ಕರ್ನಾಟಕ

ವಿವಾದಿತ ನೈಸ್‌ ಯೋಜನೆ ಅಗತ್ಯವಿದೆಯೇ? ಸದನ ಸಮಿತಿ ಚಿಂತನೆ

Pinterest LinkedIn Tumblr

NICEಬೆಂಗಳೂರು: ನೈಸ್‌ ಕಂಪನಿಯ ವಿವಾದಿತ “ಬೆಂಗಳೂರು-ಮೈಸೂರು ಇನ್‌ಫ್ರಾಸ್ಟ್ರಕ್ಚರ್‌ ಕಾರಿಡಾರ್‌ ಯೋಜನೆ’ ಅನುಷ್ಟಾನದ ಅಗತ್ಯವಿದೆಯೇ?

ಇಂತದ್ದೊಂದು ಜಿಜ್ಞಾಸೆ ನೈಸ್‌ ಅಕ್ರಮ ಆರೋಪಗಳ ಬಗ್ಗೆ ತನಿಖೆ ನಡೆಸುತ್ತಿರುವ ಸದನ ಸಮಿತಿಯಲ್ಲಿ ಮೂಡಿದೆ. ಇದೇ ಪ್ರಶ್ನೆಯನ್ನು ಶಿಫಾರಸು ಮೂಲಕ ರಾಜ್ಯ ಸರ್ಕಾರಕ್ಕೆ ಸಲ್ಲಿಸುವ ಬಗ್ಗೆಯೂ ಚಿಂತನೆ ನಡೆದಿದೆ.

ಇದಕ್ಕೆ ಮುಖ್ಯ ಕಾರಣ, ಎಕ್ಸ್‌ಪ್ರೆಸ್‌ ಹೈ ವೇ ಯೋಜನೆ ಪೂರ್ಣಗೊಳಿಸಲು ನೈಸ್‌ ಸಂಸ್ಥೆ ಸರ್ಕಾರಕ್ಕೆ ಬೇಡಿಕೆ ಇಟ್ಟಿರುವ ಜಮೀನು ಸ್ವಾಧೀನಪಡಿಸಿ ಕೊಡಲು ಮೂರು ಸಾವಿರ ಕೋಟಿ ರೂ.ಗೂ ಅಧಿಕ ಹಣ ಬೇಕಾಗುತ್ತದೆ.

ಹೌದು, ನೂತನ ಭೂ ಸ್ವಾಧೀನ ಕಾಯ್ದೆ ಪ್ರಕಾರ ರಸ್ತೆಗೆ ಜಮೀನು ಬಿಟ್ಟುಕೊಟ್ಟರೆ ಮಾರುಕಟ್ಟೆ ಮೌಲ್ಯದ ನಾಲ್ಕು ಪಟ್ಟು ಪರಿಹಾರ ಕೊಡಬೇಕಿರುವುದರಿಂದ ನೈಸ್‌ ಸಂಸ್ಥೆಗೆ ಅಗತ್ಯವಿರುವಷ್ಟು ಜಮೀನು ಸ್ವಾಧೀನಕ್ಕೆ ಕನಿಷ್ಠ ಮೂರು ಸಾವಿರ ಕೋಟಿ ರೂ. ಬೇಕಾಗಬಹುದು ಎಂದು ಅಂದಾಜು ಮಾಡಲಾಗಿದೆ.

ಹೀಗಾಗಿ, ಇಷ್ಟೊಂದು ದೊಡ್ಡ ಮೊತ್ತ ಪರಿಹಾರ ನೀಡಿ ಜಮೀನು ಸ್ವಾಧೀನಪಡಿಸಿಕೊಟ್ಟು ಯೋಜನೆ ಅನುಷ್ಟಾನಗೊಳಿಸುವುದು ಅಗತ್ಯವೇ? ರಾಜ್ಯ ಸರ್ಕಾರವೇ ಬೆಂಗಳೂರು-ಮೈಸೂರು ನಡುವೆ ಷಟ³ಥ ರಸ್ತೆ ಮಾಡಲು ತೀರ್ಮಾನಿಸಿರುವುದರಿಂದ  ನೈಸ್‌  ಯೋಜನೆಯ ಅವಶ್ಯಕತೆ ಏನು? ಸರ್ಕಾರ ಯೋಜನೆ ಕೈ ಬಿಡುವ ಬಗ್ಗೆ ಚಿಂತನೆ ನಡೆಸಬಹುದಲ್ಲವೇ? ಎಂದು ವರದಿ ರೂಪದ ಶಿಫಾರಸು ನೀಡಲು ಸದನ ಸಮಿತಿ ಚಿಂತನೆ ನಡೆಸಿದೆ ಎಂದು ವಿಶ್ವಸನೀಯ ಮೂಲಗಳು ತಿಳಿಸಿವೆ.

