ಕರ್ನಾಟಕ

ಸಿದ್ದಗಂಗಾ ಶಿವಕುಮಾರ ಸ್ವಾಮೀಜಿಗೆ 109ನೇ ಹುಟ್ಟುಹಬ್ಬದ ಸಂಭ್ರಮ

Pinterest LinkedIn Tumblr

Siddaganga-Swamiji3

ತುಮಕೂರು: ನಡೆದಾಡುವ ದೇವರು, ತ್ರಿವಿಧ ದಾಸೋಹಿ, ಸಿದ್ದಗಂಗಾ ಕ್ಷೇತ್ರದ ಶ್ರೀ ಶಿವಕುಮಾರ ಸ್ವಾಮೀಜಿಯವರಿಗೆ ಇಂದು 109ನೇ ವರ್ಷದ ಹುಟ್ಟುಹಬ್ಬದ ಸಂಭ್ರಮ. ಶ್ರೀಗಳ ಹುಟ್ಟುಹಬ್ಬ ಮಠ ಮತ್ತು ತುಮಕೂರು ನಗರದಲ್ಲಿ ಹಬ್ಬದ ವಾತಾವರಣ ನಿರ್ಮಿಸಿದೆ. ಶ್ರೀಗಳ ಜನ್ಮದಿನದ ಹಿನ್ನೆಲೆಯಲ್ಲಿ ಸಾವಿರಾರು ಜನ ಮಠದತ್ತ ಹೆಜ್ಜೆ ಹಾಕುತ್ತಿದ್ದಾರೆ.

ಸ್ವಾಮೀಜಿಗಳು ಎಂದಿನಂತೆ ಬೆಳಗಿನ ಜಾವ 5 ಗಂಟೆಗೆ ತಮ್ಮ ಶಿಷ್ಯರೊಂದಿಗೆ ಇಷ್ಟಲಿಂಗಪೂಜೆ ನೆರವೇರಿಸಿದರು. 1930 ಮಾರ್ಚ್ 3ರಂದು ಮಠದ ಪಿಠಾಧೀಪತಿಗಳಾಗಿ ಜವಾಬ್ದಾರಿ ಹೊತ್ತ ಶ್ರೀಗಳ ಸೇವೆ, ಕಳೆದ 86 ವರ್ಷಗಳಿಂದ ನಿರಂತರ ಸಾಗಿದೆ.

109 ವರ್ಷವಾದರೂ ಇಂದಿಗೂ ತಮ್ಮ ದಿನನಿತ್ಯದ ಕೆಲಸ ಕಾರ್ಯಗಳಲ್ಲಿ ಯಾವುದೇ ಬದಲಾವಣೆ ಆಗಿಲ್ಲ ಎಂಬುದು ಅಚ್ಚರಿಯ ವಿಷಯ. ಇಂತಹ ಮಹಾನ್ ಚೇತನದ ಹುಟ್ಟುಹಬ್ಬದಂದು ಆಶೀರ್ವಾದ ಪಡೆಯಲು ಗಣ್ಯರು ಸೇರಿದಂತೆ ನಾಡಿನ ಮೂಲೆ ಮೂಲೆಯಿಂದ ಲಕ್ಷಾಂತರ ಜನ ಭಕ್ತಾದಿಗಳು ಇಂದು ಮಠಕ್ಕೆ ಆಗಮಿಸಿ ಶ್ರೀಗಳ ದರ್ಶನ ಪಡೆಯುತ್ತಾರೆ.

ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ, ಶಿವಕುಮಾರಸ್ವಾಮೀಗಳಿಗೆ ಹುಟ್ಟುಹಬ್ಬದ ಶುಭಾಶಯ ಕೋರಿ ಆಶೀರ್ವಾದ ಪಡೆದರು. ಬಳಿಕ ಮಾತನಾಡಿದ ಅವರು, ಶ್ರೀಗಳ ಸೇವೆ ಅನನ್ಯವಾದದ್ದು ಎಂದು ಸ್ಮರಿಸಿದರು. ರೈತರ ಬಗ್ಗೆ ಅವರ ಖಾಳಜಿ, ಸಮಾಜ ಸೇವೆಯನ್ನು ಮನಗಂಡು ಕೇಂದ್ರ ಸರ್ಕಾರ ಶ್ರೀಗಳಿಗೆ ಭಾರತ ರತ್ನ ಪ್ರಶಸ್ತಿ ಕೊಡಬೇಕೆಂದು ಒತ್ತಾಯ ಮಾಡಿದರು.

Write A Comment