ಕರ್ನಾಟಕ

ಕೆಂಪೇಗೌಡರ ಸಮಾಧಿ ಸ್ಥಳ ಇರುವ ಕೆಂಪಾಪುರ ಗ್ರಾಮ ದತ್ತು ಸ್ವೀಕಾರಕ್ಕೆ ಮನವಿ

Pinterest LinkedIn Tumblr

kempeಬೆಂಗಳೂರು,ನ.22- ನಾಡಪ್ರಭು ಕೆಂಪೇಗೌಡರ ಸಮಾಧಿ ಸ್ಥಳ ಪತ್ತೆಯಾಗಿರುವ ಮಾಗಡಿ ಸಮೀಪದ ಕೆಂಪಾಪುರ ಗ್ರಾಮವನ್ನು ದತ್ತು ಪಡೆದುಕೊಂಡು ಅಭಿವೃದ್ಧಿ ಪಡಿಸುವಂತೆ ಇಂಧನ ಸಚಿವ ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದಾರೆ.  ಕೆಂಪಾಪುರದಲ್ಲಿರುವ ಗೋಪುರ ನಾಡಪ್ರಭು ಕೆಂಪೇಗೌಡರ ಸಮಾಧಿ ಸ್ಥಳ ಎನ್ನುವುದಕ್ಕೆ ಪುರಾವೆ ದೊರೆತಿ ರುವ ಹಿನ್ನೆಲೆಯಲ್ಲಿ ಸರ್ಕಾರ ಕೂಡಲೇ ಆ ಪ್ರದೇಶವನ್ನು ಸಮಗ್ರವಾಗಿ ಅಭಿವೃದ್ಧಿಪಡಿಸಲು ಮುಂದಾಗಬೇಕು ಎಂದು ಡಿ.ಕೆ.ಶಿವಕುಮಾರ್ ಪತ್ರದಲ್ಲಿ ಸಲಹೆ ನೀಡಿದ್ದಾರೆ.

ಬೆಂಗಳೂರು ಅಧ್ಯಯನ ಕೇಂದ್ರ ಹಾಗೂ ಪ್ರಾಚ್ಯವಸ್ತು ನಿರ್ದೇಶನಾಲಯ ಮಾಗಡಿಯಲ್ಲಿ ಪತ್ತೆಯಾಗಿರುವುದು ಕೆಂಪೇಗೌಡರ ಸಮಾಧಿ ಸ್ಥಳ ಎನ್ನುವುದನ್ನು ಖಚಿತ ಪಡಿಸಿರುವ ಹಿನ್ನೆಲೆಯಲ್ಲಿ ಡಿಕೆಶಿ ಪತ್ರ ಬರೆದಿದ್ದಾರೆ.

ನೀಲನಕ್ಷೆ ಸಿದ್ಧ:ಪ್ರಾಚ್ಯವಸ್ತು ನಿರ್ದೇಶನಾಲಯ ಕೆಂಪಾಪುರದಲ್ಲಿ ಪತ್ತೆಯಾಗಿರುವುದು ಕೆಂಪೇಗೌಡರ ಸಮಾಧಿ ಎಂದು ಖಚಿತ ಪಡಿಸಿರುವುದಲ್ಲದೆ, ಆ ಪ್ರದೇಶವನ್ನು ಪ್ರಮುಖ ಯಾತ್ರಾ ಸ್ಥಳವನ್ನಾಗಿ ಪರಿವರ್ತಿಸುವಂತೆ ಸರ್ಕಾರಕ್ಕೆ ಮನವಿ ಮಾಡಿಕೊಂಡಿರುವ ಹಿನ್ನೆಲೆಯಲ್ಲಿ ಕೆಂಪಾಪುರವನ್ನು ಸಮಗ್ರವಾಗಿ ಅಭಿವೃದ್ಧಿಪಡಿಸುವ ಕಾಮಗಾರಿಗೆ ಸರ್ಕಾರ ನೀಲನಕ್ಷೆ ಸಿದ್ಧಪಡಿಸುತ್ತಿದೆ ಎನ್ನಲಾಗಿದೆ.

ಸಮಾಧಿ ಸ್ಥಳದ ಅಭಿವೃದ್ಧಿಗೆ ಸುಮಾರು ಎರಡೂವರೆ ಕೋಟಿ ರೂ.ಗಳ ಅನುದಾನ ನೀಡಲು ತೀರ್ಮಾನಿಸಲಾಗಿದ್ದು, ಗೋಪುರದ ಸುತ್ತಮುತ್ತ ತಂತಿಬೇಲಿ ನಿರ್ಮಿಸಿ ಸಮಾಧಿ ಸ್ಥಳವನ್ನು ಸಂರಕ್ಷಿಸುವ ಕಾರ್ಯವು ಸದ್ಯದಲ್ಲೇ ಆರಂಭವಾಗಲಿದೆ. ನಾಡಪ್ರಭು ಕೆಂಪೇಗೌಡ ಹಿತರಕ್ಷಣಾ ವೇದಿಕೆ ಪದಾಧಿಕಾರಿಗಳು ಎ.ಎಚ್.ಬಸವರಾಜ್ ನೇತೃತ್ವದಲ್ಲಿ ಹಲವಾರು ಪ್ರಮುಖ ನಾಯಕರನ್ನು ಭೇಟಿಯಾಗಿ ಸಮಾಧಿ ಸ್ಥಳವನ್ನು ಅಭಿವೃದ್ಧಿಪಡಿಸುವಂತೆ ಮನವಿ ಮಾಡಿಕೊಂಡಿದ್ದನ್ನು ಇಲ್ಲಿ ಸ್ಮರಿಸಬಹುದು.

Write A Comment