ಕರ್ನಾಟಕ

ರಾಘವೇಶ್ವರ ಅತ್ಯಾಚಾರ ಪ್ರಕರಣ: ಸರಕಾರದಿಂದ ಶ್ರೀಗಳ ರಕ್ಷಣೆ ಮಹಿಳಾ ಆಯೋಗ ಆರೋಪ

Pinterest LinkedIn Tumblr

Lalithakಬೆಂಗಳೂರು, ಸೆ.22: ರಾಘವೇಶ್ವರ ಶ್ರೀ ವಿರುದ್ಧದ ಅತ್ಯಾಚಾರ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಸರಕಾರವೇ ಶ್ರೀಗಳನ್ನು ರಕ್ಷಣೆ ಮಾಡುತ್ತಿರುವ ಬಗ್ಗೆ ಅನುಮಾನ ಮೂಡುತ್ತಿದೆ ಎಂದು ರಾಷ್ಟ್ರೀಯ ಮಹಿಳಾ ಆಯೋಗದ ಅಧ್ಯಕ್ಷೆ ಲಲಿತಾ ಕುಮಾರಮಂಗಳಂ ಆಪಾದಿಸಿದ್ದಾರೆ.

ಮಂಗಳವಾರ ನಗರದ ಕುಮಾರಕೃಪಾದ ಸಭಾಂಗಣದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು,ಇಬ್ಬರು ಮಹಿಳೆಯರು ರಾಘವೇಶ್ವರ ಶ್ರೀಗಳು ತಮ್ಮ ಮೇಲೆ ಲೈಂಗಿಕ ಅತ್ಯಾಚಾರ ನಡೆಸಿದ್ದಾರೆಂದು ಠಾಣೆಗಳಲ್ಲಿ ದೂರು ದಾಖಲಿಸಿದ್ದರೂ, ಸರಕಾರದ ಇಚ್ಛಾಶಕ್ತಿಯ ಕೊರತೆಯಿಂದಾಗಿ ಅವರು ನಿರ್ಭಯವಾಗಿ ಓಡಾಡುತ್ತಿದ್ದಾರೆ. ಸಂತ್ರಸ್ತ ಮಹಿಳೆಯರು ಮುಖಮುಚ್ಚಿಕೊಂಡು ನೋವು ಅನುಭವಿಸುತ್ತಿದ್ದಾರೆ ಎಂದು ಹೇಳಿದರು.

ಕರ್ನಾಟಕ ರಾಜ್ಯ ಶಾಂತಿಗೆ ಹೆಸರಾದ ರಾಜ್ಯವಾಗಿದ್ದರೂ ಸರಕಾರದ ಇಚ್ಛಾಶಕ್ತಿಯ ಕೊರತೆಯಿಂದಾಗಿ ಸಂತ್ರಸ್ತರಿಗೆ ನ್ಯಾಯ ಸಿಗುವುದು ವಿಳಂಬವಾಗುತ್ತಿದೆ. ಸರಕಾರ ಕೂಡಲೇ ಎರಡೂ ತನಿಖೆಗಳನ್ನು ತೀವ್ರಗತಿಯಲ್ಲಿ ಸಾಗಲು ತನ್ನ ಇಚ್ಛಾಶಕ್ತಿಯನ್ನು ತೋರ್ಪಡಿಸಬೇಕೆಂದು ಹೇಳಿದರು. ಮಹಿಳೆಯರ ಮೇಲಿನ ಅತ್ಯಾಚಾರ ಪ್ರಕರಣಗಳಿಗೆ ಸಂಬಂಧಿಸಿದಂತೆ ಬುಧವಾರ ರಾಜ್ಯಪಾಲ ವಿ.ಆರ್.ವಾಲಾ ಹಾಗೂ ಗೃಹ ಸಚಿವ ಕೆ.ಜೆ.ಜಾರ್ಜ್ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿ, ಈ ಎರಡು ಪ್ರಕರಣಗಳನ್ನು ಶೀಘ್ರವಾಗಿ ಇತ್ಯರ್ಥಗೊಳಿಸಿ ಎಂದು ಮನವಿ ಮಾಡಿಕೊಳ್ಳಲಾಗುವುದು ಎಂದರು. ದೇಶದಲ್ಲಿ ಶೇ.60ರಿಂದ 70ರಷ್ಟು ಅತ್ಯಾಚಾರ ಪ್ರಕರಣಗಳು ಉತ್ತರ ಭಾರತದಲ್ಲಿಯೇ ನಡೆಯುತ್ತವೆ. ಉಳಿದ ಅತ್ಯಾಚಾರ ಪ್ರಕರಣಗಳು ದಕ್ಷಿಣ ಭಾರತದಲ್ಲಿ ದಾಖಲಾಗಿದ್ದು, ಉತ್ತರ ಪ್ರದೇಶ ರಾಜ್ಯದಲ್ಲಿ ಅತಿ ಹೆಚ್ಚು ಹಾಗೂ ಕರ್ನಾಟಕ, ಆಂಧ್ರಪ್ರದೇಶದಲ್ಲಿ ಕಡಿಮೆ ಪ್ರಕರಣಗಳು ದಾಖಲಾಗಿವೆ ಎಂದರು.

Write A Comment