ಬೆಳಗಾವಿ: ಹೆಲ್ಮೆಟ್ ಧರಿಸದೆ ಬೈಕ್ ಚಾಲನೆ ಮಾಡುತ್ತಿದ್ದ ಅರೆ ಸೇನಾಪಡೆ ಯೋಧರೊಬ್ಬರು ತಮ್ಮನ್ನು ತಡೆದು, ಪ್ರಕರಣ ದಾಖಲಿಸಲು ಮುಂದಾದ ಸಂಚಾರ ಪೊಲೀಸ್ ಠಾಣೆ ಮಹಿಳಾ ಸಬ್‌ಇನ್‌ಸ್ಪೆಕ್ಟರ್ ಕೃಷ್ಣವೇಣಿ ಅವರ ಮೇಲೆ ಸೋಮವಾರ ರಾತ್ರಿ ಹಲ್ಲೆ ನಡೆಸಿದ್ದಾರೆ.
ಅರೆಸೇನಾ ಪಡೆಯ 12ನೇ ರೆಜಿಮೆಂಟ್‌ನ ವಿಶೇಷ ಪಡೆಯಲ್ಲಿ ನಾಗಾಲ್ಯಾಂಡ್‌ನಲ್ಲಿ ಸೇವೆ ಸಲ್ಲಿಸುತ್ತಿರುವ ಬೆಳಗಾವಿ ತಾಲ್ಲೂಕಿನ ಕುದ್ರೆಮನಿ ಗ್ರಾಮ ಮೂಲದ ಡಾಕ್ಲು ನಾರಾಯಣ ಪನಾಳಕರ ಹಲ್ಲೆ ನಡೆಸಿದ ವ್ಯಕ್ತಿ.
ನಗರದ ಧರ್ಮವೀರ ಸಂಭಾಜಿ ವೃತ್ತದಲ್ಲಿ ಕರ್ತವ್ಯ ನಿರತರಾಗಿದ್ದ ಕೃಷ್ಣವೇಣಿ, ಹೆಲ್ಮೆಟ್ ಧರಿಸದೆ ವಾಹನ ಚಾಲನೆ ಮಾಡುತ್ತ ಬಂದ ಯೋಧ ಡಾಕ್ಲು ಅವರನ್ನು ತಡೆದಾಗ, ವಾಗ್ವಾದ ನಡೆಯಿತು. ಮಾತಿಗೆ ಮಾತು ಬೆಳೆದು ಪರಸ್ಪರ ಹಲ್ಲೆ ನಡೆಸಿದರು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದರು.
ಘಟನಾ ಸ್ಥಳದಲ್ಲಿ ನೂರಾರು ಜನ ಜಮಾಯಿಸಿದ್ದರಿಂದ ವಾಹನ ಸಂಚಾರಕ್ಕೆ ಅಡಚಣೆ ಉಂಟಾಯಿತಲ್ಲದೆ, ಜನರನ್ನು ಚದುರಿಸಲು ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದರು.
‘ಹೆಲ್ಮೆಟ್ ಧರಿಸದೆ ಬೈಕ್ ಚಾಲನೆ ಮಾಡುತ್ತಿದ್ದ ಡಾಕ್ಲು ಅವರಿಗೆ ದಂಡ ನೀಡುವಂತೆ ತಿಳಿಸಿದ್ದಕ್ಕೆ ತಕರಾರು ತೆಗೆದ ಸಂದರ್ಭ ಕೃಷ್ಣವೇಣಿ ಸಮಜಾಯಿಷಿ ನೀಡಲು ಮುಂದಾದಾಗ ಹಲ್ಲೆ ನಡೆಸಿದ್ದಾರೆ’ ಎಂದು ಸಂಚಾರ ವಿಭಾಗದ ಡಿಸಿಪಿ ಅಮರನಾಥ ರೆಡ್ಡಿ ಪ್ರಜಾವಾಣಿಗೆ ತಿಳಿಸಿದರು.
ಡಾಕ್ಲು ಮದ್ಯದ ಸೇವನೆ ಮಾಡಿರಬಹುದು ಎಂದು ಶಂಕಿಸಲಾಗಿದ್ದು, ಜಿಲ್ಲಾ ಆಸ್ಪತ್ರೆಯಲ್ಲಿ ವೈದ್ಯಕೀಯ ತಪಾಸಣೆಗೆ ಒಳಪಡಿಸಲಾಗಿದೆ. ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪ ಮಾಡಿ ಕೃಷ್ಣವೇಣಿ ದೂರು ನೀಡಿದ್ದು, ಪ್ರಕರಣ ದಾಖಲಿಸಲಾಗಿದೆ ಎಂದು ಅವರು ಹೇಳಿದರು.