ಕರ್ನಾಟಕ

ಕಾಟೆ ಬೈನಾದಲ್ಲಿ ಮತ್ತೆ ತೆರವು ಕಾರ್ಯಾಚರಣೆ: 157 ಮನೆ ನೆಲಸಮ; ಬೀದಿಗೆ ಬಿದ್ದ ಕನ್ನಡಿಗರು

Pinterest LinkedIn Tumblr

goaಕಾರವಾರ: ಗೋವಾದ ಕಾಟೆ ಬೈನಾ ಕಡಲತೀರದಲ್ಲಿ ಶನಿವಾರ ಕಾರ್ಯಾಚರಣೆ ನಡೆಸಿದ ಅಲ್ಲಿನ ಜಿಲ್ಲಾಡಳಿತ 157 ಮನೆಗಳನ್ನು ತೆರವುಗೊಳಿಸಿದೆ.

ಬೆಳಿಗ್ಗೆ 7 ಕ್ಕೆ ಸ್ಥಳಕ್ಕೆ ಬಂದ ಜಿಲ್ಲಾಡಳಿತ ಹಾಗೂ ಪಾಲಿಕೆ ಅಧಿಕಾರಿಗಳು ತೆರವು ಕಾರ್ಯಾಚರಣೆ ಆರಂಭಿಸಿದರು. ಐದಾರು ಜೆಸಿಬಿಗಳು ಅಲ್ಲಿನ ಎಲ್ಲ ಮನೆಗಳನ್ನು ನೆಲಸಮಗೊಳಿಸಿದವು. ಮನೆಯಲ್ಲಿನ ಸಾಮಾನುಗಳನ್ನು ಸ್ಥಳಾಂತರಿಸಲೂ ಅವಕಾಶ ನೀಡದ ಕಾರಣ ಅವೆಲ್ಲವೂ ಅವಶೇಷಗಳಡಿ ಸಿಲುಕಿದವು.

ಕೆಲವರು ಅವಶೇಷಗಳಡಿ ಬಿದ್ದಿದ್ದ ಸಾಮಾನುಗಳನ್ನು ಆಯ್ದುಕೊಳ್ಳುತ್ತಿದ್ದರು. ಮಹಿಳೆಯರು, ಮಕ್ಕಳು ಬೀದಿ ಬದಿಯಲ್ಲಿ ರೋದಿಸುತ್ತಿದ್ದ ದೃಶ್ಯ ಕಂಡುಬಂತು. ಇಲ್ಲಿನ ಸೇವಾ ರಾಮ್‌ ಗುಡಿಯನ್ನೂ  ಈ ಸಂದರ್ಭದಲ್ಲಿ ಕೆಡುವಲಾಯಿತು. ಮೂರು ತಾಸುಗಳ ಕಾಲ ನಡೆದ ಈ ಕಾರ್ಯಾಚರಣೆಗೆ ಬಿಗಿ ಪೊಲೀಸ್‌ ಬಂದೋಬಸ್ತ್‌ ಇತ್ತು.

ಕನ್ನಡಿಗರು ಬೀದಿಪಾಲು: ಉತ್ತರ ಕರ್ನಾಟಕದ ವಿವಿಧ ಭಾಗಗಳಿಂದ ಉದ್ಯೋಗ ಅರಸಿ ಗೋವಾಕ್ಕೆ ಬಂದ ಕನ್ನಡಿಗರು ಬೈನಾ ಕಡಲತೀರದಲ್ಲಿ ಮನೆಗಳನ್ನು ನಿರ್ಮಿಸಿಕೊಂಡು ಅನೇಕ ವರ್ಷಗಳಿಂದ ಜೀವನ ಸಾಗಿಸುತ್ತಿದ್ದಾರೆ. ಇಲ್ಲಿನ ಮನೆಗಳು ಅಸುರಕ್ಷಿತ ವಲಯದಲ್ಲಿದೆ ಎನ್ನುವ ಕಾರಣಕ್ಕೆ ಅಲ್ಲಿನ ಸರ್ಕಾರ ಹಂತ ಹಂತವಾಗಿ ಕನ್ನಡಿಗರ ಮನೆಗಳನ್ನು ತೆರವುಗೊಳಿಸುತ್ತಿದೆ.

