ಕರ್ನಾಟಕ

ಹುಚ್ಚ ವೆಂಕಟ್ ಬಂಧನ: ಇಂದು ಕೋರ್ಟ್’ಗೆ ಹಾಜರು ಸಾಧ್ಯತೆ

Pinterest LinkedIn Tumblr

huccha

ಬೆಂಗಳೂರು: ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಅವರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿ ದಲಿತ ಸಂಘಟನೆಗಳ ಆಕ್ರೋಶಕ್ಕೆ ಗುರಿಯಾಗಿದ್ದ ಬಿಗ್ ಬಾಸ್ ಖ್ಯಾತಿಯ, ನಟ ಹುಚ್ಚ ವೆಂಕಟ್ ಅವರನ್ನು ಬಸವೇಶ್ವರನಗರ ಠಾಣೆ ಪೊಲೀಸರು ಶುಕ್ರವಾರ ಮ್ಯಾಜಿಸ್ಟ್ರೇಟ್ ನ್ಯಾಯಾಧೀಶರ ಮುಂದೆ ಹಾಜರು ಪಡಿಸಲಿದ್ದಾರೆ ಎಂದು ತಿಳಿದುಬಂದಿದೆ.

ನಿನ್ನೆ ರಾತ್ರಿ ಹುಚ್ಚ ವೆಂಕಟ್ ಅವರನ್ನು ಬಸವೇಶ್ವರನಗರ ಠಾಣೆಯ ಪೊಲೀಸರು ವಶಕ್ಕೆ ಪಡೆದು ಪ್ರಕರಣ ಕುರಿತಂತೆ ವಿಚಾರಣೆ ನಡೆಸಿದ್ದರು. ವಿಚಾರಣೆ ಬಳಿಕ ರಾತ್ರಿ 10.30ರ ಸುಮಾರಿಗೆ ವೆಂಕಟ್ ಅವರನ್ನು ಬಂಧನಕ್ಕೊಳಪಡಿಸಿದ್ದರು.

ಪ್ರಕರಣ ಸಂಬಂಧ ಈಗಾಗಲೇ ವೆಂಕಟ್ ಅವರನ್ನು ಪೊಲೀಸರು ವಿಚಾರಣೆ ನಡೆಸಿದ್ದು, ಮ್ಯಾಜಿಸ್ಟ್ರೇಟ್ ನ್ಯಾಯಾಧೀಶರ ಮುಂದೆ ಇಂದು ಹಾಜರು ಪಡಿಸಲಿದ್ದಾರೆಂದು ತಿಳಿದುಬಂದಿದೆ.

ಖಾಸಗಿ ಸುದ್ದಿ ವಾಹಿನಿಯೊಂದರ ಚರ್ಚೆಯಲ್ಲಿ ಪಾಲ್ಗೊಂಡಿದ್ದ ವೆಂಕಟ್ ಅವರು ಅಂಬೇಡ್ಕರ್ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದರು. ಇದರಿಂದ ಆಕ್ರೋಶಗೊಂಡಿದ್ದ ಅಂಬೇಡ್ಕರ್ ಸೇನೆಯ ಕಾರ್ಯಕರ್ತರು ಬುಧವಾರ ಯುಬಿ ಸಿಟಿ ಸಿಗ್ನಲ್ ಬಳಿ ಹುಚ್ಚ ವೆಂಕಟ್‍ಗೆ ಮಸಿ ಎರಚಿ ಪ್ರತಿರೋಧ ವ್ಯಕ್ತಪಡಿಸಿದ್ದರು. ಅಲ್ಲದೆ, ವೆಂಕಟ್ ಹೇಳಿಕೆ ವಿರುದ್ಧ ಪ್ರತಿಭಟನೆಗಳನ್ನು ನಡೆಸಿದ್ದರು.

ಬುಧವಾರ ಸಂಜೆ ಕೂಡ ಮೈಸೂರು ರಸ್ತೆಯಲ್ಲಿರುವ ಜ್ಞಾನಭಾರತಿ ಆವರಣದಲ್ಲಿ ದಲಿತ ಸಂಘಟನೆಗಳು ಮತ್ತು ಕೆಲ ವಿದ್ಯಾರ್ಥಿ ಸಂಘಟನೆಗಳು ಅಂಬೇಡ್ಕರ್ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿರುವ ವೆಂಕಟ್ ಅವರನ್ನು ಬಂಧಿಸಬೇಕು ಎಂದು ಒತ್ತಾಯಿಸಿದ್ದವು. ಅಲ್ಲದೆ ಕೆಲ ದಲಿತ ಪರ ಸಂಘಟನೆಗಳು ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ದೂರನ್ನು ಕೂಡ ನೀಡಿದ್ದವು. ಬಸವೇಶ್ವರನಗರ ಪೊಲೀಸ್ ಠಾಣೆಯಲ್ಲಿ ದೂರು ಹಿನ್ನಲೆಯಲ್ಲಿ ಕಾರ್ಯಪ್ರವೃತ್ತರಾದ ಪೊಲೀಸರು ನಿನ್ನೆ ಹುಚ್ಚ ವೆಂಕಟ್ ಅವರನ್ನು ವಶಕ್ಕೆ ಪಡೆದಿದ್ದರು.

Write A Comment