ಕರ್ನಾಟಕ

ಫೇಸ್‌ಬುಕ್‌ ಮೂಲಕ ಮಾದಕವಸ್ತು ಮಾರಾಟ

Pinterest LinkedIn Tumblr

susheel

ಬೆಂಗಳೂರು: ಸಾಮಾಜಿಕ ಜಾಲತಾಣ ಫೇಸ್‌ಬುಕ್ ಮೂಲಕ ಮಾದಕವಸ್ತು ಮಾರಾಟ ಮಾಡುತ್ತಿದ್ದ ಆರೋಪಿಯೊಬ್ಬನನ್ನು ಕೇಂದ್ರ ಅಪರಾಧ ವಿಭಾಗದ (ಸಿಸಿಬಿ) ಪೊಲೀಸರು ಬಂಧಿಸಿದ್ದಾರೆ.

ಸುಶೀಲ್ ಕುಮಾರ್ ಮೂಸದ್‌ (34) ಎಂಬಾತನನ್ನು ಬಂಧಿಸಲಾಗಿದೆ. ರಾಮಮೂರ್ತಿನಗರ ನಿವಾಸಿಯಾದ ಈತನಿಂದ ಗಾಂಜಾ ಸೇರಿದಂತೆ, 3 ಲಕ್ಷ ಮೌಲ್ಯದ ಮಾದಕವಸ್ತು ಜಪ್ತಿ ಮಾಡಲಾಗಿದೆ.

ಫೇಸ್‌ಬುಕ್‌ನಲ್ಲಿ ‘Bangalore cannabis’ ಎಂಬ ಪುಟ ಸೃಷ್ಟಿಸಿದ್ದ ಈತ, ತಾನು ಮಾದಕವಸ್ತು ಸೇವನೆ ಮಾಡುತ್ತಿರುವ ಚಿತ್ರಗಳ ಜತೆಗೆ, ಸಂಪರ್ಕ ಸಂಖ್ಯೆ ಹಾಕುವ ಮೂಲಕ ಗ್ರಾಹಕರನ್ನು ಸೆಳೆಯುತ್ತಿದ್ದ. ತನ್ನ ಸಂಖ್ಯೆಗೆ ಕರೆ ಮಾಡುತ್ತಿದ್ದ ವರನ್ನು ನಿಗದಿತ ಸ್ಥಳಕ್ಕೆ ಕರೆಯಿಸಿಕೊಂಡು, ಸಣ್ಣ ಪಾಕೆಟ್‌ಗಳಲ್ಲಿ ತುಂಬಿಸಿದ ಗಾಂಜಾವನ್ನು ದುಬಾರಿ ಮೊತ್ತಕ್ಕೆ ಮಾರಾಟ ಮಾಡುತ್ತಿದ್ದ. ಈ ಕುರಿತು ಬಂದ ಮಾಹಿತಿ ಆಧರಿಸಿ, ಹೆಬ್ಬಾಳ ಸಮೀಪದ ಹೊರವರ್ತುಲ ರಸ್ತೆಯಲ್ಲಿ ಗ್ರಾಹಕರೊಬ್ಬರಿಗೆ ಮಾರಾಟ ಮಾಡುತ್ತಿದ್ದಾಗ, ಮಾಲು ಸಮೇತ ಬಂಧಿಸಲಾಯಿತು ಎಂದು ಸಿಸಿಬಿ ಪೊಲೀಸರು ಹೇಳಿದರು.

ಪಿಯುಸಿ ಓದಿರುವ ಈತ ಕಾಲೇಜು ದಿನಗಳಿಂದಲೇ ಮಾದಕವಸ್ತು ಸೇವನೆ ಚಟಕ್ಕೆ ಬಿದ್ದಿದ್ದ. ಈತನ ತಂದೆ ಸೇನೆಯಿಂದ ನಿವೃತ್ತರಾಗಿದ್ದು, ಸಹೋದರ ಸಾಫ್ಟ್‌ವೇರ್ ಎಂಜಿನಿಯರ್ ಆಗಿದ್ದಾರೆ. ಡೆಲ್ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದ ಆರೋಪಿ, 2013ರಲ್ಲಿ ಉದ್ಯೋಗ ತೊರೆದಿದ್ದ. ಕುಟುಂಬ ಸದಸ್ಯರ ಜತೆ ಜಗಳವಾಡಿಕೊಂಡಿದ್ದ ಈತ, ಇತ್ತೀಚೆಗೆ ಈ ದಂಧೆಗೆ ಇಳಿದಿದ್ದ ಎಂದು ಪೊಲೀಸರು ತಿಳಿಸಿದರು.

Write A Comment