ಕಳೆದ ವರ್ಷ 75 ಮನೆಗಳನ್ನು ನೆಲಸಮಗೊಳಿಸಿದ್ದ ದಕ್ಷಿಣ ಗೋವಾ ಜಿಲ್ಲಾಡಳಿತ, ಕಳೆದ ಜೂನ್‌ ತಿಂಗಳಲ್ಲಿ 50 ಮನೆಗಳನ್ನು ಕೆಡವಿತ್ತು. ಇದೀಗ 157 ಮನೆಗಳನ್ನು ನೆಲಸಮಗೊಳಿಸಿದೆ. ಮನೆ ಕಳೆದುಕೊಂಡವರಲ್ಲಿ ಬಹುತೇಕ ಮಂದಿ ಕನ್ನಡಿಗರೇ ಆಗಿದ್ದು, ಅವರೆಲ್ಲ ಅತಂತ್ರರಾಗಿದ್ದಾರೆ.

ಕಡಿತಗೊಂಡಿದ್ದ ವಿದ್ಯುತ್‌, ನೀರಿನ ಸಂಪರ್ಕ: ಕಳೆದ ಜೂನ್‌ನಲ್ಲಿ ಕಾಟೆ ಬೈನಾ ವಸತಿ ಪ್ರದೇಶದಲ್ಲಿನ 50ಕ್ಕೂ ಹೆಚ್ಚು ಮನೆಗಳನ್ನು ತೆರವುಗೊಳಿಸಿದ್ದ ಸಂದರ್ಭದಲ್ಲಿಯೇ ಬಾಕಿ ಉಳಿದ ಮನೆಗಳ ವಿದ್ಯುತ್‌ ಹಾಗೂ ನೀರಿನ ಸಂಪರ್ಕ ಕಡಿತಗೊಳಿಸಲಾಗಿತ್ತು ಎಂದು ಸಂತ್ರಸ್ತರು ತಿಳಿಸಿದ್ದಾರೆ.

*
ದೆಹಲಿ ಚಲೋ ಅ.16ಕ್ಕೆ
ಬೈನಾ ಕನ್ನಡಿಗರ ಮೇಲಿನ ಗೋವಾ ಸರ್ಕಾರದ ದಬ್ಬಾಳಿಕೆಯನ್ನು ಖಂಡಿಸಿ ಡಾ.ಪಾಟೀಲ ಪುಟ್ಟಪ್ಪ ನೇತೃತ್ವದಲ್ಲಿ ಅಕ್ಟೋಬರ್‌ 16ರಂದು ದೆಹಲಿ ಚಲೋ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ನವ ನಿರ್ಮಾಣ ಸೇನೆಯ ರಾಜ್ಯ ಘಟಕದ ಅಧ್ಯಕ್ಷ ಭೀಮಾಶಂಕರ ಪಾಟೀಲ್‌ ‘ಪ್ರಜಾವಾಣಿ’ಗೆ ತಿಳಿಸಿದರು. ಗೋವಾದಲ್ಲಿರುವ ಕನ್ನಡಿಗರ ರಕ್ಷಣೆಗೆ ಕೇಂದ್ರ ಸರ್ಕಾರ ಮಧ್ಯ ಪ್ರವೇಶಿಸಬೇಕೆಂದು ಒತ್ತಾಯಿಸಿ ಪ್ರಧಾನಿ ಹಾಗೂ ಕೇಂದ್ರ ಸಚಿವ ಸದಾನಂದ ಗೌಡ ಅವರಿಗೆ ಮನವಿ ಸಲ್ಲಿಸಲಾಗುವುದು ಎಂದು ಹೇಳಿದರು.

Write A Comment