ಕರ್ನಾಟಕ

ಕಲಬುರ್ಗಿ, ಪಾನ್ಸರೆ ಹತ್ಯೆಗೆ ಸಂಚು ನಡೆದಿದ್ದು ಕರ್ನಾಟಕದಲ್ಲಿ !

Pinterest LinkedIn Tumblr

Pansare-Kalburgi-Murder

ನವದೆಹಲಿ: ಹಿರಿಯ ಸಂಶೋಧಕ ಡಾ.ಎಂ.ಎಂ.ಕಲಬುರ್ಗಿ ಮತ್ತು ಮಹಾರಾಷ್ಟ್ರದ ವಿಚಾರವಾ ದಿ ಗೋವಿಂದ ಪಾನ್ಸರೆ ಹತ್ಯೆ ಸಂಚು ನಡೆದದ್ದು ಕರ್ನಾಟಕದಲ್ಲಿ! ಇಂಥದ್ದೊಂದು ಸ್ಫೋಟಕ ಮಾಹಿತಿ ಮಂಗಳವಾರ ಹೊರಬಿದ್ದಿದೆ.

ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಸಂಕೇಶ್ವರದ ಗೌಪ್ಯ ಸ್ಥಳದಲ್ಲಿ ಈ ಬಗ್ಗೆ ಸಭೆ ನಡೆದಿತ್ತು. ಕೊಲ್ಹಾಪುರಕ್ಕೆ ಭೇಟಿ ನೀಡಿದ್ದ ಸಿಐಡಿ ಎಸ್‍ಪಿ ಡಾ.ರಾಜಪ್ಪ ನೇತೃತ್ವದ ತಂಡ ಬಂಧಿತ ಸಮೀರ್ ಗಾಯಕ್ವಾಡ್‍ನನ್ನು 3 ಗಂಟೆಗಳ ಕಾಲ ವಿಚಾರಣೆ ನಡೆಸಿದ ಸಂದರ್ಭದಲ್ಲಿ ಈ ಆಘಾತಕಾರಿ ಅಂಶಹೊರಬಿದ್ದಿದೆ. ಮತ್ತೊಂದು ಗಮನಾರ್ಹ ವಿಚಾರವೆಂದರೆ ಗಾಯಕ್ವಾಡ್‍ನ ಪೊಲೀಸ್ ಕಸ್ಟಡಿ ಬುಧವಾರ ಮುಕ್ತಾಯವಾಗಲಿದೆ. ಹೀಗಾಗಿ ಆತನನ್ನು ಕೊಲ್ಹಾಪುರದ ಕೋರ್ಟ್‍ಗೆ ಹಾಜರುಪಡಿಸಲಾಗುತ್ತದೆ.

ಈ ವೇಳೆಯಲ್ಲಿ ಆತನ್ನು ತಮ್ಮ ವಶಕ್ಕೆ ಒಪ್ಪಿಸುವಂತೆ ಸಿಐಡಿ ಪೊಲೀಸರು ಅರ್ಜಿ ಸಲ್ಲಿಸುವ ಸಾಧ್ಯತೆ ಇದೆ. ಇದರ ಜತೆಗೆ ಕರ್ನಾಟಕದ ಸಿಐಡಿಯ ಮತ್ತೊಂದು ತಂಡ ಸಮೀರ್‍ನ ವಿಚಾರಣೆ ನಡೆಸಿತ್ತು. ಈ ಸಂದರ್ಭದಲ್ಲಿ ಕಲಬುರ್ಗಿ ಹತ್ಯೆ ಹಾಗೂ ಸಂಘಟನೆ ಜತೆಗೆ ಏನಾದರೂ ಸಂಬಂಧ ಇದೆಯೇ ಎಂಬ ಬಗ್ಗೆ ಸೇರಿದಂತೆ ಇತರ ಪ್ರಮುಖ ಮಾಹಿತಿ ಪಡೆದುಕೊಂಡಿದೆ ಎಂದು ಮೂಲಗಳು ತಿಳಿಸಿವೆ. ಆತನ ವಿಚಾರಣೆ ವೇಳೆ ಮಹಾರಾಷ್ಟ್ರ ಪೊಲೀಸರು ಮತ್ತು ಪಾನ್ಸರೆ ಹತ್ಯೆ ತನಿಖಾ ತಂಡದ ಹಿರಿಯ ಅಧಿಕಾರಿಗಳು ಇದ್ದರು.

