ಕರ್ನಾಟಕ

ಕೆಂಪೇಗೌಡರ ಅಪಮಾನದ ಬಗ್ಗೆ ತುಟಿ ಬಿಚ್ಚದ ಮೇಯರ್ ರಾಜೀನಾಮೆಗೆ ರೆಡ್ಡಿ ಆಗ್ರಹ

Pinterest LinkedIn Tumblr

reddiಬೆಂಗಳೂರು, ನ.11- ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕೆಂಪೇಗೌಡರ ಬದಲು ಟಿಪ್ಪು ಹೆಸರಿಡಬೇಕು ಎಂದು ಗಿರೀಶ್ ಕಾರ್ನಾಡ್ ಹೇಳಿಕೆ ನೀಡಿದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಮೇಯರ್ ಮಂಜುನಾಥರೆಡ್ಡಿಯವರು ಈ ಕೂಡಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಬಿಬಿಎಂಪಿ ಪ್ರತಿಪಕ್ಷದ ನಾಯಕ ಪದ್ಮನಾಭರೆಡ್ಡಿ ಆಗ್ರಹಿಸಿದ್ದಾರೆ.

ರಾಜ್ಯಸರ್ಕಾರ ಹಮ್ಮಿಕೊಂಡಿದ್ದ ಟಿಪ್ಪು ಜಯಂತಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಮೇಯರ್ ಮಂಜುನಾಥರೆಡ್ಡಿ ಸಮ್ಮುಖದಲ್ಲಿ ಗಿರೀಶ್ ಕಾರ್ನಾಡ್ ಈ ರೀತಿಯ ಹೇಳಿಕೆ ನೀಡಿದ್ದರೂ ಅವರ ಹೇಳಿಕೆಗೆ ಪ್ರತಿಕ್ರಿಯಿಸದೆ ಮೌನವಾಗಿರುವ ಮೇಯರ್ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವುದು ಸೂಕ್ತ ಎಂದು ರೆಡ್ಡಿ ಪತ್ರಿಕಾಗೋಷ್ಠಿಯಲ್ಲಿ ಒತ್ತಾಯಿಸಿದರು.

ನಾಡಪ್ರಭು ಕೆಂಪೇಗೌಡರಿಗೆ ಅಪಮಾನವಾದರೂ ಮೌನ ವಹಿಸಿರುವ ಮೇಯರ್ ಮಂಜುನಾಥರೆಡ್ಡಿಯವರು ಬೆಂಗಳೂರು ನಗರದ ಜನತೆಯ ಕ್ಷಮೆ ಕೇಳಿ ತಮ್ಮ ಸ್ಥಾನ ತ್ಯಜಿಸುವ ಮೂಲಕ ಮಹಾಪೌರರ ಸ್ಥಾನದ ಘನತೆಯನ್ನು ಎತ್ತಿ ಹಿಡಿಯಬೇಕು ಎಂದರು. ಅಸಹಿಷ್ಣುತೆ ಬಗ್ಗೆ ದೇಶದಾದ್ಯಂತ ಬೊಬ್ಬೆ ಹಾಕುತ್ತಿರುವ ಕಾಂಗ್ರೆಸ್‌ನವರು ರಾಜ್ಯದಲ್ಲಿ ಟಿಪ್ಪು ಜಯಂತಿ ಹೆಸರಿನಲ್ಲಿ ಅಸಹಿಷ್ಣುತೆಗೆ ಅವಕಾಶ ಮಾಡಿಕೊಟ್ಟಿರುವುದು ಎಷ್ಟು ಸರಿ ಎಂದು ಪ್ರಶ್ನಿಸಿದ ಅವರು, ತಮ್ಮ ಸಮ್ಮುಖದಲ್ಲೇ ನಾಡಪ್ರಭು ಕೆಂಪೇಗೌಡರಿಗೆ ಅಪಮಾನ ಮಾಡಿದರು. ಅದರ ಬಗ್ಗೆ ಚಕಾರವೆತ್ತದ ಮುಖ್ಯಮಂತ್ರಿ ಸಿದ್ದರಾಮಯ್ಯ ನಾಡಿನ ಜನತೆಯ ಕ್ಷಮೆ ಯಾಚಿಸಬೇಕು ಎಂದು ಆಗ್ರಹಿಸಿದರು. ಸಿಲಿಕಾನ್ ಸಿಟಿ ಎಂದು ವಿಶ್ವವಿಖ್ಯಾತಿ ಗಳಿಸಿರುವ ಬೆಂಗಳೂರು ನಿರ್ಮಾಪಕ ಕೆಂಪೇಗೌಡ ಅವರ ಬಗ್ಗೆ ಅವಹೇಳನ ಮಾಡಿರುವ ಕಾರ್ನಾಡ್ ಅವರಿಗೆ ನಾಡಪ್ರಭುಗಳು ಮತಾಂಧ ಟಿಪ್ಪುವಿಗಿಂತ ಸಣ್ಣವರಾಗಿಬಿಟ್ಟರೇ..? ಇಂತಹ ನಾಡದ್ರೋಹಿ ಹೇಳಿಕೆ ನೀಡಿರುವ ಗಿರೀಶ್ ಕಾರ್ನಾಡ್ ಅವರನ್ನು ಬೆಂಗಳೂರಿನಿಂದ ಗಡಿಪಾರು ಮಾಡಬೇಕು ಎಂದು ಅವರು ಒತ್ತಾಯಿಸಿದರು. ಜೆಡಿಎಸ್‌ನವರು ಏನೆನ್ನುತ್ತಾರೆ..?

ನಾಡಪ್ರಭು ಕೆಂಪೇಗೌಡ ಅವರ ಬಗ್ಗೆ ಗಿರೀಶ್ ಕಾರ್ನಾಡ್ ಅವರು  ಮಾಡಿರುವ ಅಪಮಾನಕ್ಕೆ ಬಿಬಿಎಂಪಿಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ನೀಡಿರುವ ಜೆಡಿಎಸ್ ಪಕ್ಷದವರು ಏನೆನ್ನುತ್ತಾರೆ ಎಂದು ಪದ್ಮನಾಭರೆಡ್ಡಿ ಪ್ರಶ್ನಿಸಿದ್ದಾರೆ.ನಾಡದ್ರೋಹಿ ಹೇಳಿಕೆ ನೀಡಿರುವ ಕಾರ್ನಾಡ್ ಅವರ ಮಾತನ್ನು ಜೆಡಿಎಸ್ ಒಪ್ಪುತ್ತಾ..? ಇಲ್ಲವಾದರೆ ಪೂಜ್ಯ ಮಹಾಪೌರರ ರಾಜೀನಾಮೆ ಕೇಳುತ್ತಾ..? ಇಲ್ಲವೆ ಕಾಂಗ್ರೆಸ್‌ಗೆ ನೀಡಿರುವ ಬೆಂಬಲವನ್ನು ಜೆಡಿಎಸ್ ಮುಖಂಡರು ವಾಪಸ್ ಪಡೆಯುತ್ತಾರಾ ಎನ್ನುವುದನ್ನು ಬೆಂಗಳೂರು ನಗರದ ಜನತೆಗೆ ತಿಳಿಸಬೇಕು ಎಂದು ಪದ್ಮನಾಭರೆಡ್ಡಿ ಆಗ್ರಹಿಸಿದರು.

Write A Comment