
ಬೆಂಗಳೂರು, ಡಿ.23- ಕೇಂದ್ರ ಹಾಗೂ ರಾಜ್ಯ ಸರ್ಕಾರ ಗಳಿಗೆ ಸವಾಲಾಗಿರುವ ಮಾರಕ ರೋಗ ಕ್ಯಾನ್ಸರ್‌ಗೆ ಚಿಕಿತ್ಸೆ ಗ್ರಾಮೀಣ ಹಾಗೂ ಬಡ ರೋಗಿಗಳಿಗೆ ಕೈಗೆಟಕುವ ದರದಲ್ಲಿ ದೊರೆಯುವಂತಾಗಬೇಕು ಎಂದು ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಇಂದಿಲ್ಲಿ ತಿಳಿಸಿದರು.
ಕಿದ್ವಾಯಿ ಸ್ಮಾರಕ ಗ್ರಂಥಿ ಸಂಸ್ಥಾಪನಾ ದಿನದ ಉದ್ಘಾಟನಾ ಸಮಾರಂಭ ಹಾಗೂ ರಾಜ್ಯ ಕ್ಯಾನ್ಸರ್‌ಸಂಸ್ಥೆಗೆ ಶಿಲಾನ್ಯಾಸ ನೆರ ವೇರಿಸಿ ಮಾತನಾಡಿದ ಅವರು, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕ್ಯಾನ್ಸರ್ ರೋಗ ನಿಯಂತ್ರಣಕ್ಕೆ ಸಾಕಷ್ಟು ಕ್ರಮಕೈಗೊಂಡಿದ್ದರೂ ಸವಾಲಾಗಿಯೇ ಉಳಿದಿದೆ. ನಮ್ಮ ದೇಶದಲ್ಲೂ ಕ್ಯಾನ್ಸರ್ ರೋಗ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ.
ಇಂತಹ ಮಾರಕ ರೋಗದಿಂದ ಬಳಲುವವರಿಗೆ ಅತ್ಯಾಧುನಿಕ ಚಿಕಿತ್ಸಾ ವ್ಯವಸ್ಥೆ ಮೂಲಕ ಅಗ್ಗದ ದರದಲ್ಲಿ ದೊರೆಯುವಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕ್ರಮಕೈಗೊಳ್ಳಬೇಕು ಎಂದರು.
ದಿನದಿಂದ ದಿನಕ್ಕೆ ಈ ರೋಗ ಉಲ್ಬಣಗೊಳ್ಳುತ್ತಿರುವುದು ಆತಂಕಕಾರಿ ವಿಚಾರವಾಗಿದೆ. ಆರಂಭಿಕ ಹಂತದಲ್ಲಿಯೇ ರೋಗವನ್ನು ಪತ್ತೆ ಹಚ್ಚಿ ಚಿಕಿತ್ಸೆ ನೀಡುವ ಮೂಲಕ ರೋಗ ಹರಡುವಿಕೆಯನ್ನು ತಡೆಗಟ್ಟಬಹುದು. ರೋಗ ವಾಸಿ ಮಾಡುವುದಕ್ಕಿಂತ ರೋಗ ಬಾರದಂತೆ ನೋಡಿಕೊಳ್ಳುವುದು ಸೂಕ್ತ ಎಂದು ಅವರು ತಿಳಿಸಿದರು.
