬರೆದ ಬಳಿಕ ಸಿಇಟಿ, ಜೆಇಇ ಮುಂತಾದ ಸ್ಪರ್ಧಾತ್ಮಕ ಪರೀಕ್ಷೆ ಬರೆಯಬೇಕಿದೆ. ಇಂತಹ ವೇಳೆ ರಸಾಯನ ಶಾಸ್ತ್ರ ಪರೀಕ್ಷೆಯನ್ನು ಮತ್ತ ಬರೆಯುವುದು ಕಷ್ಟ ಎಂದು ಹೇಳಿದರು.
ಆರೋಪಿಗಳನ್ನು ತಕ್ಷಣ ಬಂಧಿಸಬೇಕು. ಇನ್ನು ಮುಂದೆ ಇಂತಹ ಘಟನೆ ನಡೆಯದಂತೆ ಎಚ್ಚರಿಕೆ ವಹಿಸಬೇಕು ಎಂದು ಒತ್ತಾಯಿಸಿದರು.ಪಿಯು ಮಂಡಳಿಯ ಆವರಣದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.

Write A Comment