ಕರ್ನಾಟಕ

ಟಿಪ್ಪು ಜಯಂತಿ ವಿರೋಧಿಸಿ, ಕಾರ್ನಾಡ್ ವಿವಾದಾತ್ಮಕ ಹೇಳಿಕೆ ಖಂಡಿಸಿ ಶ್ರೀರಂಗಪಟ್ಟಣ ಬಂದ್

Pinterest LinkedIn Tumblr

sri

ಶ್ರೀರಂಗಪಟ್ಟಣ, ನ.11- ಟಿಪ್ಪು ಸುಲ್ತಾನ್ ಜಯಂತಿ ವಿರೋಧಿಸಿ ಹಾಗೂ ಸಾಹಿತಿ ಗಿರೀಶ್ ಕಾರ್ನಾಡ್ ಅವರ ವಿವಾದಾತ್ಮಕ ಹೇಳಿಕೆ ಖಂಡಿಸಿ ಭಜರಂಗದಳ ಮತ್ತು ವಿಶ್ವ ಹಿಂದೂ ಪರಿಷತ್ ಕಾರ್ಯಕರ್ತರು ಇಂದು ಶ್ರೀರಂಗಪಟ್ಟಣ ಬಂದ್ ಮಾಡಿದರು. ಭಜರಂಗದಳ ಹಾಗೂ ವಿಶ್ವ ಹಿಂದೂ ಪರಿಷತ್ ಕಾರ್ಯಕರ್ತರು ರಸ್ತೆ ತಡೆ ನಡೆಸಿ ಹಾಗೂ ಅಂಗಡಿ-ಮುಗ್ಗಟ್ಟುಗಳನ್ನು ಬಂದ್ ಮಾಡಿಸಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ವಿಶ್ವ ಹಿಂದೂ ಪರಿಷತ್‌ನ ಅಧ್ಯಕ್ಷ ವಿ.ಭಾನುಪ್ರಕಾಶ್ ಮಾತನಾಡಿ, ಹಿಂದೂಗಳ ವಿರೋಧಿಯಾಗಿದ್ದ ಟಿಪ್ಪು ಸುಲ್ತಾನ್ ಜಯಂತಿ ಆಚರಿಸುವ ಮೂಲಕ ಸರ್ಕಾರ ವೋಟ್‌ಬ್ಯಾಂಕ್ ರಾಜಕಾರಣ ಮಾಡುತ್ತಿದೆ.

ಒಂದು ಸಮುದಾಯದ ಓಲೈಕೆಗಾಗಿ ಹಿಂದೂಗಳ ಭಾವನೆ ಕೆರಳಿಸುತ್ತಿರುವುದು ಸರಿಯಲ್ಲ ಎಂದರು. ಜ್ಞಾನಪೀಠ ಪುರಸ್ಕೃತ ಸಾಹಿತಿ ಗಿರೀಶ್ ಕಾರ್ನಾಡ್ ಅವರು ದೇವನಹಳ್ಳಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಟಿಪ್ಪು ಹೆಸರಿಡಬೇಕೆಂಬ ಹೇಳಿಕೆ ನೀಡಿರುವುದು ಖಂಡನೀಯ. ಮೊದಲು ಕೆಂಪೇಗೌಡರ ಸಾಧನೆ ಬಗ್ಗೆ ಸರಿಯಾಗಿ ತಿಳಿದುಕೊಳ್ಳಲಿ. ವಿವಾದಾತ್ಮಕ ಹೇಳಿಕೆ ನೀಡುವ ಮೂಲಕ ಸಮಾಜದಲ್ಲಿ ಒಡಕು ಸೃಷ್ಟಿಸಬಾರದು ಎಂದರು. ಶಾಂತವಾಗಿದ್ದ ಕೊಡಗಿನ ಜನರ ಮನಸ್ಸಿನಲ್ಲಿ ಟಿಪ್ಪು ಸುಲ್ತಾನ್ ಜಯಂತಿ ಎಂಬ ವಿಷಬೀಜ ಬಿತ್ತಿದ ಫಲವೇ ಕುಟ್ಟಪ್ಪ ಸಾವಿಗೆ ಕಾರಣವಾಗಿದೆ. ಇನ್ನು ಮುಂದಾದರೂ ಸರ್ಕಾರ ಎಚ್ಚೆತ್ತುಕೊಂಡು ಹಿಂದೂಗಳ ಭಾವನೆಯನ್ನು ಗೌರವಿಸಬೇಕು ಎಂದರು. ಈ ವೇಳೆ ನೂರಾರು ಮಂದಿ ಭಜರಂಗದಳ ಹಾಗೂ ವಿಶ್ವಹಿಂದೂ ಪರಿಷತ್ ಕಾರ್ಯಕರ್ತರು ಪಾಲ್ಗೊಂಡಿದ್ದರು.

Write A Comment