ಕರ್ನಾಟಕ

3 ವರ್ಷದಲ್ಲಿ ದೇಶದೆಲ್ಲೆಡೆ ನಿರಂತರ ವಿದ್ಯುತ್

Pinterest LinkedIn Tumblr

go.finalಬೆಂಗಳೂರು: ಇನ್ನು ಮೂರು ವರ್ಷ(2019)ಗಳಲ್ಲಿ ದೇಶದೆಲ್ಲೆಡೆ ದಿನದ 24 ಗಂಟೆಯೂ ವಿದ್ಯುತ್ ಪೂರೈಕೆ ಮಾಡಲಾಗುವುದು ಎಂದು ಕೇಂದ್ರ ಇಂಧನ ಸಚಿವ ಪಿಯೂಷ್ ಗೋಯೆಲ್ ಘೊಷಿಸಿದ್ದಾರೆ.

ಅಂತಾರಾಷ್ಟ್ರೀಯ ವಸ್ತುಪ್ರದರ್ಶನ ಕೇಂದ್ರದಲ್ಲಿ ಭಾರತೀಯ ವಿದ್ಯುತ್ ಮತ್ತು ವಿದ್ಯುನ್ಮಾನ ಪರಿಕರಗಳ ಉತ್ಪಾದಕರ ಸಂಘ (ಹೀಮಾ) ಆಯೋಜಿಸಿರುವ 5 ದಿನಗಳ ಎಲೆಕ್ಟ್ರೋಮಾ ಜಾಗತಿಕ ಪ್ರದರ್ಶನಕ್ಕೆ ಚಾಲನೆ ನೀಡಿ ಮಾತನಾಡಿದರು. ಪ್ರಧಾನಿ ನರೇಂದ್ರ ಮೋದಿ ಅವರ ಮೇಕ್ ಇನ್ ಇಂಡಿಯಾ ಪರಿಕಲ್ಪನೆಗೆ ಇಂಧನ ಕ್ಷೇತ್ರ ಅಗಾಧವಾದ ಕೊಡುಗೆ ನೀಡಲಿದೆ ಎಂದು ಹೇಳಿದರು.

ಸ್ವಾತಂತ್ರ್ಯ ಬಂದು 7 ದಶಕಗಳಾಗುತ್ತಾ ಬಂದಿದ್ದರೂ ದೇಶದ 18,100 ಹಳ್ಳಿಗಳಿಗೆ ಇನ್ನೂ ವಿದ್ಯುತ್ ಸಂಪರ್ಕ ಕಲ್ಪಿಸಲು ಸಾಧ್ಯವಾಗಿಲ್ಲ. ಸಾವಿರ ದಿನದೊಳಗಾಗಿ ಈ ಹಳ್ಳಿಗಳಿಗೆ ವಿದ್ಯುತ್ ನೀಡುತ್ತೇವೆ ಎಂದು ಪ್ರಧಾನಿ ಘೊಷಣೆ ಮಾಡಿದ್ದಾರೆ. ಈ ನಿಟ್ಟಿನಲ್ಲಿ ಕಾರ್ಯಕ್ರಮ ರೂಪಿಸಲಾಗಿದ್ದು, ಈಗಾಗಲೇ 5 ಸಾವಿರ ಹಳ್ಳಿಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಿಕೊಡಲಾಗಿದೆ. 730 ದಿನಗಳಲ್ಲಿ ಎಲ್ಲ ಹಳ್ಳಿಗಳಿಗೆ ವಿದ್ಯುತ್ ನೀಡುವ ಮೂಲಕ ಗುರಿ ತಲುಪುವ ವಿಶ್ವಾಸವಿದೆ ಎಂದರು.

