ಕರ್ನಾಟಕ

ರೈತರ ಕಳಸಾ ಹೋರಾಟ ತೀವ್ರ; ಹುಬ್ಬಳ್ಳಿಯಲ್ಲಿ 7 ತಾಸು ರೈಲು ತಡೆ

Pinterest LinkedIn Tumblr

Farmers-strike-15-3ಹುಬ್ಬಳ್ಳಿ: ಮಹದಾಯಿ ನದಿ ನೀರು ಯೋಜನೆ ಜಾರಿಗೆ ಆಗ್ರಹಿಸಿ ಉತ್ತರ ಕರ್ನಾಟಕದ ರೈತರು ನಡೆಸುತ್ತಿರುವ ಹೋರಾಟ ತೀವ್ರಗೊಂಡಿದ್ದು, ಯೋಜನೆಯ ಶೀಘ್ರ ಜಾರಿಗೆ ಆಗ್ರಹಿಸಿ ಕಳಸಾ-ಬಂಡೂರಿ ನಾಲಾ ಹೋರಾಟ ಸಮಿತಿಯ ಸದಸ್ಯರು ಮಂಗಳವಾರ ಹುಬ್ಬಳ್ಳಿಯಲ್ಲಿ 7 ತಾಸು ರೈಲು ತಡೆ ನಡೆಸಿದರು. ಈ ಮಾರ್ಗದಲ್ಲಿ ಸಂಚರಿಸುವ 14 ರೈಲುಗಳನ್ನು ತಡೆದು ತಮ್ಮ ಆಕ್ರೋಶ ವ್ಯಕ್ತಪಡಿಸಿದರು.

ಇದೇ ವೇಳೆ, ಪ್ರತಿಭಟನೆ ಹಿನ್ನೆಲೆಯಲ್ಲಿ ಅಧಿಕಾರಿಗಳು ಮತ್ತೆ 6 ರೈಲುಗಳ ಓಡಾಟ ರದ್ದುಗೊಳಿಸಿದರು. ಈ ವೇಳೆ, ಪ್ರತಿಭಟನಾಕಾರರು ಮತ್ತು ಪೊಲೀಸರ ಮಧ್ಯೆ ಚಕಮಕಿ ನಡೆದು, ಕೆಲ ರೈತರು ಪೊಲೀಸರ ಮೇಲೆ ಖಾರದ ಪುಡಿ ಎರಚಿ, ಕಲ್ಲುಗಳನ್ನು ತೂರಿದರು. ನಾಲ್ಕು ಬಸ್‌ಗಳನ್ನು ಜಖಂಗೊಳಿಸಿದರು.

ಕಳಸಾ ಹೋರಾಟ ತೀವ್ರ: 7 ತಾಸು ರೈಲು ತಡೆ 1ನೇ ಪುಟದಿಂದ ಘರ್ಷಣೆಯಲ್ಲಿ ಒಬ್ಬ ಇನ್ಸ್‌ಸ್ಪೆಕ್ಟರ್‌ ಹಾಗೂ ಇಬ್ಬರು ಪೇದೆಗಳು ಗಾಯಗೊಂಡಿದ್ದಾರೆ. ಘಟನೆ ಸಂಬಂಧ ಪೊಲೀಸರು 30ಕ್ಕೂ ಹೆಚ್ಚು ರೈತರನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಈ ಮಧ್ಯೆ, ಮಧ್ಯಾಹ್ನ ಒಂದು ಗಂಟೆಯಿಂದ ಪ್ರಾರಂಭಗೊಂಡ ರೈಲ್‌ ರೋಖೋ ಚಳವಳಿ,ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಭರವಸೆ ಹಿನ್ನೆಲೆಯಲ್ಲಿ ರಾತ್ರಿ 8ಕ್ಕೆ ಕೊನೆಗೊಂಡಿತು.

