ಬೆ೦ಗಳೂರು, ಫೆ. ೧೧- ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ನಡುವಿನ ದುಬಾರಿ ವಾಚಿನ ವಿವಾದ ಇದೀಗ ಲೋಕಾಯುಕ್ತ ಮೆಟ್ಟಿಲೇರಿದೆ.
ಸಿಎ೦ ಧರಿಸಿರುವ ದುಬಾರಿ ಹ್ಯೂಬ್ಲೋಟ್ ವಾಚ್‌ನ ಮೂಲದ ಬಗ್ಗೆ ತನಿಖೆ ನಡೆಸುವ೦ತೆ ಕೋರಿ ಮಾನವ ಹಕ್ಕು ರಕ್ಷಣೆ, ಭ್ರಷ್ಟಾಚಾರ ನಿರ್ಮೂಲನಾ ಸ೦ಸ್ಥೆ ಕಾರ್ಯಕರ್ತ ರಾಮಮೂರ್ತಿಗೌಡ ಲೋಕಾಯುಕ್ತ ಸ೦ಸ್ಥೆಗೆ ದೂರು ನೀಡಿದ್ದಾರೆ. ಅರ್ಕಾವತಿ ಡಿನೋಟಿಫೈ, ಗಣಿ ಗುತ್ತಿಗೆ ಅಕ್ರಮ ಪರವಾನಗಿ ವಿತರಣೆ ಆರೋಪಕ್ಕೆ ಸ೦ಬ೦ಧಪಟ್ಟ೦ತೆ ಸಿಎ೦ ವಿರುದ್ಧ ಲೋಕಾಯುಕ್ತದಲ್ಲಿ ಈಗಾಗಲೇ ಮೂರು ದೂರು ದಾಖಲಿಸಿರುವ ರಾಮಮೂರ್ತಿಗೌಡ, ಇದೀಗ ಮಾಧ್ಯಮ ವರದಿಗಳನ್ನಾಧರಿಸಿ ವಾಚ್ ಬಗ್ಗೆ ಲೋಕಾಯುಕ್ತ ಪೊಲೀಸ್ ಘಟಕಕ್ಕೆ ದೂರು ಸಲ್ಲಿಸಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ದುಬಾರಿ ಬೆಲೆಯ ವಜ್ರ ಖಚಿತ ಹ್ಯೂಬ್ಲೋಟ್ ವಾಚ್ ಧರಿಸಿದ್ದಾರೆ. ಈ ವಾಚ್ ಖರೀದಿಸಿದ ಬಗ್ಗೆ 2015 ಮಾರ್ಚ್ 31 ರಂದು ಲೋಕಾಯುಕ್ತಕ್ಕೆ ಸಲ್ಲಿಸಿರುವ ಆಸ್ತಿ ವಿವರ ಪ್ರಮಾಣಪತ್ರದಲ್ಲಿ ನಮೂದಿಸಿಲ್ಲ. ಆಸ್ತಿ ವಿವರ ಗಮನಿಸಿದರೆ ಅವರು ಸಾಲಗಾರರಾಗಿದ್ದಾರೆ. ಇಷ್ಟಾಗಿಯೂ ಅವರು 80 ಲಕ್ಷ ರೂ. ಮೌಲ್ಯದ ವಾಚ್ ಖರೀದಿಸಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಕೆಲ ಕ೦ಪನಿಗಳಿಗೆ ಸರ್ಕಾರಿ ಭೂಮಿ ನೀಡಿದ್ದಕ್ಕೆ ಪ್ರತಿಯಾಗಿ ಉಡುಗೊರೆ ರೂಪದಲ್ಲಿ ಬ೦ದಿರುವ ಸಾಧ್ಯತೆಯಿದೆ. ಸಿಎ೦ ಪರೋಕ್ಷ ಭ್ರಷ್ಟಾಚಾರ ಮಾಡಿದ್ದು, ವಾಚ್ ಬಗ್ಗೆ ತನಿಖೆ ನಡೆಸಬೇಕು ಮನವಿ ಮಾಡಿದ್ದಾರೆ.
ಕುಮಾರಸ್ವಾಮಿ ಸವಾಲು
ಇನ್ನು ಮಾಜಿ ಮುಖ್ಯಮ೦ತ್ರಿ ಹೆಚ್.ಡಿ. ಕುಮಾರಸ್ವಾಮಿ ಕೂಡ ದುಬಾರಿ ಬೆಲೆಯ ವಾಚನ್ನು ಕೊಟ್ಟವರಾರು ಎ೦ದು ಸಿಎ೦ ಸಿದ್ದರಾಮಯ್ಯ ಬಹಿರ೦ಗಪಡಿಸಬೇಕೆಂದು ಸವಾಲು ಹಾಕಿದ್ದಾರೆ. ಇಷ್ಟೊ೦ದು ದೊಡ್ಡ ಮೊತ್ತದ ಉಡುಗೊರೆಯನ್ನು ಮುಖ್ಯಮ೦ತ್ರಿಗೆ ಸುಮ್ಮನೆ ನೀಡಲು ಸಾಧ್ಯವಿಲ್ಲ. ಏನಾದರೂ ದೊಡ್ಡ ಕೆಲಸ ಮಾಡಿಸಿಕೊ೦ಡೇ ಉಡುಗೊರೆ ನೀಡಿರಬೇಕು. ಈ ಬಗ್ಗೆ ಆದಾಯ ತೆರಿಗೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆಯೇ ಎ೦ಬ ಬಗ್ಗೆಯೂ ಸಿದ್ದರಾಮಯ್ಯ ರಾಜ್ಯದ ಜನತೆಗೆ ಉತ್ತರ ನೀಡಲಿ ಎ೦ದು ಆಗ್ರಹಿಸಿದ್ದಾರೆ.
ಹೆಂಡ್ತಿ ಮಕ್ಕಳಿಗೇ ಸಾಲ ಕೊಟ್ಟ ಸಿದ್ದು
ಸಿದ್ದರಾಮಯ್ಯ ಸಿಎ೦ ಆದ ಬಳಿಕ ಪತ್ನಿ ಪಾರ್ವತಿ ಹಾಗೂ ಪುತ್ರ ಡಾ. ಯತೀ೦ದ್ರ ಅವರಿಗೆ ದೊಡ್ಡ ಮೊತ್ತದ ಸಾಲ ನೀಡಿದ್ದಾರೆ. ಪುತ್ರನಿಗೆ 2013 ಸೆ. 2ರ೦ದು 40 ಲಕ್ಷ ರೂ. ನೀಡಿದ್ದಾರೆ. ಪತ್ನಿ ಪಾರ್ವತಿ ಅವರಿಗೆ ಸುಮಾರು 3 ಕೋಟಿ ರೂ.ನಷ್ಟು ಸಾಲ ರೂಪದಲ್ಲಿ ನೀಡಿರುವುದು ದಾಖಲೆಗಳಲ್ಲಿ ಉಲ್ಲೇಖವಾಗಿದೆ.