ಕರ್ನಾಟಕ

ಎಂಡೋ ಸಲ್ಫಾನ್ ಸಂತ್ರಸ್ತರ ಮಾಸಾಶನ ಬಿಡುಗಡೆಗೆ ಆಗ್ರಹ

Pinterest LinkedIn Tumblr

Minister for Health UT Khader met the victims of Endosulfan pesticide during their protest at Freedom Park insisting on the fulfillment of their demands in Bengaluru on Wednesday Nov 18 2015 - KPN ### Protest by Victims of Endosulfan pesticide

ಬೆಂಗಳೂರು, ನ. 18: ಎಂಡೋ ಸಲ್ಫಾನ್ ಸಂತ್ರಸ್ತರಿಗೆ ಈ ಕೂಡಲೇ ಸ್ಥಗಿತಗೊಂಡಿರುವ ಮಾಸಾಶನ ಬಿಡುಗಡೆಗೊಳಿಸುವ ಜೊತೆಗೆ ಸೂಕ್ತ ಸೌಲಭ್ಯ ಒದಗಿಸಬೇಕೆಂದು ಕೊಕ್ಕಡ-ಎಂಡೋ ವಿರೋಧಿ ಹೋರಾಟ ಸಮಿತಿ ಆಗ್ರಹಿಸಿದೆ. ಶೀಘ್ರವಾಗಿ ಮಾಸಾಶನ ಬಿಡುಗಡೆಗೊಳಿಸುವಂತೆ ಆಗ್ರಹಿಸಿ ಬುಧವಾರ ನಗರದ ಫ್ರೀಡಂಪಾರ್ಕ್‌ನಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಕೊಕ್ಕಡ ಅಂಚೆಯ ಎಂಡೋ ವಿರೋಧಿ ಹೋರಾಟ ಸಮಿತಿ ಹಾಗೂ ನೂರಕ್ಕೂ ಹೆಚ್ಚು ಎಂಡೋ ಸಲ್ಫಾನ್ ಸಂತ್ರಸ್ತರು ಬೃಹತ್ ಧರಣಿ ನಡೆಸಿದರು.

ಧರಣಿ ನೇತೃತ್ವವಹಿಸಿ ಮಾತನಾಡಿದ ಕೊಕ್ಕಡ-ಎಂಡೋ ವಿರೋಧಿ ಹೋರಾಟ ಸಮಿತಿ ಅಧ್ಯಕ್ಷ ಶ್ರೀಧರ ಗೌಡ, ಎಂಡೋ ಸಲ್ಫಾನ್ ಸಂತ್ರಸ್ತರಿಗೆ ಸೂಕ್ತ ಮಾಸಾಶನ ಚಿಕಿತ್ಸೆ ಪುನರ್ವಸತಿಗಳನ್ನು ಕಲ್ಪಿಸುವಂತೆ ಈಗಾಗಲೇ ಹೈಕೋರ್ಟ್ ಆದೇಶ ನೀಡಿದೆ. ಆದರೆ, ಇದುವರೆಗೂ ರಾಜ್ಯ ಸರಕಾರ ಯಾವುದೇ ದಿಟ್ಟ ಕ್ರಮ ಕೈಗೊಂಡಿಲ್ಲ. ಅಲ್ಲದೆ, ಆರು ತಿಂಗಳಿಂದ ಎಂಡೋ ಸಂತ್ರಸ್ತರಿಗೆ ಮಾಸಿಕ ಪಿಂಚಣಿಯೂ ಬರುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಮಾಸಾಶನ ನೀಡುವಂತೆ ಒತ್ತಾಯಿಸಿ ಈಗಾಗಲೇ ಮಂಗಳೂರು ಮತ್ತು ಪುತ್ತೂರು ಸಹಾಯಕ ಆಯುಕ್ತ ಕಚೇರಿ ಎದುರು ಧರಣಿ ನಡೆಸಿ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಕೇರಳ ಸರಕಾರ ಎಂಡೋ ಸಂತ್ರಸ್ತರಿಗೆ ತಲಾ 5 ಲಕ್ಷ ರೂ. ಪರಿಹಾರ ಹಾಗೂ ಮಾಸಾಶನ 5 ಸಾವಿರ, ಪೌಷ್ಟಿಕ ಆಹಾರ ಸೇರಿ ಅನೇಕ ಎಂಡೋ ಸ್ನೇಹಿ ಸೌಲಭ್ಯಗಳನ್ನು ಒದಗಿಸಿದೆ ಎಂದು ಅವರು ವಿವರಿಸಿದರು. ರಾಜ್ಯ ಸರಕಾರ ಸ್ಥಗಿತ ಗೊಂಡಿರುವ ಮಾಸಾಶನ, ಪರಿಹಾರ ಧನ ಹಾಗೂ ಎಂಡೋ ರೋಗಿಗಳ ಚಿಕಿತ್ಸೆಗಾಗಿ ಸ್ಟಾಫ್ ನರ್ಸ್ ಸೇರಿದಂತೆ ಎಂಡೋ ಸ್ನೇಹಿ ವಾತಾವರಣ ನಿರ್ಮಿಸಬೇಕೆಂದು ಶ್ರೀಧರ ಒತ್ತಾಯಿಸಿದರು.

ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕ ಸಿ.ಟಿ.ರವಿ, ದಕ್ಷಿಣ ಕನ್ನಡ ಜಿಲ್ಲೆಯ ಭೂಮಿಗೆ ವಿಷ ಹಾಕಲಾಗಿದೆ. ಇದು ಭೋಪಾಲ್ ದುರಂತ ನೆನಪಿಸುವಂತ ಘಟನೆಯಾಗಿದೆ. ಎಂಡೋ ಸಲ್ಫಾನ್ ಪೀಡಿತರಿಗೆ ಕನಿಷ್ಠ ಪರಿಹಾರವು ಸಿಕ್ಕಿಲ್ಲ ಎಂದು ದೂರಿದರು. ಇದೇ ವೇಳೆ ಮಾಜಿ ಸಚಿವ ವಿಶ್ವೇಶ್ವರ ಹೆಗ್ಡೆ ಕಾಗೇರಿ, ಯುವ ನಟ ಚೇತನ್, ನಟಿ ನೀತು ಸೇರಿದಂತೆ ಪ್ರಮುಖರು ಎಂಡೋ ಸಲ್ಪಾನ್ ಸಂತ್ರಸ್ತರ ಹೋರಾಟಕ್ಕೆ ತಮ್ಮ ಬೆಂಬಲವಿದೆ ಎಂದರು.

ಶೀಘ್ರದಲ್ಲಿಯೇ ಪರಿಹಾರ: ಆರೋಗ್ಯ ಸಚಿವ ಯು.ಟಿ.ಖಾದರ್ಎಂಡೋ ವಿರೋಧಿ ಹೋರಾಟ ಸಮಿತಿ ಹಮ್ಮಿಕೊಂಡಿದ್ದ ಧರಣಿಯಲ್ಲಿ ಪಾಲ್ಗೊಂಡು ಮಾತನಾಡಿದ ಆರೋಗ್ಯ ಸಚಿವ ಯು.ಟಿ.ಖಾದರ್, ಕೆಲವು ಸಂತ್ರಸ್ತರಿಗೆ ಮಾತ್ರ ಇನ್ನೂ ಮಾಸಾಶನ ಸಿಕ್ಕಿಲ್ಲ. ಆದರೆ, ಅವರ ಹಣ ಬ್ಯಾಂಕ್ ಖಾತೆಯಲ್ಲಿ ಜಮಾ ಆಗಿದೆ. ಈ ಬಗ್ಗೆ ಆತಂಕ ಪಡುವ ಆವಶ್ಯಕತೆಯಿಲ್ಲ ಎಂದು ಸ್ಪಷ್ಟನೆ ನೀಡಿದರು. ಎಂಡೋ ಪೀಡಿತರಿಗೆ ತಲಾ 10 ಲಕ್ಷ ರೂ. ಪರಿಹಾರ ಸೇರಿದಂತೆ ಇತರ ಬೇಡಿಕೆಗಳ ಬಗ್ಗೆ ಸರಕಾರದೊಂದಿಗೆ ಚರ್ಚಿಸಲಾಗುವುದು. ಕರಾವಳಿ ಭಾಗದ ಎಲ್ಲ ಎಂಡೋ ಸಂತ್ರಸ್ತರಿಗೆ ಮಾಸಾಶನ ಲಭ್ಯವಾಗುವ ನಿಟ್ಟಿನಲ್ಲಿ ಶೀಘ್ರದಲ್ಲಿಯೇ ಜಿಲ್ಲಾಧಿಕಾರಿಗಳ ಜೊತೆ ಹಾಗೂ ಕಂದಾಯ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಹಣ ಬಿಡುಗಡೆ ಮಾಡಲಾಗುವುದು ಎಂದು ಭರವಸೆ ನೀಡಿದರು.

Write A Comment