ಕರ್ನಾಟಕ

ಸೇತುವೆ ಕೆಳಗೆ ವ್ಯೆಕ್ತಿ ಶವ :ಕೊಲೆ ಶಂಕೆ

Pinterest LinkedIn Tumblr

koleತುಮಕೂರು: ರಾಷ್ಟ್ರೀಯ ಹೆದ್ದಾರಿ 48ರಲ್ಲಿನ ಅಂತರಸನ ಹಳ್ಳಿ ಸಮೀಪ ಮೇಲ್ಸೇತುವೆ ಕೆಳಗೆ ವ್ಯಕ್ತಿಯೊಬ್ಬರ ಶವ ಪತ್ತೆಯಾಗಿದ್ದು, ಕೊಲೆ ಶಂಕೆ ವ್ಯಕ್ತವಾಗಿದೆ.ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ವ್ಯಕ್ತಿಯನ್ನು ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲೂಕು ಗೊರಲಕಟ್ಟೆ (ಜಗಳಕಟ್ಟೆ) ಗ್ರಾಮದ ವೀರೇಶ್ (35) ಎಂದು ಗುರುತಿಸಲಾಗಿದೆ. ಈತ ಬೆಂಗಳೂರು ಗ್ರಾಮಾಂತರ ಜಿಲ್ಲೆ ಆನೇಕಲ್ ತಾಲೂಕು ಚಂದಾಪುರದಲ್ಲಿನ ಕೆಮಿಕಲ್ ಕಾರ್ಖಾನೆಯೊಂದರಲ್ಲಿ ಕೆಲಸ ಮಾಡುತ್ತಿದ್ದ ಎಂದು ತನಿಖೆಯಿಂದ ಗೊತ್ತಾಗಿದೆ.

ಸೇತುವೆ ಕೆಳಗೆ ಕುಸಿದು ಕುಳಿತ ಭಂಗಿಯಲ್ಲಿ ವ್ಯಕ್ತಿಯ ಶವ ಪತ್ತೆಯಾಗಿದ್ದು, ಪಕ್ಕದಲ್ಲೇ ಹೆಲ್ಮೆಟ್ ಸಹ ಬಿದ್ದಿದೆ. ಆದರೆ ಯಾವುದೇ ದ್ವಿಚಕ್ರವಾಹನ ಪತ್ತೆಯಾಗಿಲ್ಲ. ಹಿಂದಿನಿಂದ ಬೈಕ್‌ಗೆ ವಾಹನ ಡಿಕ್ಕಿ ಹೊಡೆದಾಗ ಬಿದ್ದು, ಗಾಯಗೊಂಡ ರೀತಿಯಲ್ಲಿ ವ್ಯಕ್ತಿಯ ಬಲಗಣ್ಣಿನ ಹುಬ್ಬಿನ ಮೇಲಿನ ಮೂಳೆಗೆ ಪೆಟ್ಟು ಬಿದ್ದಂತೆ ಇದ್ದು, ಮೂಳೆ ಒಳಕ್ಕೆ ಹೋಗಿದೆ. ಕಣ್ಣು, ಮೂಗಿನಿಂದ ಹೊಟ್ಟೆ ಭಾಗದ ವರೆಗೆ ರಕ್ತ ಹರಿದಿದ್ದರೂ ಸ್ಥಳದಲ್ಲಿ ಎಲ್ಲೂ ರಕ್ತದ ಕಲೆಗಳು ಇಲ್ಲದಿರುವುದು ಹಲವು ಅನುಮಾನಗಳಿಗೆ ಎಡೆಮಾಡಿದೆ ಎಂದು ಸ್ಥಳ ಪರಿಶೀಲನೆ ನಡೆಸಿದ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಇಂದು ಬೆಳಗ್ಗೆ 8ಗಂಟೆ ಸಮಾರಿನಲ್ಲಿ ಶವ ಕಂಡವರು ಪೊಲೀಸರಿಗೆ ಮಾಹಿತಿ ನೀಡಿದ್ದು, ಎಎಸ್‌ಪಿ ಜಿ.ಬಿ.ಮಂಜುನಾಥ್, ಡಿವೈಎಸ್‌ಪಿ ಚಿದಾನಂದ, ಗ್ರಾಮಾಂತರ ಠಾಣೆ ಎಸ್‌ಐ ಶೇಷಾದ್ರಿ, ಸಿಪಿಐ ರವಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಮೃತನ ಜೇಬಿನಲ್ಲಿ ಎರಡು ಮೊಬೈಲ್, ಗುರುತಿನ ಚೀಟಿ ಪತ್ತೆಯಾಗಿದ್ದು, ಮೊಬೈಲ್‌ನಿಂದ ಕರೆ ಮಾಡಿದಾಗ ಮೃತನ ಸ್ನೇಹಿತ ಕರೆ ಸ್ವೀಕರಿಸಿದ್ದು, ಆತನಿಂದ ಮೃತನ ಗುರುತು ಪತ್ತೆಯಾಗಿದೆ. ವ್ಯಕ್ತಿ ಶವ ಬಿದ್ದಿರುವ ಸ್ಥಳದಲ್ಲಾಗಲಿ, 1ಕಿ.ಮೀ ವ್ಯಾಪ್ತಿಯಲ್ಲಾಗಲಿ ಎಲ್ಲೂ ಅಪಘಾತವಾದ ಕುರುಹುಗಳೇ ಇಲ್ಲ. ಒಂದು ವೇಳೆ ಅಪಘಾತವಾಗಿದ್ದರೆ ವಾಹನ ತುಂಡುಗಳು ಪತ್ತೆಯಾಗಬೇಕು. ಇದಾವುದರ ಕುರುಹು ಇಲ್ಲಿ ಇಲ್ಲ ಎಂದು ಪೊಲೀಸ್ ಅಧಿಕಾರಿಗಳೂ ಹೇಳಿದ್ದಾರೆ.

ಹೆಲ್ಮೆಟ್ ಹಾಕಿದ ಸ್ಥಿತಿಯಲ್ಲಿ ದುಷ್ಕರ್ಮಿಗಳು ರಾಡ್‌ನಿಂದ ಹಣೆಗೆ ಹೊಡೆದು ಕೊಲೆ ಮಾಡಿರ ಬೇಕೆಂದು ಶಂಕಿಸಲಾಗಿದೆ. ಶವವನ್ನು ಸರ್ಕಾರಿ ಆಸ್ಪತ್ರೆಗೆ ಸಾಗಿಸಿದ್ದು, ಮರಣೋತ್ತರ ವರದಿ ಬಂದ ನಂತರವಷ್ಟೇ ಇದು ಕೊಲೆಯೋ, ಅಪಘಾತವೋ ಎಂಬುದು ಗೊತ್ತಾಗಲಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಗ್ರಾಮಾಂತರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಕೈಗೊಂಡಿದ್ದಾರೆ.

Write A Comment