ಕರ್ನಾಟಕ

ಗದ್ದಲದ ಮಧ್ಯೆ ಚಳಿಗಾಲದ ಅಧಿವೇಶನ ಮುಕ್ತಾಯ

Pinterest LinkedIn Tumblr

Marshal seen clicking a photograph of MLC TA Saravana and Minister Ambareesh during the leisure time of the Council Session at Vidhan Soudha, in Bengaluru on Friday 27th November 2015 Pics: www.pics4news.com

ಬೆಂಗಳೂರು, ನ. 27: ತೀವ್ರ ಸ್ವರೂಪದ ಬರ, ರೈತರ ಆತ್ಮಹತ್ಯೆ ಸೇರಿದಂತೆ ರಾಜ್ಯದ ಜ್ವಲಂತ ಸಮಸ್ಯೆಗಳಿಗೆ ಸೂಕ್ತ ‘ಪರಿಹಾರ’ ಕಂಡುಕೊಳ್ಳಲು ಕರೆದಿದ್ದ ಹತ್ತು ದಿನಗಳ ವಿಧಾನ ಮಂಡಲದ ಚಳಿಗಾಲದ ಅಧಿವೇಶನ ಮೂವರು ಶಾಸಕರಿಗೆ ಸಂತಾಪ, ಸಚಿವ ಆಂಜನೇಯ ರಾಜೀನಾಮೆಯ ಗದ್ದಲ-ವಾಗ್ವಾದದಲ್ಲೇ ಮುಕ್ತಾಯ ಕಂಡಿದೆ.

ಹದಿನಾಲ್ಕನೆ ವಿಧಾನ ಮಂಡಲದ ಮುಂದುವರಿದ ಅಧಿವೇಶನ ನ.16ರಿಂದ 27ರ ವರೆಗೆ ಹತ್ತು ದಿನಗಳಲ್ಲಿ ಕೇವಲ 24ಗಂಟೆ 10ನಿಮಿಷಗಳ ಕಾಲವಷ್ಟೇ ಅಧಿವೇಶನದ ಕಲಾಪ ನಡೆದಿರುವುದು ಗಮನಾರ್ಹ ಸಂಗತಿಯಾಗಿದೆ.

ಹತ್ತು ದಿನಗಳ ಚಳಿಗಾಲದ ಅಧಿವೇಶನದಲ್ಲಿ ಮೊದಲ ದಿನ ಶಾಸಕ ವೆಂಕಟೇಶ ನಾಯಕ ಅವರ ನಿಧನಕ್ಕೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಆ ಬಳಿಕ ಬೀದರ್ ಶಾಸಕ ಡಾ. ಗುರುಪಾದಪ್ಪ ನಾಗಮಾರಪಲ್ಲಿ ಮತ್ತು ಹೆಬ್ಬಾಳ ಕ್ಷೇತ್ರದ ಶಾಸಕ ಜಗದೀಶ್ ಕುಮಾರ್ ಅವರ ನಿಧನಕ್ಕೆ 2ದಿನ ಸಂತಾಪದ ಬಳಿಕ ಮೃತರ ಗೌರವಾರ್ಥ ಕಲಾಪ ಮುಂದೂಡಲಾಗಿತ್ತು. ಉಳಿದ ಏಳು ದಿನಗಳಲ್ಲಿ ರಾಜ್ಯದಲ್ಲಿ ಬರ ಪರಿಸ್ಥಿತಿ ಹಾಗೂ ರೈತರ ಆತ್ಮಹತ್ಯೆ ಕುರಿತು ಸುದೀರ್ಘ ಚರ್ಚೆ ನಡೆಸಲಾಯಿತು. ಈ ಚರ್ಚೆಗೆ ರಾಜ್ಯ ಸರಕಾರ ಉತ್ತರ ನೀಡುವ ವೇಳೆಗೆ ಬಿಜೆಪಿ ಸದಸ್ಯರು ಆಂಜನೇಯ ರಾಜೀನಾಮೆಗೆ ಪಟ್ಟು ಹಿಡಿದ ಹಿನ್ನೆಲೆಯಲ್ಲಿ ಎರಡು ದಿನಗಳ ಕಲಾಪ ವ್ಯರ್ಥವಾಯಿತು.

