ಕರ್ನಾಟಕ

ಪರೀಕ್ಷೆಗೆ ದೊರೆಯದ ಅವಕಾಶ: ಪ್ರತಿಭಟನೆ

Pinterest LinkedIn Tumblr

SSLC students of Swamy Vivekananda School in Thanisandra in protest against school management for not getting their hall tickets for the for the class ten exammination on Wednesday. DH Photo.

ಬೆಂಗಳೂರು: ಅನಧಿಕೃತ ಶಾಲೆ ಎನ್ನುವ ಕಾರಣಕ್ಕೆ ಪ್ರೌಢ ಶಿಕ್ಷಣ ಮಂಡಳಿಯು ಪ್ರವೇಶ ಪತ್ರ ನೀಡದ ಕಾರಣ ಹೆಣ್ಣೂರು ಸಮೀಪದ ಸಾರಾಯಿಪಾಳ್ಯದ ಸ್ವಾಮಿ ವಿವೇಕಾನಂದ ಇಂಗ್ಲಿಷ್‌ ಶಾಲೆಯ 30 ವಿದ್ಯಾರ್ಥಿಗಳು ಎಸ್ಸೆಸ್ಸೆಲ್ಸಿ ಪರೀಕ್ಷೆಯಿಂದ ವಂಚಿತರಾಗಿದ್ದಾರೆ.
ಪ್ರವೇಶ ಪತ್ರ ಸಿಗದ ವಿದ್ಯಾರ್ಥಿಗಳು ಮತ್ತು ಅವರ ಪೋಷಕರು ಬುಧವಾರ ಬೆಳಿಗ್ಗೆ ಶಾಲೆಯ ಎದುರು ಪ್ರತಿಭಟನೆ ನಡೆಸಿ ಶಾಲಾ ಆಡಳಿತ ಮಂಡಳಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
‘ಪರೀಕ್ಷೆಗೆ ಮೂರು ದಿನ ಇದ್ದಾಗಲೇ ಪ್ರವೇಶ ಪತ್ರ ನೀಡುವಂತೆ ಕೇಳಲಾಗಿತ್ತು. ‘ಕ್ಷೇತ್ರ ಶಿಕ್ಷಣಾಧಿಕಾರಿಗಳ ಸಹಿ ಆಗಬೇಕು. ಆದ ನಂತರ ಕೊಡಲಾಗುವುದು’ ಎಂದು ಶಾಲೆಯ ಪ್ರಾಂಶುಪಾಲ ನಾಗರಾಜ್ ಹೇಳಿದ್ದರು’ ಎಂದು ಪೋಷಕರೊಬ್ಬರು ಹೇಳಿದರು.
‘ವಿದ್ಯಾರ್ಥಿಗಳು ಪರೀಕ್ಷೆಗೆ ಸಿದ್ಧರಾಗಿ ಶಾಲೆಗೆ ಬಂದು ಪ್ರವೇಶ ಪತ್ರ ಕೇಳಿದರೆ ಸಿಬ್ಬಂದಿ ಸರಿಯಾಗಿ ಪ್ರತಿಕ್ರಿಯೆ ನೀಡಲಿಲ್ಲ. ನಾಗರಾಜ್‌ ಅವರಿಗೆ ಕರೆ ಮಾಡಿದಾಗ ಪ್ರೌಢ ಶಿಕ್ಷಣ ಮಂಡಳಿ ಪ್ರವೇಶ ಪತ್ರ ನೀಡಿಲ್ಲ ಎಂದು ಹೇಳಿದರು. ಇದರಿಂದ ಮಕ್ಕಳಿಗೆ ಪರೀಕ್ಷೆ ಬರೆಯಲು ಸಾಧ್ಯವಾಗಿಲ್ಲ ಹೀಗಾಗಿ ಅವರ ಭವಿಷ್ಯಕ್ಕೆ ತೊಂದರೆಯಾಗಲಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಅನಧಿಕೃತ ಶಾಲೆ: ‘ಸ್ವಾಮಿ ವಿವೇಕಾನಂದ ಇಂಗ್ಲಿಷ್‌ ಶಾಲೆಯು 2012–13ರಲ್ಲಿ ಆರಂಭವಾಗಿದೆ. ಒಂದರಿಂದ ಐದನೇ ತರಗತಿಗಳನ್ನು ನಡೆಸಲು ಮಾತ್ರ ಶಾಲೆ ಅನುಮತಿ ಪಡೆದುಕೊಂಡಿದೆ’ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ (ಬೆಂಗಳೂರು ದಕ್ಷಿಣ–4) ಎಸ್.ಎಂ.ರಮೇಶ್‌ ಹೇಳಿದರು.
‘ಶಾಲೆಯ ಆಡಳಿತ ಮಂಡಳಿಯು ಈ ವರ್ಷ 6ರಿಂದ 10ರವರೆಗೆ ತರಗತಿಗಳನ್ನು ನಡೆಸಲು ಪ್ರೌಢ ಶಿಕ್ಷಣ ಮಂಡಳಿಗೆ ಅರ್ಜಿ ಸಲ್ಲಿಸಿದೆ. ಆದರೆ, ಅದಕ್ಕೆ ಅನುಮತಿ ಸಿಕ್ಕಿಲ್ಲ. ಹೀಗಾಗಿ ವಿಜಯ್‌ಕುಮಾರ್ ಎಂಬ ಮಧ್ಯವರ್ತಿಯಿಂದ ನಕಲಿ ದಾಖಲೆಪತ್ರಗಳನ್ನು ಸೃಷ್ಟಿಸಿ, ಮಂಡಳಿಯಿಂದ ಅನುಮತಿ ಸಿಕ್ಕಿದೆ ಎನ್ನುವಂತೆ ಪೋಷಕರನ್ನು ನಂಬಿಸಿ ವಂಚಿಸಿದ್ದಾರೆ’ ಎಂದು ದೂರಿದರು.
‘ಶಾಲಾ ಆಡಳಿತ ಮಂಡಳಿಯು ವಿದ್ಯಾರ್ಥಿಗಳಿಂದ ಪರೀಕ್ಷಾ ಶುಲ್ಕವನ್ನು ವಸೂಲಿ ಮಾಡಿದೆ. ಈ ಸಂಬಂಧ ಸಾರ್ವಜನಿಕ ಶಿಕ್ಷಣ ಇಲಾಖೆಗೆ ವರದಿ ಸಲ್ಲಿಸಲಾಗುವುದು’ ಎಂದು ಅವರು ಹೇಳಿದರು.
ಪ್ರಾಂಶುಪಾಲ ನಾಗರಾಜ್‌ ಸೆರೆ
ಅನಧಿಕೃತ ಶಾಲೆ ನಡೆಸುತ್ತಿರುವ ಸಂಬಂಧ ಕ್ಷೇತ್ರ ಶಿಕ್ಷಣಾಧಿಕಾರಿ ರಮೇಶ್ ಆಡಳಿತ ಮಂಡಳಿ ವಿರುದ್ಧ ಹೆಣ್ಣೂರು ಠಾಣೆಗೆ ದೂರು ನೀಡಿದ್ದರು. ಸಂಬಂಧ ವಂಚನೆ ಉದ್ದೇಶಕ್ಕಾಗಿ ನಕಲಿ ದಾಖಲೆಪತ್ರಗಳ ಸೃಷ್ಟಿ (ಐಪಿಸಿ 468), ವಂಚನೆ (ಐಪಿಸಿ 420) ಮತ್ತು ನಕಲಿ ಸಹಿ (ಐಪಿಸಿ 465) ಆರೋಪದಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ಪ್ರಾಂಶುಪಾಲ ನಾಗರಾಜ್‌, ಮಧ್ಯವರ್ತಿ ವಿಜಯ್‌ಕುಮಾರ್ ಎಂಬಾತನನ್ನು ಬಂಧಿಸಲಾಗಿದೆ’ ಎಂದು ಪೂರ್ವ ವಿಭಾಗದ ಡಿಸಿಪಿ ಸತೀಶ್‌ಕುಮಾರ್ ಹೇಳಿದರು.

Write A Comment