ಕರ್ನಾಟಕ

ಕ್ಲಬ್‌ನಲ್ಲಿ ತಡರಾತ್ರಿವರೆಗೆ ಮೋಜು ಕೂಟ; ಆಫ್ರಿಕಾ ಪ್ರಜೆಗಳು ಸೇರಿ 36 ಬಂಧನ

Pinterest LinkedIn Tumblr

party arrest

ಬೆಂಗಳೂರು: ಮಾರತ್‌ಹಳ್ಳಿ ಹೊರವರ್ತುಲ ರಸ್ತೆಯಲ್ಲಿರುವ ‘ಇ– ಜೋನ್ ಕ್ಲಬ್’ ಮೇಲೆ ದಾಳಿ ನಡೆಸಿರುವ ಕೇಂದ್ರ ಅಪರಾಧ ವಿಭಾಗದ (ಸಿಸಿಬಿ) ಪೊಲೀಸರು, ನಿಯಮ ಮೀರಿ ತಡರಾತ್ರಿವರೆಗೂ ಮೋಜು ಕೂಟ ನಡೆಸುತ್ತಿದ್ದ 36 ಮಂದಿಯನ್ನು ಬಂಧಿಸಿದ್ದಾರೆ.

ಆರೋಪಿಗಳ ಪೈಕಿ ಕ್ಯಾಮರೂನ್‌, ನೈಜೀರಿಯಾದ ಕಾಂಗೊ, ಐವರಿಕೋಸ್ಟ್, ಗಬನ್, ಉಗಾಂಡ, ರುವಾಂಡದ 20 ಹಾಗೂ ಕ್ಲಬ್‌ನ ಸಿಬ್ಬಂದಿ ಸೇರಿದಂತೆ ಉತ್ತರ ಭಾರತದ 16 ಮಂದಿ ಇದ್ದಾರೆ. ಬಂಧಿತರಿಂದ 11.5 ಲಕ್ಷ ಮೌಲ್ಯದ ಮೊಬೈಲ್‌ಗಳು, ಮದ್ಯದ ಬಾಟಲಿಗಳು, ಡಿ.ಜೆ. ಉಪಕರಣಗಳು ಹಾಗೂ ನಗದು ಜಪ್ತಿ ಮಾಡಲಾಗಿದೆ.

ವೆಂಕಟೇಶ್ ರೆಡ್ಡಿ ಎಂಬುವವರಿಗೆ ಈ ಕ್ಲಬ್ ಸೇರಿದೆ. ಹುಟ್ಟುಹಬ್ಬ ಆಚರಣೆಗೆಂದು ಒಂದು ದಿನದ ಅವಧಿಗೆ ಕ್ಲಬ್‌ ಬಾಡಿಗೆ ಪಡೆದಿದ್ದ ಆರೋಪಿಗಳು, ತಮಗೆ ಬೇಕಾದವರನ್ನು ಕರೆಯಿಸಿಕೊಂಡು ರಾತ್ರಿಯಿಂದ ಬೆಳಗ್ಗಿನ ಜಾವದವರೆಗೆ ಮೋಜು ಕೂಟ ನಡೆಸುತ್ತಿದ್ದರು.

ಬಂಧಿತರು ಸಾಮಾಜಿಕ ಜಾಲತಾಣಗಳಲ್ಲಿ ಕೆಲ ಪುಟಗಳನ್ನು ಸೃಷ್ಟಿಸಿ, ಕೂಟಕ್ಕೆ ಗ್ರಾಹಕರನ್ನು ಸೆಳೆಯುತ್ತಿದ್ದರು. ಬಂಧಿತ ಆಫ್ರಿಕಾ ಖಂಡದ ಪ್ರಜೆಗಳು, ವಿದ್ಯಾರ್ಥಿ ಮತ್ತು ವೈದ್ಯಕೀಯ ವೀಸಾ ಮೇಲೆ ದೇಶಕ್ಕೆ ಬಂದಿದ್ದು, ಅವಧಿ ಮುಗಿದಿದ್ದರೂ ಅನಧಿಕೃತವಾಗಿ ನೆಲೆಸಿದ್ದರು. ಘಟನೆ ಸಂಬಂಧ ಕ್ಲಬ್‌ನ ಮಾಲೀಕ ವೆಂಕಟೇಶ್ ರೆಡ್ಡಿ ವಿರುದ್ಧವೂ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಸಿಸಿಬಿ ಪೊಲೀಸರು ತಿಳಿಸಿದರು.

ಹಲ್ಲೆ ಯತ್ನ: ದಾಳಿ ವೇಳೆ ಮದ್ಯದ ಅಮಲಿನಲ್ಲಿದ್ದ ಶೀನಾ ಎಂಬ ಯುವತಿ, ಎಚ್‌ಎಎಲ್‌ ಠಾಣೆಯ ಕಾನ್‌ಸ್ಟೆಬಲ್ ಪ್ರಮೀಳಾ ಅವರ ಮೇಲೆ ಹಲ್ಲೆ ಯತ್ನ ನಡೆಸಿದ್ದಾಳೆ. ಈ ಸಂಬಂಧ ಆಕೆ ವಿರುದ್ಧ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದ ಮೇಲೆ ಪ್ರತ್ಯೇಕ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ಹೇಳಿದರು.

Write A Comment