ಕರ್ನಾಟಕ

ರಾಜ್ಯದಲ್ಲಿ ಬೇಸಿಗೆ ಮಳೆ; ಹುಣಸೂರಲ್ಲಿ ಆಲಿಕಲ್ಲು ಮಳೆಗೆ ಬೆಳೆ ನಷ್ಟ

Pinterest LinkedIn Tumblr

13hun8ಬೆಂಗಳೂರು: ರಾಜಧಾನಿ ಬೆಂಗಳೂರು, ಹುಣಸೂರು, ಎಚ್‌.ಡಿ.ಕೋಟೆ ಸೇರಿದಂತೆ ಮೈಸೂರು ಕರ್ನಾಟಕದ ಹಲವು ಭಾಗಗಳಲ್ಲಿ ಭಾನುವಾರ ಮಳೆಯಾಗಿದೆ.

ಬೆಂಗಳೂರಿನಲ್ಲಿ ಸಂಜೆಯ ವೇಳೆ ಇದ್ದಕ್ಕಿದ್ದಂತೆ ಸುರಿದ ಮಳೆಯಿಂದಾಗಿ ಜನರು ಕೆಲಕಾಲ ಪರದಾಡುವಂತಾಯಿತು. ಮೈಸೂರು ಜಿಲ್ಲೆ ಹುಣಸೂರು ತಾಲೂಕಿನಾದ್ಯಂತ ಸುರಿದ ಬಿರುಗಾಳಿ ಸಹಿತ ಆಲಿಕಲ್ಲು ಮಳೆಗೆ ಅಪಾರ ಪ್ರಮಾಣದ ಬೆಳೆ ಹಾನಿ ಸಂಭವಿಸಿದೆ. ಎಚ್‌.ಡಿ.ಕೋಟೆ ತಾಲೂಕಿನ ಕಂಚಮಳ್ಳಿಯಲ್ಲಿ ಸಿಡಿಲಿಗೆ ವ್ಯಕ್ತಿಯೊಬ್ಬ ಅಸ್ವಸ್ಥನಾಗಿದ್ದಾನೆ.

ಗಿರಿನಗರ, ಹನುಮಂತನಗರ, ಚಾಮರಾಜಪೇಟೆ, ಲಾಲ್‌ಬಾಗ್‌, ಬನಶಂಕರಿ, ತಿಂಡ್ಲು, ವಿದ್ಯಾರಣ್ಯಪುರ ಸೇರಿದಂತೆ ಬೆಂಗಳೂರಿನ ಕೆಲವೆಡೆ ಸಂಜೆಯ ವೇಳೆ ತುಂತುರು ಮಳೆಯಾಗಿದ್ದು, ವಾರದ ರಜೆ ಕಳೆಯಲು ಪಾರ್ಕ್‌, ಮಾಲ್‌ಗ‌ಳಿಗೆ ತೆರಳಿದ್ದವರು ತೊಂದರೆ ಅನುಭವಿಸಿದರು. ವಾಹನ ಸವಾರರು ಪರದಾಡುವಂತಾಯಿತು. ಮೈಸೂರು ಜಿಲ್ಲೆ ಹುಣಸೂರು ತಾಲೂಕಿನ ಹಲವೆಡೆ ಭಾನುವಾರ ಮಧ್ಯಾಹ್ನದ ವೇಳೆ ಇದ್ದಕ್ಕಿದ್ದಂತೆ ಬಿರುಗಾಳಿ ಸಹಿತ ಆಲಿಕಲ್ಲು ಮಳೆ ಸುರಿಯಿತು. ಆಝಾದ್‌ ನಗರ, ರಂಗನಾಥ ಬಡಾವಣೆ ಸೇರಿದಂತೆ ಹುಣಸೂರು ನಗರ ಹಾಗೂ ಸುತ್ತಮುತ್ತ ಸುಮಾರು ಅರ್ಧ ಗಂಟೆ ಕಾಲ ಆಲಿಕಲ್ಲು ಮಳೆ ಸುರಿಯಿತು. ಇದರಿಂದಾಗಿ ಆಝಾದ್‌ನಗರದಲ್ಲಿ 10ಕ್ಕೂ ಹೆಚ್ಚು ಮನೆಗಳ ಶೀಟ್‌ಗಳು ಧ್ವಂಸಗೊಂಡಿವೆ. ಹಲವು ಮನೆಗಳ ಮೇಲ್ಛಾವಣಿ, ರಸ್ತೆಗಳು ಆಲಿಕಲ್ಲಿನಿಂದ ತುಂಬಿ ಹೋದವು. ಕೆಲವರ ಮನೆಯ ಮೇಲ್ಛಾವಣಿ, ಕಿಟಕಿ ಗಾಜುಗಳು ಪುಡಿ, ಪುಡಿಯಾದವು. ಹಲವೆಡೆ ಮರಗಳು, ವಿದ್ಯುತ್‌ ಕಂಬಗಳು ಧರೆಗೆ ಉರುಳಿದ್ದು, ತಾಲೂಕಿನಾದ್ಯಂತ ವಿದ್ಯುತ್‌ ಸಂಪರ್ಕ ಕಡಿತಗೊಂಡಿದೆ.

ಭಾರೀ ಪ್ರಮಾಣದಲ್ಲಿ ಸುರಿದ ಆಲಿಕಲ್ಲುಗಳಿಂದಾಗಿ ತಂಬಾಕು ಸಸಿಗಳು ನೆಲ ಕಚ್ಚಿವೆ. ಮಾವಿನ ಹೂಗಳು ಉದುರಿವೆ. ನಾಟಿ ಮಾಡಿದ್ದ ಶುಂಠಿಯ ಮೊಳಕೆಗಳು ಕೊಚ್ಚಿ ಹೋಗಿವೆ.
ಎಚ್‌.ಡಿ.ಕೋಟೆ ತಾಲೂಕಿನ ವಿವಿಧೆಡೆ ಮಳೆಯಾಗಿದ್ದು, ಕಂಚಮಳ್ಳಿಯಲ್ಲಿ ಸಿಡಿಲಿನ ಹೊಡೆತಕ್ಕೆ ವಿಷಕಂಠ (35) ಎಂಬುವರು ಅಸ್ವಸ್ಥರಾಗಿದ್ದಾರೆ. ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಪಕ್ಕದ ಮನೆಯ ಹಸುವೊಂದು ಮೃತಪಟ್ಟಿದೆ. ಸೋಮಣ್ಣ ಎಂಬುವರ ಮನೆ ಮುಂದಿನ ತೆಂಗಿನ ಮರ ಹೊತ್ತಿ ಉರಿದಿದೆ. ಚಾಮರಾಜನಗ ಜಿಲ್ಲೆ ಗುಂಡ್ಲುಪೇಟೆ, ಬಂಡಿಪುರ ಅಭಯಾರಣ್ಯ ವ್ಯಾಪ್ತಿಯಲ್ಲಿ ಸುಮಾರು 40 ನಿಮಿಷಗಳ ಕಾಲ ತುಂತುರು ಮಳೆ ಸುರಿಯಿತು.

ಈ ಮಧ್ಯೆ, ದಕ್ಷಿಣ ಒಳನಾಡಿನ ಒಂದೆರಡು ಕಡೆಗಳಲ್ಲಿ ಇನ್ನೆರಡು ದಿನ ಸಾಧಾರಣ ಮಳೆಯಾಗುವ ಸಂಭವವಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
-ಉದಯವಾಣಿ

Write A Comment