ವಿದ್ಯುತ್ ಕ್ಷೇತ್ರವನ್ನು ಕೇಂದ್ರ ಆದ್ಯತಾ ವಲಯ ವಾಗಿ ಪರಿಗಣಿಸಿದ್ದು, ಎಲ್ಲ ಹಂತಗಳಲ್ಲೂ ಪಾರದರ್ಶಕ ವ್ಯವಸ್ಥೆಯನ್ನು ಪರಿಣಾಮಕಾರಿಯಾಗಿ ಜಾರಿಗೆ ತರಲಾಗುತ್ತಿದೆ ಎಂದು ಪಿಯೂಷ್ ಗೋಯೆಲ್ ತಿಳಿಸಿದರು. ಎಲೆಕ್ಟ್ರೋಮಾ ಅಧ್ಯಕ್ಷ ಆದಿತ್ಯ ಆರ್ ಧೂತ್, ಹೀಮಾ ಅಧ್ಯಕ್ಷ ಬಾಬು ಪಟೇಲ್ ಮತ್ತಿತರರಿದ್ದರು.

10 ಕೋಟಿ ಎಲ್​ಇಡಿ ಬಲ್ಬ್ ವಿತರಣೆ

ಮಾರ್ಚ್ ಅಂತ್ಯದೊಳಗೆ ದೇಶದಲ್ಲಿ 10 ಕೋಟಿ ಎಲ್​ಇಡಿ ಬಲ್ಬ್ ವಿತರಿಸಲಾಗುವುದು. ಎಲ್​ಇಡಿ ಮೂಲಕ ವಿದ್ಯುತ್ ಉಳಿತಾಯ ಮಾಡುವ ಯೋಜನೆಗೆ ಎಲ್ಲ ರಾಜ್ಯಗಳಿಂದಲೂ ಉತ್ತಮ ಸ್ಪಂದನೆ ಸಿಕ್ಕಿದೆ. ವರ್ಷಕ್ಕೆ ಕೇವಲ 6 ಲಕ್ಷ ಎಲ್​ಇಡಿ ಬಲ್ಬ್ ಉತ್ಪಾದಿಸುತ್ತಿದ್ದ ಕಂಪನಿಯೊಂದು ಇಂದು ವರ್ಷಕ್ಕೆ 6 ಕೋಟಿ ಬಲ್ಬ್ ಉತ್ಪಾದಿಸುತ್ತಿದೆ. ಮಾರುಕಟ್ಟೆಯಲ್ಲಿ 310 ರೂ. ಇದ್ದ ಬಲ್ಬ್ ಬೆಲೆ 100 ರೂ.ಗೆ ಇಳಿಕೆಯಾಗಿದೆ ಎಂದು ಪಿಯೂಷ್ ಗೋಯೆಲ್ ತಿಳಿಸಿದರು.

ಕೇಂದ್ರದಿಂದ ನೆರವು

ಕರ್ನಾಟಕದಲ್ಲಿ ವಿದ್ಯುತ್ ಸಮಸ್ಯೆ ಇರುವ ಕಾರಣ ಸ್ವಲ್ಪಮಟ್ಟಿನ ವಿದ್ಯುತ್ ನೀಡಿ ಸಹಕರಿಸುವಂತೆ ನೆರೆ ರಾಜ್ಯಗಳಾದ ತಮಿಳುನಾಡು, ತೆಲಂಗಾಣ, ಆಂಧ್ರ, ಕೇರಳ ರಾಜ್ಯಗಳಿಗೆ ಖುದ್ದು ಪೋನ್ ಮಾಡಿ ವಿನಂತಿಸಿದರೂ ಸ್ಪಂದಿಸಿಲ್ಲ. ಆದ್ದರಿಂದ ಆ ರಾಜ್ಯಗಳಿಗೆ ಕೇಂದ್ರದಿಂದ ನೀಡುತ್ತಿರುವ ವಿದ್ಯುತ್​ನಲ್ಲಿ ಕಡಿತ ಮಾಡಿ ಕರ್ನಾಟಕಕ್ಕೆ ನೀಡಲಾಗಿದೆ ಎಂದು ಪಿಯೂಷ್ ಗೋಯೆಲ್ ಹೇಳಿದರು.

Write A Comment