ಸನಾತನ ಸಂಸ್ಥೆ ಸಿಮಿಯಂತೆ
ಗೋವಾದ ಬಿಜೆಪಿ ಶಾಸಕ ವಿಷ್ಣು ವಾಘ್ ಸನಾತನ ಸಂಸ್ಥೆ ಮೇಲೆ ನಿಷೇಧ ಹೇರಬೇಕೆಂದು ಒತ್ತಾಯಿಸಿದ್ದಾರೆ. “ಸಿಮಿ ಮತ್ತು ಆ ಸಂಘಟನೆ ನಡುವೆ ಯಾವುದೇ ವ್ಯತ್ಯಾಸವಿಲ್ಲ. ಇತರ ದೇಶಗಳಲ್ಲೂ ಅದರ ಮೇಲೆ ನಿಷೇಧ ಹೇರಲಾಗಿದೆ. ಹಿಂಸೆಯಿಂದ ಯಾವುದೇ ಸಾಧನೆ ಮಾಡಲು ಸಾಧ್ಯವಿಲ್ಲ. ಹೀಗಾಗಿ ಅದರ ಮೇಲೆ ನಿಷೇಧ ಹೇರಬೇಕು” ಎಂದು ಅವರು ಹೇಳಿದ್ದಾರೆ. 2009ರಲ್ಲಿ ಗೋವಾದಲ್ಲಿ ಸ್ಫೋಟ ಸಂಭವಿಸಿದಾಗಲೇ ಇಂಥ ಕ್ರಮ ಕೈಗೊಳ್ಳಬೇಕಿತ್ತು. ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿಗೆ ಮನವಿ ಮಾಡುವುದಾಗಿ ಅವರು ತಿಳಿಸಿದ್ದಾರೆ. ಉತ್ತರ ಗೋವಾ ಜಿಲ್ಲೆಯ ಬಾಂದೋಡ್ ನಲ್ಲಿ ಪ್ರಧಾನ ಕಚೇರಿ ಹೊಂದಿರುವ ಸನಾತನ ಸಂಸ್ಥೆಯ ಹೆಸರು ಪಾನ್ಸರೆ ಹತ್ಯೆ ಪ್ರಕರಣದಲ್ಲಿ ತಳಕು ಹಾಕಿಕೊಂಡಿದೆ. ಸಂಸ್ಥೆಯ ಕಾರ್ಯಕರ್ತ ರುದ್ರ ಪಾಟೀಲ್ ಎಂಬಾತ ಪ್ರಮುಖ ಪಾತ್ರ ವಹಿಸಿದ್ದಾನೆ ಎನ್ನುವುದು ಸದ್ಯದ ಆರೋಪ. ಇದರ ಜತೆಗೆ ಗೋವಾ ಸ್ಫೋಟದಲ್ಲೂ ಸಂಘಟನೆ ಪಾತ್ರವಿದೆ ಎಂದು ಶಂಕಿಸಲಾಗಿದೆ.

ಬೆದರಿಕೆ ಹಾಕಿಲ್ಲ
ಮಹಾರಾಷ್ಟ್ರದ ಪತ್ರಕರ್ತ ನಿಖಿಲ್ ವಾಗ್ಲೆಗೆ ಬೆದರಿಕೆ ಹಾಕಿಲ್ಲ ಎಂದು ಸನಾತನ ಸಂಸ್ಥೆ ತಿಳಿಸಿದೆ. ಸಾರ್ವಜನಿಕರ ಅನುಕಂಪ ಗಿಟ್ಟಿಸಿಕೊಳ್ಳಲು ಅವರು ಇಂಥ ಗಿಮಿಕ್ ಮಾಡುತ್ತಿದ್ದಾರೆಂದು ಸ್ಪಷ್ಟನೆ ನೀಡಿದೆ. ಈ ನಡುವೆ, ಪಾನ್ಸರೆ ಹತ್ಯೆಯ ಆರೋಪ ಎದುರಿಸುತ್ತಿರುವ ರುದ್ರ ಪಾಟೀಲ್ 2009ರಿಂದ ಸಂಸ್ಥೆ ಜತೆಗೆ ಯಾವುದೇ ಸಂಪರ್ಕ ಇಟ್ಟು ಕೊಂಡಿಲ್ಲ ಎಂದು ಸಂಸ್ಥೆಯ ಮ್ಯಾನೇಜಿಂಗ್ ಟ್ರಸ್ಟಿ ವಿರೇಂದ್ರ ಮರಾಠೆ ತಿಳಿಸಿದ್ದಾರೆ.

ಸನಾತನ ಸಂಸ್ಥೆ ಕುರಿತ ಯಾವುದೇ ಕಡತ ನೋಡಿದ ನೆನಪು ನನಗಿಲ್ಲ. 2011ರ ಜೂನ್‍ನಲ್ಲಿ ನಿವೃತ್ತಿಯಾದೆ. ಇಂಟೆಲಿಜೆನ್ಸ್ ಬ್ಯೂರೋ ಮತ್ತು ಇತರ ಸಂಸ್ಥೆಗಳಿಂದ ಬಂದ ಮಾಹಿತಿಯನ್ನು ಉಲ್ಲೇಖಿಸಿ ಗೃಹ ಕಾರ್ಯದರ್ಶಿ ಮತ್ತು ಗೃಹ ಸಚಿವರಿಗೆ ವಿವರಣೆ ನೀಡಿದ್ದಿರಬಹುದು.
– ಜಿ.ಕೆ.ಪಿಳ್ಳೆ ನಿವೃತ್ತ ಗೃಹ ಕಾರ್ಯದರ್ಶಿ

Write A Comment