ಬೆಂಗಳೂರು,ಫೆ.೧೪-ಕಂಠಪೂರ್ತಿ ಕುಡಿದ ಐವರು ಸ್ನೇಹಿತರು ಬಾರ್‌ನ ಮುಂಭಾಗದಲ್ಲಿ ಮದ್ಯ ಸೇವಿಸುವುದಕ್ಕೆ ವಿರೋಧ ವ್ಯಕ್ತಪಡಿಸಿದ ಬೌನ್ಸರ್ ಮೇಲೆ ಬಿಯರ್ ಬಾಟಲಿಯಿಂದ ಹಲ್ಲೆ ನಡೆಸಿರುವ ದುರ್ಘಟನೆ ಯುಬಿ ಸಿಟಿಯ ಮಾರ್ಗರೇಟ್ ಬಾರ್ ಬಳಿ ನಡೆದಿದೆ.
ಹಲ್ಲೆಯಿಂದ ಗಂಭೀರವಾಗಿ ಗಾಯಗೊಂಡಿರುವ ಬೌನ್ಸರ್ ಆಶ್ರಫ್‌ಪಾಷ ಅವರು ಮಲ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಅವರ ಸ್ಥಿತಿ ಗಂಭೀರವಾಗಿದೆ.ಮಾರ್ಗರೇಟ್ ಬಾರ್‌ನಲ್ಲಿ ರಾತ್ರಿ ೧೧ ಗಂಟೆಯವರೆಗೆ ಮದ್ಯಪಾನ ಮಾಡಿದ ಮಧುಸೂದನ್,ಸೂರಜ್,ಮೋಹನ್,ಕೀರ್ತಿ ಹಾಗೂ ಅರ್ಜುನ್ ಅವಧಿ ಮುಗಿದ ನಂತರವೂ ಮದ್ಯ ಪೂರೈಸುವಂತೆ ಜಗಳ ಮಾಡಿ ನಂತರ ಬಾರ್ ಹೊರಗಡೆ ಬಾಟಲಿ ಹಿಡಿದುಕೊಂಡು ಮದ್ಯ ಸೇವಿಸುತ್ತಾ ನಿಂತಿದ್ದರು.
ಇದನ್ನು ವಿರೋಧಿಸಿದ ಬೌನ್ಸರ್ ಆಶ್ರಫ್‌ಪಾಷ ಅವರ ಮೇಲೆ ಬಿಯರ್ ಬಾಟಲಿಯಿಂದ ಹಲ್ಲೆ ನಡೆಸಿದ್ದು ಸುದ್ದಿ ತಿಳಿದ ತಕ್ಷಣ ಸ್ಥಳಕ್ಕೆ ಧಾವಿಸಿದ ಕಬ್ಬನ್‌ಪಾರ್ಕ್ ಪೊಲೀಸರು ಐವರನ್ನು ಬಂಧಿಸಿ ಗಾಯಗೊಂಡಿದ್ದ ಆಶ್ರಫ್‌ಪಾಷನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ ಎಂದು ಡಿಸಿಪಿ ಸಂದೀಪ್‌ಪಾಟೀಲ್ ತಿಳಿಸಿದ್ದಾರೆ.