ಕರ್ನಾಟಕ

ಬೆಂಗಳೂರಲ್ಲಿ ನಿರ್ಮಾಣವಾಗಲಿದೆ ದೇಶದ ಅತಿ ಉದ್ದದ ಉಕ್ಕಿನ ಸೇತುವೆ

Pinterest LinkedIn Tumblr

se-ಅಮ್ಜದ್‌ಖಾನ್ ಎಂ.
ಬೆಂಗಳೂರು, ನ.12: ರಾಜಧಾನಿ ಬೆಂಗಳೂರಿನಲ್ಲಿ ದೇಶದಲ್ಲೇ ಅತಿ ಉದ್ದದ ಉಕ್ಕಿನ ಸೇತುವೆ ನಿರ್ಮಾಣಕ್ಕೆ ಯೋಜನೆ ಸಿದ್ಧ ಗೊಂಡಿದೆ. ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ಸುಮಾರು 1350 ಕೋಟಿ ರೂ.ವೆಚ್ಚದಲ್ಲಿ ಈ ಯೋಜನೆಯನ್ನು ಕಾರ್ಯ ಗತಗೊಳಿಸಲು ಉದ್ದೇಶಿಸಲಾಗಿದೆ. ಉಕ್ಕಿನ ಸೇತುವೆ ನಿರ್ಮಿಸಲು ಬಿಡಿಎ ಟೆಂಡರ್ ಪ್ರಕ್ರಿಯೆ ಆರಂಭಿಸಿದ್ದು, ಈಗಾಗಲೇ ಹಲವಾರು ಬಹುರಾಷ್ಟ್ರೀಯ ಕಂಪೆನಿಗಳು ಟೆಂಡರ್‌ನಲ್ಲಿ ಪಾಲ್ಗೊಳ್ಳಲು ಆಸಕ್ತಿ ತೋರಿಸಿವೆ. ಇನ್ನು ಆರು ತಿಂಗಳಲ್ಲಿ ಈ ಎಲ್ಲ ಪ್ರಕ್ರಿಯೆಗಳು ಪೂರ್ಣಗೊಳ್ಳಲಿದ್ದು, ಎರಡೂವರೆ ವರ್ಷಗಳಲ್ಲಿ ಕಾಮಗಾರಿ ಪೂರ್ಣಗೊಳಿಸಲು ಬಿಡಿಎ ಉದ್ದೇಶಿಸಿದೆ.
ಚಾಲುಕ್ಯ ವೃತ್ತದಿಂದ ಹೆಬ್ಬಾಳ ಮೇಲ್ಸೇತುವೆಗೆ ಸಂಪರ್ಕ ಕಲ್ಪಿಸುವ 6.77 ಕಿ.ಮೀ. ಉದ್ದದ ಈ ಸೇತುವೆ ನಿರ್ಮಾಣಕ್ಕೆ ಅಂದಾಜು 1350 ಕೋಟಿ ರೂ. ಖರ್ಚಾಗಬಹುದು. ಸದ್ಯಕ್ಕೆ ಬೆಂಗಳೂರು ಕೇಂದ್ರ ಭಾಗದಿಂದ ವಿಮಾನ ನಿಲ್ದಾಣಕ್ಕೆ ತಲುಪಲು ಕನಿಷ್ಠ ಒಂದೂವರೆಯಿಂದ ಎರಡು ಗಂಟೆ ಕಾಲಾವಕಾಶ ಬೇಕಾಗುತ್ತದೆ. ಈ ಮೇಲ್ಸೇತುವೆಯ ಕಾಮಗಾರಿ ಪೂರ್ಣಗೊಂಡಲ್ಲಿ ಬೆಂಗಳೂರಿನಿಂದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕೇವಲ 30 ನಿಮಿಷಗಳಲ್ಲಿ ತಲುಪಬಹು ದಾಗಿದೆ. ಸಂಚಾರ ದಟ್ಟಣೆ ಸಮಸ್ಯೆ ಹೆಚ್ಚಿರುವ ಈ ರಸ್ತೆಯಲ್ಲಿ ಕಾಂಕ್ರಿಟ್‌ನಿಂದ ಮೇಲ್ಸೇತುವೆ ನಿರ್ಮಾಣ ಮಾಡಲು ಹೊರಟರೆ ಹೆಚ್ಚಿನ ಸಮಯ ಹಿಡಿಯು ತ್ತದೆ. ಆದುದರಿಂದ, ಕೋಲ್ಕತಾದಲ್ಲಿ ನಿರ್ಮಿಸಿ ರುವ ಹೌರಾ ಸೇತುವೆ ಮಾದರಿಯಲ್ಲಿ ಉಕ್ಕಿನ ಸೇತುವೆ ನಿರ್ಮಿಸಲು ಸರಕಾರ ನಿರ್ಧರಿಸಿದೆ.
ಚಾಲುಕ್ಯ ವೃತ್ತದಿಂದ ವಿಂಡ್ಸರ್‌ಮ್ಯಾನರ್, ಬಿಡಿಎ ಜಂಕ್ಷನ್, ಕಾವೇರಿ ಜಂಕ್ಷನ್, ಮೇಖ್ರಿ ವೃತ್ತ ಮಾರ್ಗವಾಗಿ ಹೆಬ್ಬಾಳದವರೆಗೆ ಈ ಸೇತುವೆ ಹಾದು ಹೋಗಲಿದೆ. ಈ ಉಕ್ಕಿನ ಮೇಲ್ಸೇತುವೆಗೆ ಪೂರಕವಾಗಿ ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ಹೆಬ್ಬಾಳ ಮೇಲ್ಸೇತುವೆಯನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು 70 ಕೋಟಿ ರೂ.ವೆಚ್ಚದಲ್ಲಿ ವಿಸ್ತರಣೆ ಮಾಡಲು ಉದ್ದೇಶಿಸಿದೆ.
ಉಕ್ಕಿನ ಸೇತುವೆಯು ಆರು ಪಥಗಳನ್ನು ಒಳಗೊಂಡಿದ್ದು, ನೆಲದಿಂದ 18 ಅಡಿ ಎತ್ತರದಲ್ಲಿ ನಿರ್ಮಾಣವಾಗಲಿದೆ. ದೇಶದಲ್ಲೆ ಇದೊಂದು ವಿನೂತನ ಪ್ರಯೋಗ. ಇದರ ಜೊತೆಗೆ ವಿಧಾನಸೌಧ, ರಾಜಭವನ, ರೇಸ್‌ಕೋರ್ಸ್ ಹಾಗೂ ಅರಮನೆ ರಸ್ತೆಗೆ ಸಂಪರ್ಕಿಸಲು ಉಪ ಸೇತುವೆ ನಿರ್ಮಾಣಗೊಳ್ಳಲಿದೆ.

ಉಕ್ಕಿನ ಸೇತುವೆ ನಿರ್ಮಾಣಕ್ಕೆ ಜಾಗತಿಕ ಟೆಂಡರ್ ಕರೆಯಲಾಗಿದೆ. ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡ ನಂತರ ಎರಡು ವರ್ಷಗಳಲ್ಲಿ ಕಾಮಗಾರಿ ಪೂರ್ಣಗೊಂಡು ಸಾರ್ವಜನಿಕರ ಸೇವೆಗೆ ಲಭ್ಯವಾಗಲಿದೆ. ಅಲ್ಲದೆ, ಈ ರಸ್ತೆಯು ಟೋಲ್ ಮುಕ್ತ ರಸ್ತೆಯಾಗಿರಲಿದೆ.
– ಟಿ.ಶ್ಯಾಂಭಟ್, ಬಿಡಿಎ ಆಯುಕ್ತ

Write A Comment