ಕರ್ನಾಟಕ

ಸೋಮವಾರದಿಂದ ಚಳಿಗಾಲದ ಅಧಿವೇಶನ : ಆಡಳಿತ ಮತ್ತು ಪ್ರತಿಪಕ್ಷಗಳ ವಾಕ್ಸಮರಕ್ಕೆ ವೇದಿಕೆ ಸಿದ್ಧ

Pinterest LinkedIn Tumblr

15vidhanaಬೆಂಗಳೂರು, ನ.14-ಸೋಮವಾರದಿಂದ ಆರಂಭವಾಗಲಿರುವ ರಾಜ್ಯ ವಿಧಾನಮಂಡಲದ ಉಭಯ ಸದನಗಳ ಚಳಿಗಾಲದ ಅಧಿವೇಶನ ಆಡಳಿತ ಮತ್ತು ಪ್ರತಿಪಕ್ಷಗಳ ವಾಕ್ಸಮರಕ್ಕೆ ವೇದಿಕೆಯಾಗಲಿದೆ. ಬೆಳಗಾವಿ ಅಧಿವೇಶನದಿಂದಲೂ ನೆನೆಗುದಿಗೆ ಬಿದ್ದಿರುವ ಲೋಕಾಯುಕ್ತ ಹುದ್ದೆಯಿಂದ ನ್ಯಾಯಮೂರ್ತಿ ವೈ.ಭಾಸ್ಕರ್‌ರಾವ್ ಪದಚ್ಯುತಿಗೊಳಿಸುವ ಪ್ರಸ್ತಾಪ ಮತ್ತೆ ಈ ಅಧಿವೇಶನದಲ್ಲೂ ಪ್ರತಿಧ್ವನಿಸಲಿದೆ. ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಗಿರೀಶ್‌ಕಾರ್ನಾಡ್ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಟಿಪ್ಪು ಸುಲ್ತಾನ್ ಹೆಸರು ನಾಮಕರಣ ಮಾಡಬೇಕೆಂಬ ಅಭಿಪ್ರಾಯ ವ್ಯಕ್ತಪಡಿಸಿದ ಬೆನ್ನಲ್ಲೇ ಉಂಟಾಗಿರುವ ಪ್ರತಿಭಟನೆ ಸೇರಿದಂತೆ ಮತ್ತಿತರ ವಿಚಾರಗಳು ಕೂಡ ಅಧಿವೇಶನದಲ್ಲಿ ಗಂಭೀರ ಚರ್ಚೆಗೆ ನಾಂದಿ ಹಾಡಲಿದೆ.

ರಾಜ್ಯವನ್ನು ತೀವ್ರವಾಗಿ ಕಾಡುತ್ತಿರುವ ವಿದ್ಯುತ್ ಸಮಸ್ಯೆ, ಕುಡಿಯುವ ನೀರು, ಬರ ಪರಿಹಾರ ವಿಳಂಬ, ಬೆಳೆ ಹಾನಿಗೆ ಸೂಕ್ತ ಪರಿಹಾರ ನೀಡದಿರುವುದು, ಕಬ್ಬು ಬೆಳೆಗಾರರ ಸಮಸ್ಯೆ ಸೇರಿದಂತೆ ಹತ್ತು ಹಲವು ಸಮಸ್ಯೆಗಳು ಅಧಿವೇಶನದಲ್ಲಿ ಪ್ರತಿಧ್ವನಿಸಿ ಪ್ರತಿಪಕ್ಷಗಳ ಸದಸ್ಯರು ಸರ್ಕಾರವನ್ನು ತೀವ್ರ ತರಾಟೆಗೆ ತೆಗೆದುಕೊಳ್ಳುವ ಸಾಧ್ಯತೆ ಇದೆ. ಹಲವು ವಿಚಾರಗಳಲ್ಲಿ ಆಡಳಿತ ಮತ್ತು ಪ್ರತಿಪಕ್ಷಗಳ ನಡುವೆ ಪರಸ್ಪರ ವಾಗ್ವಾದ, ಮಾತಿನ ಚಕಮಕಿ ನಡೆಯುವ ಸಾಧ್ಯತೆಗಳು ಇವೆ.  ರಾಜ್ಯದ 136 ತಾಲ್ಲೂಕಿನಲ್ಲಿ ಬರ ಪರಿಸ್ಥಿತಿ ಇದ್ದರೂ ಸರ್ಕಾರ ಸೂಕ್ತ ರೀತಿಯಲ್ಲಿ ಪರಿಹಾರ ಕಾಮಗಾರಿ ಕೈಗೊಂಡಿಲ್ಲ ಎಂದು ಪ್ರತಿಪಕ್ಷಗಳು ಮುಗಿಬೀಳುವ ಸಾಧ್ಯತೆಗಳಿವೆ.

