ಕೋಲಾರ 19- ಕೃಷಿಭಾಗ್ಯ, ಪಶುಭಾಗ್ಯ ಯೋಜನೆ ಅನುಷ್ಠಾನ ಆಂದೋಲನವಾಗಲಿ, ರೈತರಿಗೆ ಇಲ್ಲಿನ ಮಣ್ಣು,ನೀರಿನ ಲಭ್ಯತೆ,ಮಾರುಕಟ್ಟೆಗೆ ಅನುಗುಣವಾಗಿ ಬೆಳೆ ಬೆಳೆಯುವ ಕುರಿತು ಮಾರ್ಗದರ್ಶನ ನೀಡುವ ಪ್ರಯೋಗಾಲಯದಂತೆ ಇಲಾಖೆಗಳು ಕೆಲಸ ಮಾಡಬೇಕು ಎಂದು ಶಾಸಕ ರಮೇಶ್‌ಕುಮಾರ್ ಕರೆ ನೀಡಿದರು. ಕೋಲಾರ, ಚಿಕ್ಕಬಳ್ಳಾಪುರ ಡಿಸಿಸಿ ಬ್ಯಾಂಕ್ ಆಶ್ರಯದಲ್ಲಿ ಕೃಷಿಭಾಗ್ಯ,ಪಶುಭಾಗ್ಯ ಯೋಜನೆ ಸಮರ್ಪಕ ಅನುಷ್ಠಾನದ ಸಂಬಂಧ ಅವಿಭಜಿತ ಜಿಲ್ಲೆಯ ಕೃಷಿ,ತೋಟಗಾರಿಕೆ,ಪಶುಪಾಲನಾ, ರೇಷ್ಮೆ ಇಲಾಖೆ ಅಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು.
ಕಂದಾಯ ಇಲಾಖೆಯಂತೆ ಬರುವ ಸಬ್ಸಿಡಿಯನ್ನು ಹಂಚುವ ಕೆಲಸಕ್ಕೆ ಸೀಮಿತವಾಗದಿರಿ, ರೈತರಿಗೆ ನಮ್ಮಭೂಮಿ,ನೀರಿಗೆ ಅನುಗುಣವಾಗಿ ಬೆಳೆಯಬಹುದಾದ ಬೆಳೆಗಳ ಕುರಿತು ಅರಿವು ಮೂಡಿಸಿ ಎಂದು ಕಿವಿಮಾತು ಹೇಳಿ ಪಿಎಲ್‌ಡಿ ಬ್ಯಾಂಕ್‌ಗೆ 30 ಲಕ್ಷ ಸಾಲ ನೀಡುವ ಶಕ್ತಿಯಿಲ್ಲ, ಪಾಲಿಹೌಸ್ ನಿರ್ಮಾಣಕ್ಕೆ ಅಗತ್ಯವಾದ ಸಾಲವನ್ನು ಡಿಸಿಸಿ ಬ್ಯಾಂಕುಗಳ ಮೂಲಕವೇ ಶೇ.3 ರ ಬಡ್ಡಿದರದಲ್ಲಿ ನೀಡಲು ತಮ್ಮ ಮನವಿಗೆ ಮುಖ್ಯಮಂತ್ರಿ ಒಪ್ಪಿದ್ದು, ಅವರಿಗೆ ಧನ್ಯವಾದ ಸಲ್ಲಿಸುತ್ತೇನೆ ಎಂದರು.
ಪಾಲಿಹೌಸ್‌ಗೆ ನೀಡುವ ಸಾಲದಲ್ಲಿ ಪರಿಶಿಷ್ಟರಿಗೆ ಶೇ.90 ಸಬ್ಸಿಡಿ ಹಾಗೂ ಸಾಮಾನ್ಯ ವರ್ಗಕ್ಕೆ ಶೇ.75 ಸಬ್ಸಿಡಿ ಇದೆ ಎನ್ನುತ್ತಾ, ಯೋಜನೆಯ ಸಮರ್ಪಕ ಅನುಷ್ಠಾನಕ್ಕೆ ಅಗತ್ಯ ಕ್ರಮ ಕೈಗೊಳ್ಳಲು ಸೂಚಿಸಿದರು. ಸಾಮಾನ್ಯ ಜನರ ಹಣವೇ ವಾಣಿಜ್ಯ ಬ್ಯಾಂಕುಗಳಲ್ಲಿ ಶೇ.87 ರಷ್ಟಿದೆ, ಉದ್ಯಮಿಗಳಿಗೆ ನೀಡಿರುವ 6 ಲಕ್ಷ ಕೋಟಿ ಸಾಲ ವಸೂಲಾಗದ ಸಾಲ ಎಂದು ಈ ಬ್ಯಾಂಕುಗಳು ತಿಳಿಸಿದ್ದು, ರೈತರನ್ನು ಮಾತ್ರ ಸುಲಿಗೆ ಮಾಡುತ್ತವೆ ಎಂದು ಟೀಕಿಸಿದರು.
ರಾಜ್ಯ ಸರ್ಕಾರ ಜಿಲ್ಲೆಗೆ ನೀಡಿರುವ 550 ಪಾಲಿಹೌಸ್‌ಗಳ ಜತೆಗೆ ಇನ್ನೂ 500 ಪಾಲಿಹೌಸ್ ನಿರ್ಮಾಣಕ್ಕೆ ವರ್ಕ್ ಆದೇಶ ನೀಡಿ ನಾನು ಮಂಜೂರು ಮಾಡಿಸುತ್ತೇನೆ ಎಂದು ಭರವಸೆ ನೀಡಿದರು. ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಎಂ.ಗೋವಿಂದಗೌಡ, ಕೃಷಿ ಜಂಟಿ ನಿರ್ದೇಶಕ ರಾಜು, ಡಿಸಿಸಿಬ್ಯಾಂಕ್ ವತಿಯಿಂದ ಬ್ಯಾಂಕಿನ ಉಪಾಧ್ಯಕ್ಷ ಹೆಚ್.ವಿ.ನಾಗರಾಜ್, ಎಂಡಿ ಉಮಾಕಾಂತ್ ಮತ್ತಿತರರಿದ್ದರು.