ಕರ್ನಾಟಕ

‘ಹಾಲಿ ಉಸ್ತುವಾರಿ ದಿಗ್ವಿಜಯ ಸಿಂಗ್‌ ಅವರನ್ನು ಬದಲಾಯಿಸಿ’

Pinterest LinkedIn Tumblr

Digvijay-Singh--650ಬೆಂಗಳೂರು: ಹಾಲಿ ಉಸ್ತುವಾರಿ ದಿಗ್ವಿಜಯ ಸಿಂಗ್‌ ಅವರನ್ನು ಬದಲಾಯಿಸಿ, ಆ ಸ್ಥಾನಕ್ಕೆ ಕ್ರಿಯಾಶೀಲ ಹಾಗೂ ಪ್ರಭಾವಿ ನಾಯಕರನ್ನು ನೇಮಕ ಮಾಡಬೇಕು. ಸಂಪುಟದಲ್ಲಿನ 25 ಸಚಿವರನ್ನು ಕೈಬಿಟ್ಟು, ಅವರನ್ನು ಪಕ್ಷದ ಕೆಲಸಕ್ಕೆ ಕಳುಹಿಸಬೇಕು.ಆದ್ಯತೆ ನೀಡುತ್ತಿಲ್ಲ ಎಂಬ ಪ್ರಬಲ ವರ್ಗಗಳು, ಪ್ರಾದೇಶಿಕ ಅಸಮಾಧಾನ ನೀಗಬೇಕು. ತನ್ಮೂಲಕ ಹೊಸ ಸಂಪುಟದಲ್ಲಿ ಹೊಸ ಮುಖಗಳಿಗೆ ಆದ್ಯತೆ ನೀಡಬೇಕು.

ಈ ಪ್ರಮುಖ ಬೇಡಿಕೆಗಳು ಸೇರಿದಂತೆ ಒಟ್ಟು ಎಂಟು ಬೇಡಿಕೆಗಳನ್ನು ಈಡೇರಿಸುವಂತೆ ರಾಜ್ಯ ಕಾಂಗ್ರೆಸ್‌ ನಾಯಕತ್ವವನ್ನು ಒತ್ತಾಯಿಸುವುದು ಮತ್ತು ತಮ್ಮ ಮನವಿಗೆ ಸ್ಪಂದಿಸುವಂತೆ ಹೈಕಮಾಂಡ್‌ ಕೋರಲು ಶೀಘ್ರವೇ ದಿಲ್ಲಿಗೆ ನಿಯೋಗವೊಂದನ್ನು ಒಯ್ಯುವ ತೀರ್ಮಾನವನ್ನು ಕಾಂಗ್ರೆಸ್‌ನ ಸಮಾನ ಮನಸ್ಕ ಶಾಸಕರ ಸಭೆಯಲ್ಲಿ ಕೈಗೊಳ್ಳಲಾಗಿದೆ. ಯಶವಂತಪುರ ಶಾಸಕ ಎಸ್‌.ಟಿ. ಸೋಮಶೇಖರ್‌ ನೇತೃತ್ವದಲ್ಲಿ ಸುಮಾರು 28 ಸಮಾನ ಮನಸ್ಕ ಶಾಸಕರು ಬುಧವಾರ ಸಂಜೆ ಸಭೆ ಸೇರಿ ಈ ತೀರ್ಮಾನಗಳನ್ನು ಕೈಗೊಂಡಿದ್ದಾರೆ.

ಕುತೂಹಲಕಾರಿ ಸಂಗತಿಯೆಂದರೆ, ಸಮಾನ ಮನಸ್ಕ ಶಾಸಕರ ಬೇಡಿಕೆ ಪಟ್ಟಿಯಲ್ಲಿ ರಾಜ್ಯ ಉಸ್ತುವಾರಿ ಹುದ್ದೆಗೆ ಕ್ರಿಯಾಶೀಲ ಹಾಗೂ ಪ್ರಭಾವಿ ನಾಯಕರನ್ನು ನೇಮಕ ಮಾಡಬೇಕು ಎಂದು ರಾಹುಲ್‌ ಗಾಂಧಿ ಅವರನ್ನು ಆಗ್ರಹಿಸುವ ಅಂಶವೂ ಇದೆ. ಇದರರ್ಥ ಹಾಲಿ ಉಸ್ತುವಾರಿ ದಿಗ್ವಿಜಯ ಸಿಂಗ್‌ ಅವರನ್ನು ಬದಲಾಯಿಸಬೇಕು ಎಂದೇ ಆಗುತ್ತದೆ. ಶಾಸಕರು ಸಚಿವ ಸಂಪುಟದಲ್ಲಿ ತಮಗೆ ಸ್ಥಾನಮಾನ ನೀಡಬೇಕು, ಕ್ಷೇತ್ರದ ಕೆಲಸಗಳು ಆಗಬೇಕು ಎಂಬಂತಹ ಸಾಮಾನ್ಯ ಬೇಡಿಕೆಗಳ ಜತೆಗೆ ಕಾರ್ಯಕರ್ತರಿಗೆ ಅಧಿಕಾರ ನೀಡಲು ನಿಗಮ-ಮಂಡಳಿಗಳ ನಿರ್ದೇಶಕ, ಸದಸ್ಯ ನೇಮಕಾತಿಯನ್ನು ಶೀಘ್ರ ಮಾಡಬೇಕು ಎಂದು ಒತ್ತಾಯಿಸುವ ತೀರ್ಮಾನ ಕೈಗೊಂಡಿದ್ದಾರೆ.