ರಾಜ್ಯದಲ್ಲಿ ನಿರಂತರವಾಗಿ ನಡೆಯುತ್ತಿರುವ ರೈತರ ಆತ್ಮಹತ್ಯೆ ಪ್ರಕರಣ ಉಭಯ ಸದನಗಳಲ್ಲಿ ಪ್ರಸ್ತಾಪವಾಗಿ ಪರಿಹಾರ ನೀಡಿಕೆ ವಿಚಾರದಲ್ಲಾಗುತ್ತಿರುವ ವಿಳಂಬ ಹಾಗೂ ಆತ್ಮಹತ್ಯೆ ತಡೆಗಟ್ಟಲು ವಿಫಲವಾಗುತ್ತಿರುವ ಸರ್ಕಾರವನ್ನು ಪ್ರತಿಪಕ್ಷಗಳು ತೀವ್ರ ತರಾಟೆಗೆ ತೆಗೆದುಕೊಳ್ಳಲು ಸಜ್ಜಾಗಿವೆ. ರಾಜ್ಯ ಸರ್ಕಾರ ಮೊದಲ ಬಾರಿಗೆ ಸರ್ಕಾರಿ ಕಾರ್ಯಕ್ರಮವಾಗಿ ಟಿಪ್ಪು ಜಯಂತಿ ಆಚರಣೆ ಮಾಡಿರುವುದರಿಂದ ಉಂಟಾಗಿರುವ ಗೊಂದಲದ ವಿಚಾರವೂ ಕೂಡ ಪ್ರತಿಧ್ವನಿಸಿ ಆಡಳಿತ ಮತ್ತು ಪ್ರತಿಪಕ್ಷಗಳ ನಡುವಿನ ಆರೋಪ ಮತ್ತು ಪ್ರತ್ಯಾರೋಪಕ್ಕೆ ಗ್ರಾಸವಾಗಲಿದೆ. ಸಮಾಜ ಕಲ್ಯಾಣ ಸಚಿವ ಆಂಜನೇಯ ಅವರ ಮನೆಯಲ್ಲಿ ನಡೆದಿದೆ ಎನ್ನಲಾದ ಭ್ರಷ್ಟಾಚಾರ ಆರೋಪದ ಪ್ರಕರಣವು ಕೂಡ ಪ್ರಸ್ತಾಪವಾಗುವ ಸಂಭವವಿದೆ.

ಟಿಪ್ಪು ಜಯಂತಿ ಹಿನ್ನೆಲೆಯಲ್ಲಿ ಮಡಿಕೇರಿಯಲ್ಲಿ ಉಂಟಾದ ಪ್ರತಿಭಟನೆ, ಸಾವು-ನೋವು ಹಾಗೂ ಹಾಸನದಲ್ಲಿ ಉಂಟಾದ ಘರ್ಷಣೆ ಸೇರಿದಂತೆ ಮತ್ತಿತರ ಘಟನೆಗಳು ಅಧಿವೇಶನದಲ್ಲಿ ಪ್ರಮುಖವಾಗಿ ಚರ್ಚೆಗೆ ಬರಲಿವೆ.
ಪದೇ ಪದೇ ಮರುಕಳಿಸುತ್ತಿರುವ ಮಹಿಳೆಯರ ಮೇಲಿನ ಅತ್ಯಾಚಾರ ಪ್ರಕರಣಗಳು ಕೂಡ ಅಧಿವೇಶನದಲ್ಲಿ ಗಂಭೀರ ಚರ್ಚೆಯಾಗುವ ಸಾಧ್ಯತೆಗಳಿವೆ. ಉಳಿದಂತೆ ಮರಳು ಅಭಾವ, ಮರಳು ಮಾಫಿಯಾ, ಅರಣ್ಯ ವಾಸಿಗಳ ಹಕ್ಕುಪತ್ರ, ಕಾನೂನು ಸುವ್ಯವಸ್ಥೆ ವಿಚಾರವೂ ಕೂಡ ಚರ್ಚೆಗೆ ಬರಲಿದೆ.  ರಾಜ್ಯದಲ್ಲಿ ಬರಗಾಲ ತಲೆದೋರಿರುವ ಹಿನ್ನೆಲೆಯಲ್ಲಿ ವಿದ್ಯುತ್ ಅಭಾವ ಹಾಗೂ ಲೋಡ್‌ಶೆಡ್ಡಿಂಗ್ ಸಮಸ್ಯೆ ಬಗ್ಗೆ ಉಭಯ ಸದನಗಳಲ್ಲೂ ಪಕ್ಷ ಭೇದ ಮರೆತು ಗಂಭೀರ ಚರ್ಚೆ ನಡೆಸುವ ಸಾಧ್ಯತೆಗಳಿವೆ. ಕುಡಿಯುವ ನೀರು, ಕೃಷಿ ಹಾಗೂ ವಿದ್ಯಾರ್ಥಿಗಳ ಓದಿಗೆ ತೊಂದರೆಯಾಗದಂತೆ ವಿದ್ಯುತ್ ಪೂರೈಕೆ ಮಾಡಲು ಸರ್ಕಾರವನ್ನು ಆಗ್ರಹಿಸುವ ಸಂಭವ ಹೆಚ್ಚಾಗಿದೆ.

ಮಹದಾಯಿ ನದಿ ತಿರುವು ಯೋಜನೆಯ ವಿವಾದ ಸೇರಿದಂತೆ ರಾಜ್ಯವನ್ನು ಕಾಡುತ್ತಿರುವ ಜ್ವಲಂತ ಸಮಸ್ಯೆಗಳು ಅಧಿವೇಶನದಲ್ಲಿ ಪ್ರತಿಧ್ವನಿಸುವುದಲ್ಲದೆ,  ಸರ್ಕಾರದಿಂದ ಪರಿಹಾರ ಪಡೆಯಲು ಪ್ರತಿಪಕ್ಷಗಳ ಸದಸ್ಯರು ಸಹಜವಾಗಿಯೇ ಪ್ರಶ್ನಿಸಲಿದ್ದಾರೆ.

Write A Comment