ಕರ್ನಾಟಕ

ಕುಮಾರ್ ಮನವೊಲಿಸಲು ದೊಡ್ಡಗೌಡರ ಬಳಿ ರಾಜಿ :ಅಲ್ಪಸಂಖ್ಯಾತ ಕೈ ಮುಖಂಡ, ಸಚಿವರು ಸೇರಿ ಹಲವರ ಭೇಟಿ..!

Pinterest LinkedIn Tumblr

sidduಬೆಂಗಳೂರು: ದುಬಾರಿ ವಾಚ್ ಪಡೆದ ಪ್ರಕರಣ ಸಂಬಂಧ ಮತ್ತಷ್ಟು ಸ್ಫೋಟಕ ಮಾಹಿತಿಯನ್ನು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಬಹಿರಂಗಪಡಿಸುತ್ತಿದ್ದಾರೆ ಎಂಬ ಮಾಹಿತಿ ದೊರೆಯುತ್ತಿದ್ದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಕುರ್ಚಿಗೆ ಕಂಟಕ ಗ್ಯಾರಂಟಿ ಬಂದೇ ಬರುತ್ತದೆ ಎಂಬ ಹಿನ್ನೆಲೆಯಲ್ಲಿ ಈ ಆಪತ್ತಿನಿಂದ ದೂರ ಮಾಡಲು ಸಿಎಂ ಆಪ್ತ ಬಳಗ ಅದರಲ್ಲೂ ಅಲ್ಪ ಸಂಖ್ಯಾತರ ಮುಖಂಡರು ಪತ್ರಿಕಾಗೋಷ್ಠಿ ನಡೆಸುವ ಹಿಂದಿನ ದಿನ ದೊಡ್ಡಗೌಡರ ಬಳಿ ಮನವಿ ಮಾಡಿದ್ದಾರೆನ್ನಲಾಗಿದೆ. ಯಾವಾಗ ಮುಖ್ಯಮಂತ್ರಿ ಸಿದ್ದರಾಮಯ್ಯ ಪಡೆದ ದುಬಾರಿ ವಾಚ್ ರಾಜ್ಯಾದ್ಯಂತ ಚರ್ಚೆಗೆ ಗ್ರಾಸವಾಗಿ ಹೈಕಮಾಂಡ್ ಕೆಂಗಣ್ಣಿಗೆ ಗುರಿಯಾಗಿ ತಮ್ಮ ಸ್ಥಾನಕ್ಕೆ ಕಂಟಕ ಬಂತೋ ಆಗ ಸರಿಯಾದ ಸಮರ್ಥನೆ ನೀಡಬೇಕಿತ್ತು.

ಅದನ್ನು ಬಿಟ್ಟು ಅವರ ಆಪ್ತ ಬಳಗದವರು, ಕುಮಾರ ಸ್ವಾಮಿ ಹಾಗೂ ಅವರ ಕುಟುಂಬದವರ ಸಂಪತ್ತಿನ ವಿರುದ್ಧ ಆರೋಪ ಮಾಡಿ ಇನ್ನಷ್ಟು ರಾಡಿ ಮಾಡಿಕೊಂಡರು. ಅಲ್ಲದೆ, ವೈಯಕ್ತಿಕ ವಿಷಯಗಳ ಬಗ್ಗೆಯೂ ಟೀಕೆಗಳನ್ನು ಮಾಡಿ ಕೆರಳಿಸಿದರು. ಮುಖ್ಯಮಂತ್ರಿಗಳ ಆಪ್ತರಾದ ಉಗ್ರಪ್ಪ ಮತ್ತಿತರರು ಪತ್ರಿಕಾಗೋಷ್ಠಿ ಮಾಡಿ ಎಚ್‌ಡಿಕೆ ವಿರುದ್ಧ ಅನೇಕ ಆರೋಪಗಳನ್ನು ಮಾಡಿದರೇ ಹೊರತು ಮುಖ್ಯಮಂತ್ರಿಗಳ ವಿರುದ್ಧ ಬಂದ ಆರೋಪಗಳಿಗೆ ಸಮರ್ಥನೆ ನೀಡಲಿಲ್ಲ. ಈ ವಿಷಯ ರಾಜ್ಯಾದ್ಯಂತ ತೀವ್ರ ಚರ್ಚೆಗೆ ಗ್ರಾಸವಾಗಿತ್ತು. ಆರೋಪ-ಪ್ರತ್ಯಾರೋಪಗಳ ಸುರಿಮಳೆ ಯಾಗಿತ್ತು. ರಾಜಭವನಕ್ಕೆ, ಜಾರಿ ನಿರ್ದೇಶನಾಲಯಕ್ಕೆ, ಲೋಕಾಯುಕ್ತಕ್ಕೆ ಮುಖ್ಯಮಂತ್ರಿಗಳ ವಿರುದ್ಧ ದೂರು ಸಲ್ಲಿಕೆಯಾಗಿತ್ತು.

