ಕರ್ನಾಟಕ

ಹಾವೇರಿ, ಮೈಸೂರಲ್ಲಿ ಮತ್ತಿಬ್ಬರು ರೈತರ ಆತ್ಮಹತ್ಯೆ

Pinterest LinkedIn Tumblr

sucideಮೈಸೂರು, ಸೆ.21-ಜಿಲ್ಲೆಯಲ್ಲಿ ರೈತರ ಆತ್ಮಹತ್ಯೆ ಕೃತ್ಯಗಳು ಮುಂದುವರೆದಿದ್ದು, ಇಂದೂ ಕೂಡ ಎಚ್.ಡಿ.ಕೋಟೆ ತಾಲೂಕಿನ ರೈತನೊಬ್ಬ ಸಾಲಬಾಧೆಯಿಂದ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾದ ಘಟನೆ ನಡೆದಿದೆ. ಮಾದವಪುರ ಗ್ರಾಮದ ನಿವಾಸಿ ಶಿವಲಿಂಗರಾಜು (40) ಆತ್ಮಹತ್ಯೆ ಮಾಡಿಕೊಂಡ ರೈತ. ಈತ ತನ್ನ 4 ಎಕರೆ ಜಮೀನಿನಲ್ಲಿ ಹತ್ತಿ ಮತ್ತು ರಾಗಿ ಬೆಳೆಯಲು ಗ್ರಾಮದ ವಿಎಸ್‌ಎಸ್‌ಎನ್ ಬ್ಯಾಂಕ್‌ನಲ್ಲಿ ಮತ್ತು ಕೈ ಸಾಲವಾಗಿ ಲಕ್ಷಾಂತರ ರೂ. ಸಾಲ ಮಾಡಿದ್ದ ಎಂದು ಹೇಳಲಾಗಿದೆ. ಸಕಾಲಕ್ಕೆ ಮಳೆ ಬಾರದೆ ಬೆಳೆ ಕೈ ಕೊಟ್ಟ ಕಾರಣ ಇಂದು ಮುಂಜಾನೆ ತನ್ನ ಜಮೀನಿನಲ್ಲಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಎಚ್.ಡಿ.ಕೋಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಎಸ್‌ಐ ಬಾಲಕೃಷ್ಣ, ತಹಶೀಲ್ದಾರ್ ನಂಜುಂಡಯ್ಯ, ಕೃಷಿ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಕುಟುಂಬಕ್ಕೆ ಸಾಂತ್ವನ ಹೇಳಿದ್ದಾರೆ.

ಹಾವೇರಿ: ಸಾಲದ ಬಾಧೆ, ಬೆಳೆನಷ್ಟ ತಾಳಲಾರದೆ ರೈತನೋರ್ವ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಜಿಲ್ಲೆಯ ಹಿರೇಕೆರೂರು ತಾಲೂಕಿನ ಹೊಸವೀರಾಪುರ ಗ್ರಾಮದಲ್ಲಿ ನಡೆದಿದೆ.

ಉದಯಕುಮಾರ್ (35) ಎಂಬುವವರೇ ಆತ್ಮಹತ್ಯೆ ಮಾಡಿಕೊಂಡ ರೈತನಾಗಿದ್ದು, ಇವರು ತಮ್ಮ ಎರಡೂವರೆ ಎಕರೆ ಜಮೀನಿನಲ್ಲಿ ಹತ್ತಿ, ಮೆಕ್ಕೆಜೋಳ ಬೆಳೆದಿದ್ದರು. ಈ ಸಂಬಂಧ 3 ಲಕ್ಷ ರೂ. ಸಾಲ ಮಾಡಿದ್ದರು. ಬೆಳೆ ನಷ್ಟದಿಂದ ಸಾಲ ಹೇಗೆ ತೀರಿಸಬೇಕೆಂದು ತಿಳಿಯದೆ ಮನನೊಂದು ಜಮೀನಿನಲ್ಲಿಯೇ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡರೆಂದು ಪೊಲೀಸರು ತಿಳಿಸಿದ್ದಾರೆ.

ಹಿರೇಕೆರೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ನಡೆಸಿದ್ದಾರೆ.

Write A Comment