ಬೆಂಗಳೂರು: ಸಾಮಾನ್ಯವಾಗಿ ಅಜ್ಜಿಯರು ಕಥೆ ಹೇಳುವುದನ್ನು ಕೇಳಿದ್ದೇವೆ. ಆದರೆ, ಇಲ್ಲೊಬ್ಬಳು ಅಜ್ಜಿ ಅಪ್ರತಿಮ ಆದರ್ಶದ ಮೂಲಕ ತಾನೇ ಕಥೆಯಾಗಿದ್ದಾಳೆ. ಅಂತಿಂಥ ಕಥೆಯಲ್ಲ; ತನ್ನ ಸಾವಿನ ಬಳಿಕ ದೇಹವನ್ನು ಸರ್ಕಾರಿ ವೈದ್ಯ ಕಾಲೇಜಿಗೆ ದಾನವಾಗಿ ನೀಡಿದ್ದಾಳೆ.
ನಿಧನರಾದಾಗ ಅಜ್ಜಿಯ ವಯಸ್ಸು 98 ವರ್ಷ. ಹೆಸರು ಭಾಗ್ಯಮ್ಮ. ನಗರದ ವಿಶ್ವೇಶ್ವರಪುರದ ದೊಡ್ಡ ಮನೆತನ ಮತ್ತು ಸಂಪ್ರದಾಯಸ್ಥ ಕುಟುಂಬದ ಕೆ.ಎಸ್. ನರಸಯ್ಯ ಶೆಟ್ಟರ ಪತ್ನಿ. ಕೆಲ ವರ್ಷಗಳ ಹಿಂದೆ ಈಕೆ ದೇಹ ದಾನದ ಉಯಿಲು ಬರೆದಿದ್ದರು. ಜ.18ರಂದು ಇಹಲೋಕ ತ್ಯಜಿಸಿದ ಬಳಿಕ ಅವರ ಪಾರ್ಥಿವ ಶರೀರ ಹೋಗಿದ್ದು ಬೆಂಗಳೂರು ಮೆಡಿಕಲ್ ಕಾಲೇಜಿಗೆ.
ಭಾಗ್ಯಮ್ಮ ಅವರಿಗೆ ಕೊ.ನ. ನಾಗರಾಜ್, ಕೊ.ನ. ಪ್ರಕಾಶ್ ಪುತ್ರರು. ನಾಗರತ್ನ, ಶಾಂತಕುಮಾರಿ, ಕಲಾವತಿ ಮತ್ತು ಲೀಲಾವತಿ ಪುತ್ರಿಯರು. ಭಾಗ್ಯಮ್ಮ ಇರುತ್ತಿದ್ದದ್ದು ಪ್ರಕಾಶ್ ಮನೆಯಲ್ಲಿ. ಮೂರು ವರ್ಷದ ಹಿಂದೆ ಭಾಗ್ಯಮ್ಮ ಅನಾರೋಗ್ಯಕ್ಕೆ ತುತ್ತಾಗಿ ಚೇತರಿಸಿಕೊಂಡರು. ವೈಚಾರಿಕತೆ ಬಗ್ಗೆ ಒಲವು ಹೊಂದಿದ್ದ ಸಹೋದರರು ದೇಹ ದಾನದ ಬಗ್ಗೆ ರ್ಚಚಿಸಿದೆವು. ತಾಯಿ ಬಳಿ ಈ ವಿಷಯ ಪ್ರಸ್ತಾಪಿಸಿದಾಗ ಅವರು ಹಿಂದೆಮುಂದೆ ನೋಡದೆ ಒಪ್ಪಿಕೊಂಡರು. ಬೆಂಗಳೂರು ಮೆಡಿಕಲ್ ಕಾಲೇಜಿಗೆ ಹೋಗಿ ವಿಷಯ ತಿಳಿಸಿ, ಅರ್ಜಿ ತಂದು ಉಯಿಲು ಪ್ರಕ್ರಿಯೆ ಪೂರ್ಣಗೊಳಿಸಿದ್ದೆವು. ಅಮ್ಮ ಮೃತರಾದಾಗ ಲಯನ್ಸ್ ಆಸ್ಪತ್ರೆಯವರು ಕಣ್ಣು ತೆಗೆದುಕೊಂಡು ಹೋದರು. ಬೆಂಗಳೂರು ಮೆಡಿಕಲ್ ಕಾಲೇಜಿಗೆ ಶವ ಹಸ್ತಾಂತರಿಸಿದೆವು ಎಂದು ಕೊ.ನ. ನಾಗರಾಜ್ ಹೇಳಿದರು.
