ಕರ್ನಾಟಕ

ಕನಕಪುರದಲ್ಲಿ ಷಟರ್ ಮುರಿದು ಒಂದೇ ರಾತ್ರಿಯಲ್ಲಿ ಎಂಟು ಅಂಗಡಿಗಳ ಸರಣಿ ಕಳವು

Pinterest LinkedIn Tumblr

17kalavuಕನಕಪುರ, ನ.14-ತಾಲ್ಲೂಕಿನ ಸಾತನೂರು ವೃತ್ತದ ಸಂತೆಮಾಳದಲ್ಲಿರುವ ಏಳೆಂಟು ಅಂಗಡಿಗಳ ಷಟರ್ ಮುರಿದು ಸರಣಿ ಕಳವು ಮಾಡಿರುವ ಘಟನೆ ರಾತ್ರಿ ನಡೆದಿದೆ. ಸಂತೆಮಾಳದಲ್ಲಿರುವ ಮಧುಶ್ರೀ ಕಾಂಪ್ಲೆಕ್ಸ್‌ನಲ್ಲಿರುವ 5 ಅಂಗಡಿ ಹಾಗೂ ಅಕ್ಕ-ಪಕ್ಕದಲ್ಲಿರುವ ವೈನ್‌ಸ್ಟೋರ್‌ಗಳು ಹಾಗೂ ಚಿನ್ನಾಭರಣ ಅಂಗಡಿಗೆ ನುಗ್ಗಿ  ಕೈಗೆ ಸಿಕ್ಕ ಹಣ, ಬೆಳ್ಳಿ ದೋಚಿ ಕಳ್ಳರು ಪರಾರಿಯಾಗಿದ್ದಾರೆ.  ರಾತ್ರಿ 1 ಗಂಟೆ ಸುಮಾರಿನಲ್ಲಿ ಸಂತೆಮಾಳಕ್ಕೆ ಬಂದ 25 ವರ್ಷ ವಯೋಮಾನದ ಏಳೆಂಟು ಜನರ ಗುಂಪು ಅಂಗಡಿಗಳಿಗೆ ನುಗ್ಗಿದೆ. ಈ ಗುಂಪಿನಲ್ಲಿ ಮೂವರು ಮಂಕಿಕ್ಯಾಪ್ ಧರಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಕಾವೇರಿ ಹಾರ್ಡ್‌ವೇರ್ ಅಂಗಡಿಯಲ್ಲಿ 10ಸಾವಿರ ರೂ. ಹಣ ದೋಚಿದ್ದು,  ಕೃತ್ಯಕ್ಕೂ ಮುನ್ನ ಅಂಗಡಿಯಲ್ಲಿರುವ 5 ಸಿಸಿ ಕ್ಯಾಮೆರಾಗಳ ಪೈಕಿ ಎರಡನ್ನು ಒಡೆದು ಹಾಕಿದ್ದಾರೆ.

ಜಯಂತ್ ಚಿನ್ನಾಭರಣ ಅಂಗಡಿಗೆ ನುಗ್ಗಿರುವ ಕಳ್ಳರು ಸುಮಾರು 50ಸಾವಿರ ರೂ. ಮೌಲ್ಯದ ಒಂದೂವರೆ ಕೆಜಿ ಹಳೇ ಬೆಳ್ಳಿ ಹೊತ್ತೊಯ್ದಿದ್ದಾರೆ.

ರಾಘವೇಂದ್ರ ಔಷಧಿ ಅಂಗಡಿಗೆ ನುಗ್ಗಿ 15ಸಾವಿರ ರೂ., ಆಟೋಮೊಬೈಲ್ ಅಂಗಡಿ, ಚಂದ್ರು ವೈನ್ಸ್‌ಸ್ಟೋರ್‌ಗೆ ನುಗ್ಗಿ 8ಸಾವಿರ ರೂ. ಹಣ ದೋಚಿದ್ದಾರೆ. ಸಹಕಾರ ಸಂಘದ ಕಚೇರಿಗೆ ನುಗ್ಗಿ ಅಲ್ಲಿಯೂ ಹಣ ದೋಚಿದ್ದು, ಶ್ವೇತಾ ಬಾರ್‌ಗೆ ನುಗ್ಗಿ ಹಣ ದೋಚಿ ತಮಗೆ ಬೇಕಾದ ಮದ್ಯ ಕುಡಿದು ಬಾಟಲಿಗಳನ್ನು ಒಡೆದು ಹಾಕಿ ಪರಾರಿಯಾಗಿದ್ದಾರೆ. ಬಾರ್‌ಗೆ ನುಗ್ಗುವ ಮುನ್ನ ಅಕ್ಕ-ಪಕ್ಕದಲ್ಲಿರುವ ಮನೆಗಳಿಗೆ ಹೊರಗಿನಿಂದ ಚಿಲಕ ಹಾಕಿ ಶಬ್ಧದಿಂದ ಯಾರೂ ಹೊರಗೆ ಬಾರದಂತೆ ಮಾಡಿದ್ದಾರೆ. ಕಳ್ಳರು ಮಧ್ಯರಾತ್ರಿ 1ರಿಂದ 3.15ರವರೆಗೂ ಅಂಗಡಿಗಳನ್ನು ದೋಚಿದ್ದು, ಈ ಎಲ್ಲಾ ದೃಶ್ಯಾವಳಿಗಳು ಸಮೀಪದಲ್ಲಿರುವ ಇಂಡಿಯನ್ ಬ್ಯಾಂಕ್ ಎಟಿಎಂನ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿವೆ.

ಇಂದು ಬೆಳಗ್ಗೆ ಸರಣಿ ಕಳ್ಳತನವಾಗಿರುವುದು ಬೆಳಕಿಗೆ ಬಂದಿದ್ದು, ಡಿವೈಎಸ್‌ಪಿ ಧನಂಜಯ್ಯ, ಸಿಪಿಐ ಸಿದ್ದೇಗೌಡ, ಎಸ್‌ಐ ಜಯರಾಂ ಅವರುಗಳು ಶ್ವಾನದಳ ಹಾಗೂ ಬೆರಳಚ್ಚುತಜ್ಞರೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಸಾತನೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Write A Comment