ಆದರೆ, ಈ ಸಭೆಯ ಪ್ರಮುಖ ಉದ್ದೇಶ ರಾಜ್ಯ ಸಚಿವ ಸಂಪುಟಕ್ಕೆ ಮೇಜರ್‌ ಸರ್ಜರಿ ನಡೆಯಬೇಕು ಎಂಬುದು. ಹಾಲಿ ಸಚಿವ ಸಂಪುಟದಲ್ಲಿರುವ 25 ಸಚಿವರನ್ನು ಕೈಬಿಡಬೇಕು. ಕೈ ಬಿಡುವ ಸಚಿವರನ್ನು ಒಳಗೊಂಡ ಒಂದು ಪ್ರಬಲ ತಂಡವನ್ನು ಕಟ್ಟಬೇಕು. ಈ ತಂಡಕ್ಕೆ 2018ರಲ್ಲಿ ಮತ್ತೆ ಸರಕಾರವನ್ನು ಅಧಿಕಾರಕ್ಕೆ ತರಲು ಪಕ್ಷ ಸಂಘಟನೆಯ ಹೊಣೆ ನೀಡಬೇಕು.

ಸಚಿವ ಸಂಪುಟದಲ್ಲಿ ಪ್ರಬಲ ವರ್ಗಗಳಿಗೆ ಆದ್ಯತೆಯಿಲ್ಲ ಎಂಬ ಕೊರಗು ನಿವಾರಿಸಬೇಕು. ಪ್ರಾದೇಶಿಕ ಅಸಮಾನತೆ ನೀಗಿಸಬೇಕು ಮತ್ತು ಎಲ್ಲಕ್ಕಿಂತ ಮುಖ್ಯವಾಗಿ ಕ್ಷೇತ್ರದ ಕಾರ್ಯ ಗಳಿಗೆ ಹೆಚ್ಚಿನ ಅನುದಾನ ನೀಡಬೇಕು. ಇದಕ್ಕಾಗಿ ಶಿಷ್ಟಾಚಾರಗಳನ್ನು ಬದಿಗೊತ್ತಿ ನಿರ್ಧಾರಗಳನ್ನು ಕೈಗೊಳ್ಳಬೇಕು ಎಂದು ರಾಜ್ಯ ನಾಯಕತ್ವವನ್ನು ಒತ್ತಾಯಿಸಲು ಸಭೆಯಲ್ಲಿ ತೀರ್ಮಾನಿಸಲಾಯಿತು.

ಸಭೆಯಲ್ಲಿ ಪಾಲ್ಗೊಂಡ ಶಾಸಕರಿವರು
ಎಸ್‌.ಟಿ. ಸೋಮಶೇಖರ್‌, ಭೈರತಿ ಬಸವರಾಜು, ಮುನಿರತ್ನ, ಪ್ರಿಯಕೃಷ್ಣ, ಕೆ.ಎನ್‌. ರಾಜಣ್ಣ, ಷಡಕ್ಷರಿ, ಎನ್‌.ವೈ. ಗೋಪಾಲಕೃಷ್ಣ, ಎಂ.ಟಿ.ಬಿ. ನಾಗರಾಜ್‌, ಡಿ. ಸುಧಾಕರ್‌, ಆರ್‌.ವಿ. ದೇವರಾಜ್‌, ಶಿವಾನಂದ ಪಾಟೀಲ್‌, ಎಂ. ಕೃಷ್ಣಪ್ಪ, ಯಶವಂತ ಪಾಟೀಲ್‌, ಶಾಂತನಗೌಡ, ಶಿವಣ್ಣ, ವೆಂಕಟರಮಣಪ್ಪ, ಪಿ.ಎಂ. ನರೇಂದ್ರಸ್ವಾಮಿ, ಬಸವರಾಜ ಪಾಟೀಲ್‌, ಚಳ್ಳಕೆರೆ ರಘುಮೂರ್ತಿ, ಆನೇಕಲ್‌ ಶಿವಣ್ಣ, ಲೋಬೊ, ಪ್ರಸನ್ನಕುಮಾರ್‌, ಶಿವರಾಂ ಹೆಬ್ಟಾರ್‌, ವಾಸು, ಸುಬ್ಟಾರೆಡ್ಡಿ, ಶಿವಮೂರ್ತಿ ಹಾಗೂ ಸಿ.ಪಿ.ಯೋಗೇಶ್ವರ್‌.
-ಉದಯವಾಣಿ

Write A Comment