ಕಾನೂನು ಸಲಹೆ
ಜತೆಗೆ, ನೈಸ್‌ ವಿರುದ್ಧ ಸುಮಾರು 2 ಸಾವಿರ ಪ್ರಕರಣಗಳು ವಿವಿಧ ನ್ಯಾಯಾಲಯಗಳಲ್ಲಿರುವುದರಿಂದ ರಾಜ್ಯ ಸರ್ಕಾರ ಯಾವ ರೀತಿ ತೀರ್ಮಾನ ಕೈಗೊಳ್ಳಬಹುದು ಎಂಬ ಬಗ್ಗೆ ಕಾನೂನು ಸಲಹೆ ನೀಡಲು ಹೈಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ನಾಗಮೋಹನ್‌ ದಾಸ್‌ ಅವರನ್ನು ಗೌರವ ಕಾನೂನು ಸಲಹೆಗಾರರಾಗಿ ನೇಮಿಸಿಕೊಳ್ಳಲು ಸದನ ಸಮಿತಿ ತೀರ್ಮಾನಿಸಿದೆ.

ನೈಸ್‌ ವಿರುದ್ಧ ದಾಖಲಾಗಿರುವ ಪ್ರಕರಣಗಳು, ಅದರ ಸ್ಥಿತಿಗತಿ, ಸದನ ಸಮಿತಿಯ ತನಿಖಾ ವರದಿ ಆಧಾರದ ಮೇಲೆ ಸರ್ಕಾರ ಕೈಗೊಳ್ಳಬಹುದಾದ ಕ್ರಮ, ಒಂದೊಮ್ಮೆ ಯೋಜನೆ ಕೈ ಬಿಟ್ಟರೆ ಆಗುವ ಸಾಧಕ-ಬಾಧಕಗಳ ಬಗ್ಗೆ ಕಾನೂನು ಸಲಹೆ ನೀಡಲು ನಾಗಮೋಹನ್‌ದಾಸ್‌ ಅವರ ನೆರವು ಪಡೆಯಲು ಇತ್ತೀಚೆಗೆ ನಡೆದ ಸದನ ಸಮಿತಿಯ ಸಭೆಯಲ್ಲಿ ನಿರ್ಧರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಮೈಸೂರು-ಬೆಂಗಳೂರು ನಡುವೆ 162 ಕಿ.ಮೀ. ಕಾರಿಡಾರ್‌ ಯೋಜನೆ ನಿರ್ಮಾಣಕ್ಕೆ 1995 ರಲ್ಲಿ 18000 ಸಾವಿರ ಎಕರೆ ಜಮೀನು ನೀಡುವ ಒಪ್ಪಂದವಾಗಿ 1997 ರಲ್ಲಿ ಟೋಲ್‌ ರಸ್ತೆ, ಉಪನಗರಗಳ ನಿರ್ಮಾಣ ಸೇರಿ 20193 ಎಕರೆ ಜಮೀನು ನೀಡುವ ಬಗ್ಗೆ ಮರು ಒಪ್ಪಂದ ಮಾಡಿಕೊಳ್ಳಲಾಗಿತ್ತು. ಬೆಂಗಳೂರು ಸಮೀಪ ಲಿಂಕ್‌ ರಸ್ತೆ ಮಾಡಲಾಗಿದೆಯಾದರೂ ಮೂಲ ರಸ್ತೆಯಾಗಿಲ್ಲ. ಮೈಸೂರು ಕಡೆಯಿಂದ ರಸ್ತೆ ನಿರ್ಮಾಣಕ್ಕೆ ಬೇಕಾದ ಜಮೀನು ಸ್ವಾಧೀನವಾಗಿಲ್ಲ.