7 ತಾಸು 20 ರೈಲುಗಳ ಓಡಾಟ ಬಂದ್‌: ಮಹದಾಯಿ ಯೋಜನೆ ಜಾರಿಗೆ ಆಗ್ರಹಿಸಿ ಕಳಸಾ-ಬಂಡೂರಿ ಹೋರಾಟ ಸಮಿತಿ ಮಂಗಳವಾರ ರೈಲು ತಡೆ ಚಳವಳಿಗೆ ಕರೆ ನೀಡಿತ್ತು. ಈ ಹಿನ್ನೆಲೆಯಲ್ಲಿ ಧಾರವಾಡ, ಹಾವೇರಿ, ಗದಗ, ಬೆಳಗಾವಿ ಹಾಗೂ ಬಾಗಲಕೋಟೆ ಜಿಲ್ಲೆಗಳ ಸಾವಿರಾರು ರೈತರು ಪ್ರತಿಭಟನೆಗೆ ಆಗಮಿಸಿದ್ದರು. ಮಧ್ಯಾಹ್ನ ಒಂದು ಗಂಟೆ ವೇಳೆಗೆ ಹುಬ್ಬಳ್ಳಿ ರೈಲು ನಿಲ್ದಾಣಕ್ಕೆ ನುಗ್ಗಿದ ಪ್ರತಿಭಟನಾಕಾರರು, ರೈಲು ಹಳಿಗಳ ಮೇಲೆ ನಿಂತು ಪ್ರತಿಭಟನೆ ನಡೆಸಿದರು. ಟ್ರ್ಯಾಕ್ಟರ್‌ಗಳನ್ನು ರೈಲು ಹಳಿಗೆ ಅಡ್ಡಲಾಗಿ ನಿಲ್ಲಿಸಿ, ರೈಲ್ವೆ ಹಳಿಗಳ ಮೇಲೆ ಮಲಗಿದರು. ಹುಬ್ಬಳ್ಳಿ-ವಿಜಯವಾಡಾ ಅಮರಾವತಿ ಎಕ್ಸ್ಪ್ರಸ್‌, ಧಾರವಾಡ -ಸೊಲ್ಲಾಪುರ ರೈಲುಗಳನ್ನು ತಡೆದು, ಘೋಷಣೆ ಕೂಗಲಾರಂಭಿಸಿದರು.

ಈ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಬೆಂಗಳೂರು-ಹುಬ್ಬಳ್ಳಿ ಜನಶತಾಬ್ದಿ, ಪಾಂಡಿಚೇರಿ, ಹೈದ್ರಾಬಾದ್‌- ಕೊಲ್ಲಾಪುರ, ಸೊಲ್ಲಾಪುರ-ಹುಬ್ಬಳ್ಳಿ ಇಂಟರ್‌ ಸಿಟಿ, ಹುಬ್ಬಳ್ಳಿ-ಸೊಲ್ಲಾಪುರ ಪ್ಯಾಸೆಂಜರ್‌ ರೈಲುಗಳನ್ನು ನಿಲ್ದಾಣದ ಹೊರವಲಯದಲ್ಲಿ ನಿಲ್ಲಿಸಲಾಯಿತು. ಈ ಎಲ್ಲಾ ರೈಲುಗಳು 7 ತಾಸು ತಡವಾಗಿ ಪ್ರಯಾಣ ಮುಂದುವರಿಸಿದವು. ಇದರಿಂದಾಗಿ ಪ್ರಯಾಣಿಕರು ಪರದಾಡುವಂತಾಯಿತು.

