ಕರ್ನಾಟಕ

ರಿಯಾಜ್‌ಗೆ ₹2 ಲಕ್ಷ ಕೊಟ್ಟಿದ್ದ ಕಂದಾಯ ಸಚಿವರ ಪಿ.ಎ!

Pinterest LinkedIn Tumblr

lokaಬೆಂಗಳೂರು: ಈಗ ಅಮಾನತಿನಲ್ಲಿರುವ ಲೋಕಾಯುಕ್ತ ಜಂಟಿ ಆಯುಕ್ತ (ಸಾರ್ವಜನಿಕ ಸಂಪರ್ಕ) ಸೈಯದ್ ರಿಯಾಜ್ ಅವರಿಗೆ ಕಂದಾಯ ಸಚಿವ ವಿ. ಶ್ರೀನಿವಾಸ ಪ್ರಸಾದ್ ಅವರ ಆಪ್ತ ಕಾರ್ಯದರ್ಶಿ ನಾಗರಾಜ್ ಅವರು ಒಟ್ಟು ₹ 2 ಲಕ್ಷ ಕೊಟ್ಟಿದ್ದರು ಎಂಬ ಮಾಹಿತಿ ಬಹಿರಂಗವಾಗಿದೆ.

ಲೋಕಾಯುಕ್ತ ಸಂಸ್ಥೆಯಲ್ಲಿನ ಭ್ರಷ್ಟಾಚಾರ ಪ್ರಕರಣಗಳ ಬಗ್ಗೆ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (ಎಸ್‌ಐಟಿ) ಒಂದು ಪ್ರಕರಣದಲ್ಲಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದೆ. ರಿಯಾಜ್ ಅವರಿಗೆ ನಾಗರಾಜ್ ಅವರಿಂದ ಹಣ ಸಂದಾಯ ಆಗಿರುವ ಮಾಹಿತಿ ದೋಷಾರೋಪ ಪಟ್ಟಿಯಲ್ಲಿದೆ.

‘ನಾಗರಾಜ್ ₹ 1 ಲಕ್ಷ ಕೊಡುತ್ತಾರೆ. ಅದನ್ನು ತಂದುಕೊಡು ಎಂದು ರಿಯಾಜ್ ನನಗೆ 2014ರಲ್ಲಿ ಸೂಚಿಸಿದ್ದರು. ನಾಗರಾಜ್‌ ಅವರು ವಾಹನ ಚಾಲಕನ ಮೂಲಕ ₹ 1 ಲಕ್ಷ ತಲುಪಿಸಿದರು. ಆ ಮೊತ್ತವನ್ನು ರಿಯಾಜ್ ನಿವಾಸಕ್ಕೆ ನಾನೇ ಹೋಗಿ ಕೊಟ್ಟುಬಂದೆ’ ಎಂದು ಪ್ರಕರಣದ ಸಾಕ್ಷಿ, ಲೋಕಾಯುಕ್ತ ಸಿಬ್ಬಂದಿಯೊಬ್ಬರು ಎಸ್‌ಐಟಿಗೆ ನೀಡಿರುವ ಹೇಳಿಕೆಯಲ್ಲಿ ತಿಳಿಸಿದ್ದಾರೆ.

‘ನಾಗರಾಜ್ ಅವರು ₹ 1 ಲಕ್ಷ ಕೊಡುತ್ತಾರೆ, ಅದನ್ನು ತಂದುಕೊಡು ಎಂದು ರಿಯಾಜ್ ಇನ್ನೊಂದು ಬಾರಿ ಸೂಚಿಸಿದ್ದರು. ನಾಗರಾಜ್ ತಲುಪಿಸಿದ ಹಣವನ್ನು ಬೆಂಗಳೂರಿನ ಆರ್‌.ಸಿ. ಕಾಲೇಜು ಎದುರಿನ ಮಸೀದಿ ಬಳಿ ರಿಯಾಜ್‌ ಅವರಿಗೆ ನೀಡಿದ್ದೆ’ ಎಂದು ಅವರು ಹೇಳಿಕೆಯಲ್ಲಿ ವಿವರಿಸಿದ್ದಾರೆ.

ಮಿಠಾಯಿಗೆ ಎಂಜಿನಿಯರ್‌ ಹಣ!: ರಿಯಾಜ್‌ ಅವರು ಸಿಹಿ ತಿಂಡಿ ಖರೀದಿಸಿದಾಗ, ಅದರ ಹಣವನ್ನು ಎಂಜಿನಿಯರ್‌ ಒಬ್ಬರು ಪಾವತಿಸಿದ್ದ ಬಗ್ಗೆಯೂ ಎಸ್‌ಐಟಿ ಮಾಹಿತಿ ಸಂಗ್ರಹಿಸಿದೆ.