ಬೆಂಗಳೂರಿನಲ್ಲಿ ಜಮೀನು ಸ್ವಾಧೀನದಲ್ಲಿ ಅಕ್ರಮ ನಡೆದಿದೆ ಎಂದು ನಡೆದ ಪ್ರತಿಭಟನೆ, ಹೋರಾಟ ಹಿನ್ನೆಲೆಯಲ್ಲಿ ಮೈಸೂರು ಬಳಿ ಜಮೀನು ಸ್ವಾಧೀನ ಸಾಧ್ಯವಾಗಲಿಲ್ಲ.
ಯೋಜನೆ ಪೂರ್ಣಗೊಳಿಸಿ ಎಂದರೆ ಜಮೀನು ಕೊಡಿ ಎಂದು ನೈಸ್‌ ಸಂಸ್ಥೆ ಕುಳಿತಿದೆ. ಜಮೀನು ಸ್ವಾಧೀನಕ್ಕೆ ಹೋದರೆ 3 ಸಾವಿರ ಕೋಟಿ ರೂ. ಪರಿಹಾರ ಕೊಡಬೇಕಾಗುತ್ತದೆ. ಒಪ್ಪಂದ ಮಾಡಿಕೊಳ್ಳುವ ಸಂದರ್ಭದಲ್ಲಿ ಇಂತದ್ದೊಂದು ಭೂ ಸ್ವಾಧೀನ ಕಾಯ್ದೆ ಬರಬಹುದು ಎಂಬ ಕಲ್ಪನೆಯೂ ಇರಲಿಲ್ಲ. ಹೀಗಾಗಿ, ಇದೀಗ ಭೂ ಸ್ವಾಧೀನ ಸಮಸ್ಯೆಯಾಗಿದೆ.

ಯೋಜನೆಯಡಿ ಬೆಂಗಳೂರು ಸಮೀಪವೇ ಮೂಲ ಒಪ್ಪಂದಕ್ಕಿಂತ 1291 ಎಕರೆ ಹೆಚ್ಚುವರಿಯಾಗಿ ನೈಸ್‌ ಸಂಸ್ಥೆಗೆ ನೀಡಲಾಗಿದೆ. 41 ಕಿ.ಮೀ. ಫೆರಿಫೆರಲ್‌ ರಿಂಗ್‌ ರಸ್ತೆಗೆ ಅವಶ್ಯಕತೆಗಿಂತ 700 ಎಕರೆ ಹೆಚ್ಚುವರಿಯಾಗಿ ಸಂಸ್ಥೆ ಪಡೆದಿದೆ ಎಂಬ ಆರೋಪಗಳ ಬಗ್ಗೆ ಸದನ ಸಮಿತಿ 2 ಸಾವಿರ ರೈತರಿಂದ ಅಹವಾಲು ಸ್ವೀಕರಿಸಿ ದಾಖಲೆ ಪರಿಶೀಲನೆ ನಡೆಸಿದೆ.  ಜಮೀನು ಸ್ವಾಧೀನ ಹಾಗೂ ಹಸ್ತಾಂತರ ಪ್ರಕ್ರಿಯೆಯಲ್ಲಿ ಕೆಲವೊಂದು ವ್ಯತ್ಯಾಸ ಆಗಿರುವುದು, ಆ ಸಂಬಂಧದ ಕಡತಗಳು ನಾಪತ್ತೆಯಾಗಿರುವುದು ಸದನ ಸಮಿತಿ ಗಮನಕ್ಕೆ ಬಂದಿದೆ.