ಸಿಎಂ ಭರವಸೆ: ಈ ಮಧ್ಯೆ, ಸಂಜೆ ಸುಮಾರು ಏಳು ಗಂಟೆ ವೇಳೆಗೆ ಸ್ಥಳಕ್ಕಾಗಮಿಸಿದ ಶಾಸಕ ಎನ್‌.ಎಚ್‌.ಕೋನರೆಡ್ಡಿ ಅವರು ಮುಖ್ಯಮಂತ್ರಿ ಸಿದಟಛಿರಾಮಯ್ಯ ಅವರನ್ನು ಮೊಬೈಲ್‌ ಫೋನ್‌ನಲ್ಲಿ ಸಂಪರ್ಕಿಸಿ, ಪ್ರತಿಭಟನೆ ಬಗ್ಗೆ ಮಾಹಿತಿ ನೀಡಿದರು. ಈ ವೇಳೆ ಮಾತನಾಡಿದ ಸಿದ್ದರಾಮಯ್ಯ, ಏ.1ರಂದು ಈ ಭಾಗದ ರೈತ ಮುಖಂಡರು ಹಾಗೂ ಸರ್ವಪಕ್ಷ ಶಾಸಕರೊಂದಿಗೆ ಚರ್ಚಿಸುವುದಾಗಿ ತಿಳಿಸಿದರು. ಅಲ್ಲದೆ, ಏಪ್ರಿಲ್‌ ಮೊದಲ ವಾರದಲ್ಲಿ ಸರ್ವಪಕ್ಷ ನಿಯೋಗ ಹಾಗೂ ರೈತ ಮುಖಂಡರೊಂದಿಗೆ ದಿಲ್ಲಿಗೆ ತೆರಳಿ ಮತ್ತೂಮ್ಮೆ ಪ್ರಧಾನಿಯನ್ನು ಭೇಟಿ ಮಾಡುವ ಭರವಸೆ ನೀಡಿದರು. ಅಲ್ಲದೆ, ಹೋರಾಟ ಹಿಂತೆಗೆದುಕೊಳ್ಳುವಂತೆ ರೈತರಲ್ಲಿ ತಾವು ಮಾಡಿದ ಮನವಿಯನ್ನು ತಿಳಿಸುವಂತೆ ಸೂಚಿಸಿದರು.

ಲಾಠಿ ಪ್ರಹಾರ: ಈ ವೇಳೆ, ಮುಖ್ಯಮಂತ್ರಿ ಅವರ ಮನವಿಗೆ ಒಂದು ಗುಂಪು ಸ್ಪಂದಿಸಿ, ಪ್ರತಿಭಟನೆಯನ್ನು ವಾಪಸ್‌ ಪಡೆಯಿತು. ಆದರೆ, ಮತ್ತೂಂದು ಗುಂಪು ಪ್ರತಿಭಟನೆ ಮುಂದುವರಿಸಿತು. ಆಗ ಪೊಲೀಸರು ಒತ್ತಾಯಪೂರ್ವಕವಾಗಿ ಪ್ರತಿಭಟನಾಕಾರರನ್ನು ನಿಲ್ದಾಣದ ಆವರಣದಿಂದ ಹೊರದಬ್ಬಿದರು. ಈ ವೇಳೆ, ಪ್ರತಿಭಟನಾಕಾರರು ಮತ್ತು ಪೊಲೀಸರ ಮಧ್ಯೆ ಚಕಮಕಿ ನಡೆದು, ಕೆಲ ರೈತರು ಪೊಲೀಸರ ಮೇಲೆ ಖಾರದ ಪುಡಿ ಎರಚಿ, ಕಲ್ಲು ತೂರಿದರು. ಅಲ್ಲದೆ, ನಾಲ್ಕು ಬಸ್‌ಗಳನ್ನು ಜಖಂಗೊಳಿಸಿದರು. ಘರ್ಷಣೆಯಲ್ಲಿ ಒಬ್ಬ ಇನ್ಸ್‌ಸ್ಪೆಕ್ಟರ್‌ ಹಾಗೂ ಇಬ್ಬರು ಪೇದೆಗಳು ಗಾಯಗೊಂಡರು. ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿ, ಪ್ರತಿಭಟನಾಕಾರರನ್ನು ಚದುರಿಸಿದರು. ಘಟನೆ ಸಂಬಂಧ ಪೊಲೀಸರು 30ಕ್ಕೂ ಹೆಚ್ಚು ರೈತರನ್ನು ವಶಕ್ಕೆ ತೆಗೆದುಕೊಂಡರು.