ಕ್ಯಾನ್ಸರ್ ರೋಗದ ಚಿಕಿತ್ಸಾ ವೆಚ್ಚ ದುಬಾರಿಯಾಗಿದ್ದು, ಬಡ ರೋಗಿಗಳಿಗೆ ಕಷ್ಟವಾಗುತ್ತಿದೆ. ಸಾಕ್ಷರತೆ ಪ್ರಮಾಣ ಹೆಚ್ಚಿಸುವ ಮೂಲಕ ಹಾಗೂ ರೋಗ ತಪಾಸಣೆ ಶಿಬಿರಗಳನ್ನು ಹೆಚ್ಚಾಗಿ ಹಮ್ಮಿಕೊಳ್ಳುವ ಮೂಲಕ ಜನರಲ್ಲಿ ರೋಗದ ಬಗ್ಗೆ ಜಾಗೃತಿ ಮೂಡಿಸಬೇಕು. ಕ್ಯಾನ್ಸರ್ ರೋಗದಿಂದ ಉಂಟಾಗುವ ದುಷ್ಪರಿಣಾಮಗಳ ಬಗ್ಗೆ ಅರಿವು ಮೂಡಿಸಬೇಕು ಎಂದು ಹೇಳಿದರು. ದೇಶದ ಹಲವೆಡೆ ಇರುವ ಪ್ರಾದೇಶಿಕ ಕ್ಯಾನ್ಸರ್ ಸಂಸ್ಥೆಗಳನ್ನು ಮೇಲ್ದರ್ಜೆಗೇರಿಸಲು ಹೆಚ್ಚಿನ ಮೂಲಸೌಕರ್ಯಗಳನ್ನು ಸರ್ಕಾರಗಳು ಕಲ್ಪಿಸಬೇಕು. ಕಿದ್ವಾಯಿ ಆಸ್ಪತ್ರೆಗೂ ರಾಜ್ಯ ಕ್ಯಾನ್ಸರ್ ಸಂಸ್ಥೆ ಮಾನ್ಯತೆ ನೀಡಬೇಕು. ಅಭಿವೃದ್ಧಿ ಶೀಲವಾದ ನಮ್ಮ ರಾಷ್ಟ್ರದಲ್ಲಿ ಆರೋಗ್ಯ ಸೇವೆ ಅಷ್ಟು ಸುಲಭವಾಗಿಲ್ಲ. ಆರೋಗ್ಯ ಸೇವೆ ಉತ್ತಮವಾಗಲು ಮೂಲಸೌಕರ್ಯವನ್ನೂ ಸಹ ಒದಗಿಸಬೇಕಾಗಿದೆ ಎಂದರು.
ಮಾರಕ ರೋಗಗಳಾದ ಏಡ್ಸ್ ಮತ್ತು ಕ್ಯಾನ್ಸರ್ ರೋಗಗಳನ್ನು ಸಂಪೂರ್ಣವಾಗಿ ನಿಯಂತ್ರಿಸಲು ಮತ್ತು ಗುಣಪಡಿಸಲು ಸಾಧ್ಯವಾಗಿಲ್ಲ. ಕಿದ್ವಾಯಿ ಆಸ್ಪತ್ರೆ ನಾಲ್ಕು ದಶಕಗಳಿಂದಲೂ ಜನರಿಗೆ ಉತ್ತಮ ಸೇವೆ ಸಲ್ಲಿಸುವ ಮೂಲಕ ಮುಂಚೂಣಿಯಲ್ಲಿದೆ. ರಾಷ್ಟ್ರದ ಸಿಲಿಕಾನ್ ವ್ಯಾಲಿಯಾದ ಬೆಂಗಳೂರಿನಲ್ಲಿ ಕಿದ್ವಾಯಿ ಕ್ಯಾನ್ಸರ್ ಸಂಸ್ಥೆ ಬಡವರಿಗೆ ಉತ್ತಮ ಸೇವೆ ನೀಡುತ್ತಿದೆ ಎಂದು ಪ್ರಣಬ್ ಮೆಚ್ಚುಗೆ ವ್ಯಕ್ತಪಡಿಸಿದರು. ಪಿಸಿಎಂಆರ್ ಪ್ರಕಾರ ಪ್ರತಿ 15 ಮಂದಿ ಪುರುಷರಲ್ಲಿ ಒಬ್ಬರಿಗೆ, 12 ಮಂದಿ ಮಹಿಳೆಯರಲ್ಲಿ ಒಬ್ಬರಿಗೆ ಅದರಲ್ಲೂ ನಗರ ಪ್ರದೇಶದಲ್ಲಿ ಹೆಚ್ಚಾಗಿ ಕ್ಯಾನ್ಸರ್ ರೋಗ ಕಂಡುಬರುತ್ತಿದೆ ಎಂದು ತಿಳಿಸಿದರು. ರಾಜ್ಯಪಾಲ ವಿ.ಆರ್.ವಾಲಾ, ಕೇಂದ್ರ ರಸಗೊಬ್ಬರ ಸಚಿವ ಅನಂತಕುಮಾರ್, ಕಿದ್ವಾಯಿ ಆಸ್ಪತ್ರೆ ನಿರ್ದೇಶಕ ಡಾ.ಕೆ.ಬಿ.ಲಿಂಗೇಗೌಡ, ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣ ಪ್ರಕಾಶ್ ಪಾಟೀಲ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ಯು.ಟಿ.ಖಾದರ್, ಡಾ.ಪ್ರಮೋದ್ ಮತ್ತಿತರರು ಉಪಸ್ಥಿತರಿದ್ದರು.