ಈ ಎಲ್ಲ ಅಂಶಗಳ ಹಿನ್ನೆಲೆಯಲ್ಲಿ ಕಾರಿಡಾರ್‌ ಯೋಜನೆ ಕೈ ಬಿಡುವುದು ಸೂಕ್ತ ಎಂಬ ಅಭಿಪ್ರಾಯಕ್ಕೆ ಸದನ ಸಮಿತಿ ಬಂದಿದ್ದು, ಅಂತಿಮ ತೀರ್ಮಾನ ಕೈಗೊಳ್ಳುವ ಅಧಿಕಾರ ರಾಜ್ಯ ಸರ್ಕಾರಕ್ಕೆ ಬಿಡಲು ನಿರ್ಧರಿಸಿದೆ ಎಂದು ಹೇಳಲಾಗಿದೆ.
ಇತ್ತೀಚೆಗೆ, ರಸ್ತೆ ನಿರ್ಮಾಣಕ್ಕಾಗಿ ನೈಸ್‌ ಸಂಸ್ಥೆಗೆ ಹಸ್ತಾಂತರಿಸಿರುವ 115.28 ಎಕರೆ ಸರ್ಕಾರಿ ಭೂಮಿಯಲ್ಲಿ ಅನಧಿಕೃತ ಕಲ್ಲು ಗಣಿಗಾಇಕೆ ನಡೆದಿದ್ದು, ಆ ವ್ಯಾಪ್ತಿಯಲ್ಲಿದ್ದ 25 ಕಲ್ಲು ಗಣಿಗಳಿಂದ 1.72 ಲಕ್ಷ ಮೆಟ್ರಿಕ್‌ ಟನ್‌ ಉಪ ಖನಿಜ ತೆಗೆದಿದ್ದು ಅದರ ಬಾಬ್ತು ದಂಡ ಸಹಿತ 581 ಕೋಟಿ ರೂ. ಪಾವತಿಸಬೇಕು ಎಂದು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಸದನ ಸಮಿತಿಗೆ ಪತ್ರ ಬರೆದಿತ್ತು. ಅದರ ಆಧಾರದ ಮೇಲೆ ಆಷ್ಟು ಮೊತ್ತ ನೈಸ್‌ ಸಂಸ್ಥೆಯಿಂದ ಪಡೆಯಲು ಸದನ ಸಮಿತಿ ಸೂಚನೆ ನೀಡಿತ್ತು.

ಒಟ್ಟಾರೆ ಪ್ರಾರಂಭದಿಂದ ಒಂದಿಲ್ಲೊಂದು ವಿವಾದದ ಸುತ್ತಲೇ ಗಿರಕಿ ಹೊಡೆಯುತ್ತಿರುವ ನೈಸ್‌ ಸಂಸ್ಥೆಯ ಬೆಂಗಳೂರು-ಮೈಸೂರು ಇನ್‌ಫ್ರಾಸ್ಟ್ರಕ್ಚರ್‌ ಯೋಜನೆ “ಭವಿಷ್ಯ’ ಏನಾಗಬಹುದು ಎಂಬುದು ಕಾದುನೋಡಬೇಕಾಗಿದೆ.

ಆದಷ್ಟು ಶೀಘ್ರ ವರದಿ
*ನೈಸ್‌ ವಿರುದ್ಧ ಕೇಳಿ ಬಂದಿರುವ ಆರೋಪಗಳ ಬಗ್ಗೆ ಸದನ ಸಮಿತಿಯು ಸಾಕಷ್ಟು ಸಭೆ ನಡೆಸಿ ಮಾಹಿತಿ ಕಲೆ ಹಾಕಿದೆ. ಸ್ಥಳಕ್ಕೂ ಭೇಟಿ ನೀಡಿ ರೈತರಿಂದ ಅಹವಾಲು ಪಡೆದಿದೆ. ಇನ್ನೂ ಕೆಲವೊಂದು ದಾಖಲೆಗಳು ಅಗತ್ಯವಿದೆ. ಕಾನೂನಾತ್ಮಕ ಅಂಶಗಳನ್ನೂ ಪರಿಗಣಿಸಬೇಕಿದ್ದು ಆದಷ್ಟು ಶೀಘ್ರ ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು
– ಟಿ.ಬಿ.ಜಯಚಂದ್ರ, ಸದನ ಸಮಿತಿ ಅಧ್ಯಕ್ಷರು, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ

ಎಸ್‌. ಲಕ್ಷ್ಮೀನಾರಾಯಣ
-ಉದಯವಾಣಿ

Write A Comment