ಮುಖ್ಯಮಂತ್ರಿ ಸಿದ್ದರಾಮಯ್ಯನವರು ತಮ್ಮ ಬಳಿ ಇರುವ ದುಬಾರಿ ವಾಚ್ ತನ್ನ ಮೂರು ದಶಕಗಳ ಸ್ನೇಹಿತ ಡಾ.ಗಿರೀಶ್ ವರ್ಮ ಎಂಬುವವರು ಕೊಟ್ಟಿದ್ದು. ಇದರ ಬಗ್ಗೆ ದಾಖಲೆಗಳಿವೆ ಎಂದು ಪತ್ರಿಕಾಗೋಷ್ಠಿ ನಡೆಸಿ ಹೇಳಿದರು. ಅದೂ ವಿಶೇಷವಾಗಿ ದೆಹಲಿಗೆ ತೆರಳುವ ಹಿಂದಿನ ದಿನ ಸ್ಪಷ್ಟಪಡಿಸಿ ದೆಹಲಿಗೆ ತೆರಳಿದರು. ಮುಖ್ಯಮಂತ್ರಿ ಸಿದ್ದರಾಮಯ್ಯನವರ ಹೇಳಿಕೆ ಬಗ್ಗೆ ಅನುಮಾನ ವ್ಯಕ್ತಪಡಿಸಿ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ನಾಳೆ ಈ ಸಂಬಂಧ ಪತ್ರಿಕಾಗೋಷ್ಠಿ ನಡೆಸಿ ವಿವರಗಳನ್ನು ಬಹಿರಂಗಪಡಿಸುವುದಾಗಿ ಹೇಳಿಕೆ ನೀಡಿದ್ದರು. ಆಗ ಸಿದ್ದು ಆಪ್ತ ಬಳಗದವರು ಕುಮಾರಸ್ವಾಮಿಯವ ರೊಂದಿಗೆ ಮನವೊಲಿಕೆ ಯತ್ನ ನಡೆಸಿದರೆನ್ನಲಾಗಿದೆ.

ಅಲ್ಲದೆ, ದೊಡ್ಡಗೌಡರೊಂದಿಗೂ ಮಾತುಕತೆ ನಡೆಸಿದ್ದಾರೆ. ಮುಖ್ಯಮಂತ್ರಿಗಳ ಆಪ್ತರಾದ ಹಾಗೂ ದೊಡ್ಡಗೌಡರಿಗೂ ಆಪ್ತರಾದ ಅಲ್ಪಸಂಖ್ಯಾತ ಮುಖಂಡರೊಬ್ಬರೊಂದಿಗೆ ಮಾತುಕತೆ ನಡೆಸಿದ್ದರಿಂದ ಎಚ್.ಡಿ.ಕುಮಾರಸ್ವಾಮಿಯವರು ಪತ್ರಿಕಾಗೋಷ್ಠಿಯಲ್ಲಿ ಹೆಚ್ಚಿನ ವಿವರಗಳನ್ನು ನೀಡಿಲ್ಲ ಎನ್ನಲಾಗಿದೆ. ಸರ್ಕಾರದ ಅಕ್ರಮಗಳು ಹಾಗೂ ಬಗ್ಗೆ ತಮ್ಮ ಮೇಲೆ ಬಂದ ವೈಯಕ್ತಿಕ ಆರೋಪಗಳ ಬಗ್ಗೆ ಕುಮಾರಸ್ವಾಮಿ ಸಮಜಾಯಿಷಿ ನೀಡಿದ್ದಾರೆ. ವಾಚ್‌ನ ಮೂಲದ ಬಗ್ಗೆ ಸಿಬಿಐ ತನಿಖೆಗೆ ಒತ್ತಾಯಿಸಿದ್ದಾರೆ.

Write A Comment