ಧಾರವಾಡದಲ್ಲಿಯೂ ರೈಲು ತಡೆ: ಈ ಮಧ್ಯೆ, ಬೆಳಗ್ಗೆ 7ರ ವೇಳೆಗೆ ಧಾರವಾಡದಲ್ಲಿ ರೈತರು ಹರಿಪ್ರಿಯಾ ರೈಲನ್ನು ತಡೆದರು. ಇದರಿಂದಾಗಿ ರೈಲು ಸುಮಾರು 10 ನಿಮಿಷ ತಡವಾಗಿ ಸಂಚರಿಸಿತು. ಅಲ್ಲದೆ, ಕುಸುಗಲ್‌ ಬಳಿ ಹುಬ್ಬಳ್ಳಿ-ಹೈದ್ರಾಬಾದ್‌ ಹಾಗೂ ಹುಬ್ಬಳ್ಳಿ-ಸಿಕಂದರಾಬಾದ್‌ ರೈಲನ್ನು 15 ನಿಮಿಷಕ್ಕೂ ಹೆಚ್ಚು ಕಾಲ ತಡೆಯಲಾಯಿತು.

ಹುಬ್ಬಳ್ಳಿಯಲ್ಲಿ ಅಂಗಡಿಗಳ ಮೇಲೆ ಕಲ್ಲು ತೂರಾಟ: ಮಹದಾಯಿ ಯೋಜನೆ ಜಾರಿಗೆ ಒತ್ತಾಯಿಸಿ ರೈಲ್ವೆ ನಿಲ್ದಾಣದಲ್ಲಿ ರೈಲು ತಡೆ ನಡೆದರೆ, ಇನ್ನೊಂದು ಕಡೆ ಹುಬ್ಬಳ್ಳಿಯ ಚನ್ನಮ್ಮ ವೃತ್ತದಲ್ಲಿ ರೈತರು ರಸ್ತೆ ತಡೆ ನಡೆಸಿದರು. ಅಲ್ಲದೆ, ಸುತ್ತಮುತ್ತಲ ಕೆಲ ಅಂಗಡಿಗಳಿಗೆ ಕಲ್ಲು ತೂರಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.

ಜಿಲ್ಲೆಯ ನವಲಗುಂದ, ಹೆಬಸೂರು, ಕಿರೇಸೂರು, ಕುಸುಗಲ್ಲ, ಬ್ಯಾಹಟ್ಟಿ ಇನ್ನಿತರ ಗ್ರಾಮಗಳಿಂದ ಆಗಮಿಸಿದ್ದ ಸಾವಿರಾರು ರೈತರು ಮಧ್ಯಾಹ್ನ 3ರ ವೇಳೆಗೆ ಚನ್ನಮ್ಮ ವೃತ್ತದ ಬಳಿ ಜಮಾಯಿಸಿ, ದಿಢೀರ್‌ ರಸ್ತೆ ತಡೆ ನಡೆಸಿದರು. ಕೆಲ ರೈತ ಮುಖಂಡರನ್ನು ನವಲಗುಂದ ಭಾಗದಲ್ಲಿ ವಶಕ್ಕೆ ಪಡೆಯಲಾಗಿದೆ ಎಂಬ ಸುದ್ದಿಯಿಂದ ಆಕ್ರೋಶಗೊಂಡ ಪ್ರತಿಭಟನಾಕಾರರು ಸುತ್ತಮುತ್ತಲಿನ ಅಂಗಡಿಗಳನ್ನು ಬಲವಂತವಾಗಿ ಮುಚ್ಚಿಸಿದರು. ಸ್ಥಳಕ್ಕೆ ಆಗಮಿಸಿದ ಶಾಸಕ ಎನ್‌.ಎಚ್‌.ಕೋನರಡ್ಡಿ ಅವರು ಪ್ರತಿಭಟನಾಕಾರರನ್ನು ಸಮಾಧಾನಪಡಿಸಿದರು. ಬೆಂಗಳೂರು, ವಿಜಯಪುರ, ಹೊಸಪೇಟೆ ಮಾರ್ಗಗಳಿಗೆ ಸಂಪರ್ಕ ಕಲ್ಪಿಸುವ ಚನ್ನಮ್ಮವೃತ್ತದಲ್ಲಿ ಸಂಚಾರ ಸ್ಥಗಿತಗೊಂಡಿದ್ದರಿಂದ ಸಂಚಾರ ಅಸ್ತವ್ಯಸ್ತವಾಯಿತು. ಪೊಲೀಸರು ಪರ್ಯಾಯ ಮಾರ್ಗದಲ್ಲಿ ವಾಹನ ಸಂಚಾರಕ್ಕೆ ವ್ಯವಸ್ಥೆ ಮಾಡಬೇಕಾಯಿತು.

