ಕರ್ನಾಟಕ

ಶಾಂತವೇರಿ ಗೌಡರ ಆದರ್ಶ ಪಾಲಿಸಲು ಮನವಿ

Pinterest LinkedIn Tumblr

shantaಬೆಂಗಳೂರು, ಮಾ. ೧೪: ರಿಯಲ್ ಎಸ್ಟೇಟ್ ರಾಜಕಾರಣಿಗಳನ್ನು ತಿರಸ್ಕರಿಸಿ ಶಾಂತವೇರಿ ಗೋಪಾಲಗೌಡರ ಆದರ್ಶಗಳನ್ನು ಅನುಸರಿಸಿಕೊಂಡು ಬರುತ್ತಿರುವ ರಾಜಕಾರಣಿಗಳನ್ನು ಆಯ್ಕೆ ಮಾಡಬೇಕಿದೆ ಎಂದು ರಾಜ್ಯ ರೈತ ಸಂಘದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಹೇಳಿದ್ದಾರೆ.

ಸಮಾಜವಾದಿ ಪಕ್ಷದ ಕಚೇರಿಯಲ್ಲಿಂದು ಏರ್ಪಡಿಸಿದ್ದ ದಿ.ಶಾಂತವೇರಿ ಗೋಪಾಲಗೌಡರ ೯೩ನೇ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಇಂದಿನ ರಾಜಕಾರಣಿಗಳಲ್ಲಿ ನೈತಿಕತೆ ಇಲ್ಲದಂತಾಗಿದೆ. ೨೨೪ ಶಾಸಕರ ಪೈಕಿ ಕೇವಲ ೨೪ ಮಂದಿ ಮಾತ್ರ ರೈತರ ಪರ ಕಾಳಜಿ ಹೊಂದಿದ್ದಾರೆ. ಉಳಿದ ೨೦೦ ಮಂದಿಗೆ ರೈತರ ಬಗ್ಗೆ ಕಾಳಜಿ ಇಲ್ಲ ಎಂದು ಆರೋಪಿಸಿದರು.

ಶಾಂತವೇರಿ ಗೋಪಾಲಗೌಡರ ಸಮಾಜ ಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಲು ಇಂದಿನ ರಾಜಕಾರಣಿಗಳು ವಿಫಲರಾಗಿದ್ದಾರೆ. ಕೋಟ್ಯಂತರ ರೂಪಾಯಿ ಖರ್ಚು ಮಾಡಿ ಆಯ್ಕೆಯಾಗಿ ಬರುವ ಇಂತಹ ರಾಜಕಾರಣಿಗಳಲ್ಲಿ ನಾವು ಬದ್ಧತೆ, ಪ್ರಾಮಾಣಿಕತೆ ನಿರೀಕ್ಷಿಸುವುದು ತಪ್ಪಾಗುತ್ತದೆ. ಇಂತಹ ಅನಿಷ್ಟದ ರಾಜಕಾರಣಿಗಳನ್ನು ತಿರಸ್ಕರಿಸಿ, ಒಳ್ಳೆಯ ಆದರ್ಶಗಳನ್ನು ಹೊಂದಿರುವ ರಾಜಕಾರಣಿಗಳನ್ನು ಆಯ್ಕೆ ಮಾಡಬೇಕು ಎಂದು ಹೇಳಿದರು.

ಮಹಾರಾಣಿ ಮಹಿಳಾ ಕಾಲೇಜಿನ ಪ್ರೊ. ಆಶಾದೇವಿ ಮಾತನಾಡಿ, ಗೋಪಾಲಗೌಡರು ಕನ್ನಡ ಭಾಷೆಯ ಬಗ್ಗೆ ಅಪಾರಗೌರವ ಹೊಂದಿದ್ದರು. ಕನ್ನಡದ ನೆಲ, ಜಲ ಮತ್ತು ಸಂಪತ್ತಿನ ಬಗ್ಗೆ ಕಾಳಜಿ ಹೊಂದಿದ್ದರು. ಅವರಂತಹ ರಾಜಕಾರಣಿಗಳು ಇಂದಿನ ಸಮಾಜಕ್ಕೆ ಅಗತ್ಯವಾಗಿದೆ ಎಂದು ಹೇಳಿದರು.

ಪಕ್ಷದ ರಾಜ್ಯಾಧ್ಯಕ್ಷ ರೋಬಿ ಮ್ಯಾಥ್ಯೂಸ್ ಮಾತನಾಡಿ, ಗಾಂಧೀಜಿ ಮತ್ತು ಲೋಹಿಯಾ ಅವರ ಅನುಯಾಯಿಯಾಗಿದ್ದ ಗೋಪಾಲಗೌಡರು ತಮ್ಮ ಜೀವನದುದ್ದಕ್ಕೂ ರೈತರ, ಹಿಂದುಳಿದವರ, ಬಡವರ ಪರ ಹೋರಾಟ ನಡೆಸಿದರು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಪಕ್ಷದ ಯುವ ಘಟಕದ ಉಪಾಧ್ಯಕ್ಷ ಹರ್ಷ ಗೌಡ, ಡಾ.ಗುರು ಪ್ರಸಾದ್ ಮತ್ತಿತರರು ಹಾಜರಿದ್ದರು.

Write A Comment