ಚನ್ನಪಟ್ಟಣ, ಫೆ.20- ದೇಶಕಾಯುವ ಯೋಧರ ಬಗ್ಗೆ ಲಘುವಾಗಿ ಮಾತನಾಡಿರುವ ನಿತ್ಯಾನಂದರನ್ನು ಕೂಡಲೇ ಗಡೀಪಾರು ಮಾಡದಿದ್ದರೆ, ಅವರ ಆಶ್ರಮಕ್ಕೆ ನುಗ್ಗಿ ಧ್ವಂಸಗೊಳಿಸಲು ದೇಶಪ್ರೇಮಿಗಳು ಹಿಂಜರಿಯುವುದಿಲ್ಲ ಎಂದು ಹೋರಾಟಗಾರ ರಮೇಶ್‌ಗೌಡ ಎಚ್ಚರಿಕೆ ನೀಡಿದರು.
ಬಿಡದಿಯ ಆಶ್ರಮದ ಎದುರು ಕಸ್ತೂರಿ ಕರ್ನಾಟಕ ಜನಪರ ವೇದಿಕೆ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ಸೈನಿಕರ ರಕ್ಷೆಯಿಂದ ನೆಮ್ಮದಿಯಿಂದ ಬದುಕುತ್ತಿರುವ ನಿತ್ಯಾನಂದ ಇದೀಗ ಯೋಧರು, ಆತ್ಮಹತ್ಯೆ ಮಾಡಿಕೊಳ್ಳುವವರಿಬ್ಬರಿಗೂ ಸ್ವರ್ಗ ಪ್ರಾಪ್ತಿಯಾಗುವುದಿಲ್ಲ ಎಂದು ಉದ್ದಟತನದ ಮಾತುಗಳನ್ನಾಡಿದ್ದಾರೆ, ಹಾಗಾಗಿ ಅವರ ವಿರುದ್ಧ ಸರ್ಕಾರ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ಜಿಲ್ಲಾ ಅಧ್ಯಕ್ಷ ಯೋಗೇಶ್‌ಗೌಡ ಮಾತನಾಡಿ, ನಿತ್ಯಾನಂದ ಕೂಡಲೇ ತನ್ನ ಹೇಳಿಕೆ ವಾಪಸ್ ಪಡೆದು ದೇಶದ ಜನತೆಯ ಕ್ಷಮೆ ಯಾಚಿಸಬೇಕು, ಸರ್ಕಾರ ಕೂಡಲೇ ನಿತ್ಯಾನಂದನನ್ನು ಗಡೀಪಾರು ಮಾಡಬೇಕು, ಇಲ್ಲವಾದಲ್ಲಿ ಉಗ್ರ ಪ್ರತಿಭಟನೆ ಅನಿವಾರ್ಯವಾಗುತ್ತದೆ ಎಂದು ಎಚ್ಚರಿಸಿದರು.
ವೇದಿಕೆಯ ರಾಜ್ಯ ಮಹಿಳಾ ಘಟಕದ ಅಧ್ಯಕ್ಷೆ ಮಂಗಳಮ್ಮ, ಜೆಡಿಎಸ್ ಮುಖಂಡ ಮಳೂರುಪಟ್ಟಣ ರವಿ, ರಾಜ್ಯ ಉಪಾಧ್ಯಕ್ಷ ದಿನೇಶ್, ರಾಜ್ಯ ಯುವಘಟಕದ ಅಧ್ಯಕ್ಷ ರಂಜಿತ್‌ಗೌಡ, ಮಂಡ್ಯ ಜಿಲ್ಲಾಧ್ಯಕ್ಷೆ ಮಮತಾ ಪದಾಕಾರಿಗಳಾದ ನಾಗರತ್ನ, ರಾಜಣ್ಣ, ಮಂಗಳಮ್ಮ, ಲಕ್ಷ್ಮೀ, ರಾಜೇಶ್, ಹನಿಯೂರು ಸಿದ್ದಪ್ಪಾಜಿ.ಚಿಕ್ಕೇನಹಳ್ಳಿ ರಾಮಚಂದ್ರು, ನಾಗೇಶ್, ಆಟೋ ಸಿದ್ದಪ್ಪಾಜಿ, ರಮಣಪ್ಪ, ಮುನಿವೆಂಕಟಪ್ಪ ಮುಂತಾದವರಿದ್ದರು.