ನವಲಗುಂದದಲ್ಲಿ ಕೋರ್ಟ್‌ ಕಲಾಪ ಬಹಿಷ್ಕಾರ: ಮಹದಾಯಿಗಾಗಿ ರೈತರು ನಡೆಸುತ್ತಿರುವ ರೈಲು ತಡೆ ಚಳವಳಿ ಬೆಂಬಲಿಸಿ ನವಲಗುಂದದಲ್ಲಿ ಮಂಗಳವಾರ ವಕೀಲರು ಕೋರ್ಟ್‌ ಕಲಾಪ ಬಹಿಷ್ಕರಿಸಿದರು.

ಈ ವೇಳೆ ಮಾತನಾಡಿದ ಪ್ರತಿಭಟನಾಕಾರರು, ರೈತರು ಬೀದಿಗಿಳಿದು ನಿರಂತರ ಹೋರಾಟ ಮಾಡಿದರೂ ರಾಜ್ಯ ಹಾಗೂ ಕೇಂದ್ರ ಸರಕಾರಗಳು ಕಣ್ಣು ತೆರೆಯುತ್ತಿಲ್ಲ. ಪ್ರಕರಣ ನ್ಯಾಯಾಧಿಕರಣದಲ್ಲಿರುವುದರಿಂದ ರಾಜ್ಯ ಸರಕಾರ ಸರಿಯಾದ ದಾಖಲಾತಿಗಳನ್ನು ಒದಗಿಸಿ ನ್ಯಾಯ ಕೋರಬೇಕು. ಆದರೆ, ಸರಕಾರ ಈ ಕುರಿತು ಚಿಂತನೆ ಮಾಡದೇ ಕಾಲಹರಣ ಮಾಡುತ್ತಿದೆ. ಈ ಹಿನ್ನೆಲೆಯಲ್ಲಿ ಹೋರಾಟ ಸಮಿತಿಯವರು ಅಚ್ಚುಕಟ್ಟು ಪ್ರದೇಶ ವ್ಯಾಪ್ತಿಯ ವಕೀಲರ ನ್ಯಾಯಮಂಡಳಿ ರಚಿಸಿ ಆ ಮೂಲಕ ಕಾನೂನು ಹೋರಾಟ ಮಾಡಬೇಕಿದೆ ಎಂದರು. ಈ ಮಧ್ಯೆ, ಯೋಜನೆ ಅನುಷ್ಠಾನಕ್ಕೆ ಆಗ್ರಹಿಸಿ ಪಕ್ಷಾತೀತ ರೈತ ಹೋರಾಟ ಸಮಿತಿ ನಡೆಸುತ್ತಿರುವ ನಿರಂತರ ಧರಣಿ ಸತ್ಯಾಗ್ರಹ ಮಂಗಳವಾರ 226ನೇ ದಿನಕ್ಕೆ ಕಾಲಿಟ್ಟಿತು.
-ಉದಯವಾಣಿ

Write A Comment