‘2015ರ ಫೆಬ್ರುವರಿಯಲ್ಲಿ ಬೆಂಗಳೂರಿನ ಮಲ್ಲೇಶ್ವರದ ಆಶಾ ಸ್ವೀಟ್ಸ್‌ನಲ್ಲಿ ವಿವಿಧ ಸಿಹಿ ತಿಂಡಿ ಖರೀದಿಸಲು ಸೂಚಿಸಿದ ರಿಯಾಜ್, ಸರ್ಕಾರಿ ಕಾರಿನಲ್ಲಿ ನನ್ನನ್ನು ಅಲ್ಲಿಗೆ ಕಳುಹಿಸಿದರು. ಸಿಹಿ ತಿಂಡಿ ಹಣವನ್ನು ಎಂಜಿನಿಯರ್‌ ಇಸ್ಮಾಯಿಲ್‌ ಪಾವತಿಸುತ್ತಾರೆ ಎಂದು ರಿಯಾಜ್‌ ಹೇಳಿದ್ದರು’ ಎಂದು ಸಾಕ್ಷಿ ಹೇಳಿರುವ ನೌಕರ ತಿಳಿಸಿದ್ದಾರೆ.

‘ಒಮ್ಮೆ ₹ 30 ಸಾವಿರ ಮೊತ್ತದ ಸಿಹಿ ತಿಂಡಿ, ಇನ್ನೊಮ್ಮೆ ₹40 ಸಾವಿರ ಮೊತ್ತದ ತಿಂಡಿ ಖರೀದಿಸಲಾಯಿತು. ಒಟ್ಟು ₹ 70 ಸಾವಿರ ಬಿಲ್ ಆಗಿದೆ’ ಎಂದು ಇಸ್ಮಾಯಿಲ್ ಅವರಿಗೆ ತಿಳಿಸಲಾಯಿತು ಎಂದು ಹೇಳಿಕೆ ನೀಡಿದ್ದಾರೆ.

‘ರಿಯಾಜ್‌ ಸೂಚನೆ ಆಧರಿಸಿ, ಮೂರು ಮೊಬೈಲ್‌ ಫೋನುಗಳನ್ನು ತಂದುಕೊಡುವಂತೆ ಎಂಜಿನಿಯರ್ ಇಸ್ಮಾಯಿಲ್‌ ಅವರಿಗೆ ಹೇಳಿದ್ದೆ. ಅವರಿಂದ ರಿಯಾಜ್‌ ಅವರಿಗೆ ಮೂರು ಮೊಬೈಲ್‌ ಫೋನ್‌ಗಳು ಬಂದವು. ಅವುಗಳಲ್ಲಿ ಎರಡನ್ನು ತಮ್ಮ ಬಳಿ ಇಟ್ಟುಕೊಂಡ ರಿಯಾಜ್‌, ಇನ್ನೊಂದನ್ನು ನನಗೆ ಕೊಟ್ಟರು’ ಎಂದು ಅವರು ವಿವರಿಸಿದ್ದಾರೆ.
*
ಹೊಟ್ಟೆ ಕೃಷ್ಣ ಜೊತೆ ದೇವಸ್ಥಾನಕ್ಕೆ
ತಿಪಟೂರು ಸಮೀಪದ ಒಂದು ಊರಿನ ದೇವಸ್ಥಾನದ ಉದ್ಘಾಟನೆಗೆ ಲೋಕಾಯುಕ್ತ ವೈ. ಭಾಸ್ಕರ ರಾವ್ ಅವರು ಸೈಯದ್‌ ರಿಯಾಜ್‌ ಜೊತೆ ತೆರಳಿದ್ದರು. ಈ ಸಂದರ್ಭದಲ್ಲಿ ಭಾಸ್ಕರ ರಾವ್ ಜೊತೆ, ವಿ. ಭಾಸ್ಕರ್ ಅಲಿಯಾಸ್ ‘420 ಭಾಸ್ಕರ್’, ಹೊಟ್ಟೆಕೃಷ್ಣ ಅವರೂ ಇದ್ದರು ಎಂದು ದೋಷಾರೋಪ ಪಟ್ಟಿಯಲ್ಲಿ ವಿವರಿಸಲಾಗಿದೆ.

Write A Comment