ವೈದ್ಯಕೀಯ ಕಾಲೇಜಿನವರು ಕೆಲವು ಅಂಗಗಳನ್ನು ತೆಗೆದುಕೊಂಡು ಶರೀರ ವಾಪಸ್ ಕೊಡುತ್ತಾರೆ ಎಂದೇ ಮೊದಲಿಗೆ ಭಾವಿಸಿದ್ದೆವು. ಆದರೆ ನಮ್ಮ ತಿಳಿವಳಿಕೆ ತಪ್ಪಾಗಿತ್ತು. ಆಸ್ಪತ್ರೆ ಡೀನ್ ಡಾ. ದೇವದಾಸ್, ಈ ಕುರಿತಂತೆ ಸಮರ್ಪಕ ಮಾಹಿತಿ ನೀಡಿದರು. ಚರ್ಮವೂ ಸೇರಿ ದೇಹದ ಎಲ್ಲ ಅವಯವಗಳನ್ನು ಬೇರ್ಪಡಿಸಲಾಗುತ್ತದೆ. ಅಸ್ಥಿಪಂಜರವನ್ನೂ ಉಳಿಸಿಕೊಳ್ಳಲಾಗುತ್ತದೆ. 30 ವೈದ್ಯರು ಸೇರಿ ಅಂಗಬೇರ್ಪಡಿಸುವ ಕಾರ್ಯ ನಡೆಸುತ್ತಾರೆ. ಅಂಗಾಂಗ ಗಳನ್ನು ಅಧ್ಯಯನಕ್ಕೆ ಬಳಸುವುದರಿಂದ ಆ ವಿದ್ಯಾರ್ಥಿಗಳು ವೈದ್ಯರಾಗಲು ಅರ್ಹತೆ ಪಡೆಯುತ್ತಾರೆ. ಈ ಮಾಹಿತಿಯನ್ನು ನಾವು ಫೇಸ್ಬುಕ್ನಲ್ಲಿ ಹಾಕಿದಾಗ ಸಾಕಷ್ಟು ಮಂದಿ ನಮ್ಮಿಂದ ಮಾಹಿತಿ ಪಡೆದರು ಎಂದು ನಾಗರಾಜ್ ತಿಳಿಸಿದರು.
ಅಮ್ಮನ ಬಗ್ಗೆ ಅಪಾರ ಪ್ರೀತಿ ಇತ್ತು. ಆಕೆ ಮಾಡಿದ ಮೌಲಿಕ ಕಾರ್ಯ ಅನೇಕ. ದೇಹದಾನಕ್ಕೆ ಬಂಧು-ಬಳಗದಿಂದಮಿಶ್ರ ಪ್ರತಿಕ್ರಿಯೆ ಬಂತು. ನಮ್ಮ ಉದ್ದೇಶ ಅಚಲವಾಗಿತ್ತು. ನೇತ್ರ ದಾನ ಈಗ ಸಾಮಾನ್ಯ. ಆದರೆ, ದೇಹದಾನದ ಬಗ್ಗೆಯೂ ಜನರಲ್ಲಿ ತಿಳಿವಳಿಕೆ ಹೆಚ್ಚಬೇಕು ಎಂಬುದು ನಾಗರಾಜ್ ಅನಿಸಿಕೆ.
ದೇಹದಾನದಿಂದ ಸಾಕಷ್ಟು ವೈದ್ಯ ವಿದ್ಯಾರ್ಥಿಗಳಿಗೆ ಕಲಿಕೆಗೆ ಅನುಕೂಲವಾಗುತ್ತದೆ. ಹೀಗಾದರೂ ಅಮ್ಮನ ದೇಹ ಉಪಯೋಗ ವಾಗಲಿ. ಇದರಿಂದ ಪ್ರೇರಣೆ ಪಡೆದು ಇನ್ನಷ್ಟು ಜನ ದೇಹದಾನಕ್ಕೆ ಮುಂದಾಗಲಿ ಎಂಬುದು ನಮ್ಮ ಆಶಯ.
| ಕೊ.ನ. ನಾಗರಾಜ್, ಕನ್ನಡ ಹೋರಾಟಗಾರ, ಭಾಗ್ಯಮ್ಮ ಅವರ ಪುತ್ರ
ಸಂಶೋಧನೆಗೆ ಮೃತದೇಹಗಳ ಅವಶ್ಯಕತೆ ಇದೆ. ಇಂತಹ ದಾನಿಗಳು ಮುಂದೆ ಬರುವುದಿಂದ ವಿದ್ಯಾರ್ಥಿಗಳ ಕಲಿಕೆಗೆ ಅನುಕೂಲ. ಭಾಗ್ಯಮ್ಮ ದೇಹದ ಚರ್ಮದಿಂದ ಹಿಡಿದು ಮೂಳೆವರೆಗೆ ಎಲ್ಲವನ್ನೂ ಅಧ್ಯಯನಕ್ಕೆ ಬಳಸಿಕೊಳ್ಳುತ್ತೇವೆ.
| ಡಾ. ಪಿ.ಕೆ. ದೇವದಾಸ್, ಡೀನ್ ಹಾಗೂ ನಿರ್ದೇಶಕ, ಬಿಎಂಸಿ
ಭಾಗ್ಯಮ್ಮನವರ ಹಿನ್ನೆಲೆ
ಭಾಗ್ಯಮ್ಮ ಅವರು ಚಿಟ್ಲೂರು ಕುಟುಂಬಕ್ಕೆ ಸೇರಿದ ನರಸಯ್ಯ ಶೆಟ್ಟರನ್ನು ವಿವಾಹವಾಗಿದ್ದರು. ಚಿಟ್ಲೂರು ಕುಟುಂಬದವರು ವಿಜಯನಗರ ಅರಸರ ಕಾಲದಲ್ಲಿ ಹಂಪಿಯಯಲ್ಲಿ ವ್ಯಾಪಾರ ಮಾಡುತ್ತಿದ್ದರು. ಹಂಪಿ ಪತನದ ನಂತರ ಆಂಧ್ರಕ್ಕೆ ತೆರಳಿ, ಅಲ್ಲಿಂದ ಕೊರಟಗೆರೆಗೆ ಬಂದು ನೆಲೆಸಿದರು.