ಈ ಮಧ್ಯೆ ಲೋಕಾಯುಕ್ತ ನ್ಯಾಯಮೂರ್ತಿ ವೈ.ಭಾಸ್ಕರ್ ರಾವ್ ಹಾಗೂ ಉಪ ಲೋಕಾಯುಕ್ತ ನ್ಯಾಯಮೂರ್ತಿ ಸುಭಾಷ್ ಬಿ.ಅಡಿ ‘ಪದಚ್ಯುತಿ’ ಪ್ರಸ್ತಾವವನ್ನು ಅಂಗೀಕರಿಸಲಾಗಿದೆ. ಆದರೆ, ನ್ಯಾ.ಸುಭಾಷ್ ಅಡಿ ಪದಚ್ಯುತಿಗೆ ಬಿಜೆಪಿ ತೀವ್ರ ವಿರೋಧ ವ್ಯಕ್ತಪಡಿಸಿದೆ.

ಪಂಚಾಯತ್ ರಾಜ್ ವ್ಯವಸ್ಥೆ ಸಬಲೀಕರಣ ಸಂಬಂಧದ ಮಹತ್ವದ ಕರ್ನಾಟಕ ಪಂಚಾಯತ್ ರಾಜ್ (ಎರಡನೆ ತಿದ್ದುಪಡಿ) ವಿಧೇಯಕ-2015ನ್ನು ಯಾವುದೇ ಚರ್ಚೆಯಿಲ್ಲದೆ ಅಂಗೀಕರಿಸಲಾಗಿದೆ. ಅಲ್ಲದೆ, ಇನ್ನು ಐದು ವಿಧೇಯಕಗಳಿಗೆ ಒಪ್ಪಿಗೆ ಪಡೆದುಕೊಳ್ಳಲಾಗಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಡಿಸಿರುವ 2015-16ನೆ ಸಾಲಿನ ಪೂರಕ ಅಂದಾಜುಗಳ ಎರಡನೆ ಕಂತನ್ನು ಅಂಗೀಕರಿಸಲಾಗಿದ್ದು, ರಾಜ್ಯ ಹಣಕಾಸಿನ ಮಧ್ಯವಾರ್ಷಿಕ ಪರಿಶೀಲನಾ ವರದಿಯನ್ನು ಮಂಡಿಸಲಾಗಿದೆ. ಸದನದಲ್ಲಿ ಉತ್ತರಿಸುವ 150 ಪ್ರಶ್ನೆಗಳ ಪೈಕಿ 142ಪ್ರಶ್ನೆಗಳಿಗೆ ಹಾಗೂ ಲಿಖಿತ ಮೂಲಕ ಉತ್ತರಿಸುವ 2,110 ಪ್ರಶ್ನೆಗಳ ಪೈಕಿ 1,572 ಪ್ರಶ್ನೆಗಳಿಗೆ ಉತ್ತರ ನೀಡಲಾಗಿದೆ.

‘ಸುಗಮ ಕಲಾಪ’ಕ್ಕೆ ಸಹಕರಿಸಿದ ಸಭಾನಾಯಕ ಮುಖ್ಯಮಂತ್ರಿ ಸಿದ್ಧರಾಮಯ್ಯ, ವಿಪಕ್ಷ ನಾಯಕ ಜಗದೀಶ್ ಶೆಟ್ಟರ್, ಸಂಪುಟ ಸಚಿವರು, ಉಪ ಸಭಾಧ್ಯಕ್ಷರು ಸೇರಿದಂತೆ ಎಲ್ಲ ಸದಸ್ಯರಿಗೆ ಸ್ಪೀಕರ್ ಕಾಗೋಡು ತಿಮ್ಮಪ್ಪ ಅವರು ಅಭಿನಂದಿಸಿ ರಾಷ್ಟ್ರಗೀತೆಯೊಂದಿಗೆ ಸದನವನ್ನು ಅನಿರ್ದಿಷ್ಟಾವಧಿಗೆ ಮುಂದೂಡಿದರು.

Write A Comment