ಕರ್ನಾಟಕ

ಶೂನ್ಯ ಬಡ್ಡಿ ರೈತರಿಗೆ ಸಾಲ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ..?

Pinterest LinkedIn Tumblr

sidduಬೆಂಗಳೂರು, ಸೆ.21-ಅಕ್ಟೋಬರ್ ಮೊದಲ ವಾರದಲ್ಲಿ ರಾಜ್ಯ ವಿಧಾನಮಂಡಲದ  ವಿಶೇಷ ಅಧಿವೇಶನ ನಡೆಸುವುದು, ಶೂನ್ಯ ಬಡ್ಡಿ ದರದಲ್ಲಿ ಪಶು ಆಹಾರ ಖರೀದಿಗೆ 50 ಸಾವಿರದವರೆಗೂ ಸಾಲ, 20 ಕೋಟಿ ರೂ. ವೆಚ್ಚದಲ್ಲಿ ವಿಧಾನಸೌಧದ ನವೀಕರಣ, ಸ್ವಾಯತ್ತ ವೈದ್ಯಕೀಯ ಮಹಾವಿದ್ಯಾಲಯದ ಪ್ರಾಧ್ಯಾಪಕರ ವೇತನ ಹೆಚ್ಚಳ, ಮಕ್ಕಳ ಸುರಕ್ಷಾ ನೀತಿ ಸೇರಿದಂತೆ ಹಲವು ಮಹತ್ವದ ನಿರ್ಧಾರಗಳನ್ನು  ಇಂದು ನಡೆದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಕೈಗೊಳ್ಳಲಾಗಿದೆ. ಸಹಕಾರಿ ಬ್ಯಾಂಕ್‌ಗಳ ಮೂಲಕ ಶೂನ್ಯ ಬಡ್ಡಿ ದರದಲ್ಲಿ ರೈತರು ಪಶು ಆಹಾರ ಖರೀದಿಸಲು ಅನುಕೂಲವಾಗುವಂತೆ 50 ಸಾವಿರ ರೂ.ವರೆಗೂ ಸಾಲ ನೀಡುವ ಯೋಜನೆ ಅನುಷ್ಟಾನಗೊಳಿಸಲು ಸಂಪುಟ ಸಭೆಯಲ್ಲಿ ಅನುಮೋದನೆ ನೀಡಲಾಗಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.

ಲೋಕಾಯುಕ್ತ ಕಾಯ್ದೆಗೆ ತಿದ್ದುಪಡಿ ತರುವುದು, ಬರ ಪರಿಸ್ಥಿತಿ ಮೇಲಿನ ಚರ್ಚೆ, ಮೂಢನಂಬಿಕೆ ನಿಷೇಧ ಕಾಯ್ದೆ ಸೇರಿದಂತೆ ಕೆಲವೊಂದು ಸೀಮಿತ ವಿಷಯಗಳ ಬಗ್ಗೆ ಚರ್ಚಿಸಲು ವಿಶೇಷ ಅಧಿವೇಶನ ಕರೆಯಲು  ನಿರ್ಧರಿಸಿ 3 ದಿನದಿಂದ ಒಂದು ವಾರ ಕಾಲ ಅಧಿವೇಶನ ನಡೆಸಲು ಸರ್ಕಾರ ಉದ್ದೇಶಿಸಿದ್ದು, ಸಂಪುಟ ಸಭೆಯಲ್ಲಿ ದಿನಾಂಕ ನಿಗದಿಪಡಿಸಲಾಗಿದೆ.
ವಿಧಾನಸೌಧದ ಮೆಟ್ಟಿಲು, ಶೌಚಾಲಯ, ಲಾಬಿಗಳು, ನೀರಿನ ಪೂರೈಕೆ ವ್ಯವಸ್ಥೆ ಹಾಗೂ ನೈರ್ಮಲೀಕರಣಗೊಳಿಸಲು  ಮೊದಲ ಹಂತದಲ್ಲಿ 20 ಕೋಟಿ ರೂ. ನೀಡಲು ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ.

ಸ್ವಾಯತ್ತ ವೈದ್ಯಕೀಯ ಮಹಾವಿದ್ಯಾಲಯ ಗಳ ಪ್ರಾಧ್ಯಾಪಕರ ಮಾಸಿಕ ವೇತನ ಹೆಚ್ಚಳ ಮಾಡಲು ಸಂಪುಟ ಸಭೆ ಒಪ್ಪಿಗೆ ನೀಡಿದೆ. ಜ್ಞಾನ ಆಯೋಗದ ಶಿಫಾರಸ್ಸಿನಂತೆ ಮಡಿವಾಳದ ಕೆರೆಯನ್ನು ಜೀವವೈವಿಧ್ಯ ಕೆರಯನ್ನಾಗಿ ಅಭಿವೃದ್ಧಿಪಡಿಸಲು ಉದ್ದೇಶಿಸಲಾಗಿದೆ. ಹೈದರಾಬಾದ್-ಕರ್ನಾಟಕ ಭಾಗದಲ್ಲಿ ಜವಳಿ ಪಾರ್ಕ್ ಹಾಗೂ ಜವಳಿ ಉದ್ಯಮ ಸ್ಥಾಪನೆಗೆ ಅನುಕೂಲವಾಗುವಂತೆ ಸರ್ಕಾರ ರಿಯಾಯಿತಿ ನೀಡಲು ಉದ್ದೇಶಿಸಿದೆ. ಮೈಸೂರು ಕಾಗದ ಕಾರ್ಖಾನೆಗೆ ಸರ್ಕಾರ ನೀಡಿರುವ ಬಂಡವಾಳ ವಾಪಸ್ ಪಡೆಯುವ ಬಗ್ಗೆ ಸಂಪುಟ ಸಭೆಯಲ್ಲಿ ಗಂಭೀರ ಚರ್ಚೆ ನಡೆಸಲಾಗಿದೆ.
ಕಿತ್ತೂರು ರಾಣಿ ಚೆನ್ನಮ್ಮ ಹಾಗೂ ಮೊರಾರ್ಜಿ ದೇಸಾಯಿ ವಸತಿ ಶಾಲಾ ಸಂಕೀರ್ಣಗಳನ್ನು ರಾಜ್ಯದ ಎಂಟು ಸ್ಥಳಗಳಲ್ಲಿ ನಿರ್ಮಿಸಲು ಆಡಳಿತಾತ್ಮಕ ಅನುಮೋದನೆಯನ್ನು ಸಂಪುಟ ಸಭೆ ನೀಡಿದೆ. ಅಲ್ಲದೆ ಹೊಸದಾಗಿ ಪುತ್ತೂರು, ಕೋಲಾರ, ಮಾಲೂರುಗಳಲ್ಲಿ ಮೊರಾರ್ಜಿ ವಸತಿ ಶಾಲೆ ಸ್ಥಾಪನೆ ಹಾಗೂ ಗುಡಿಬಂಡೆ, ಬಸವನ ಬಾಗೇವಾಡಿಗಳಲ್ಲಿ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆ ಆರಂಭಿಸಲು ಸಂಪುಟ ಸಭೆ ಒಪ್ಪಿಗೆ ನೀಡಿದೆ.

ಚಾಮರಾಜನಗರದಲ್ಲಿ 12 ಕೋಟಿ ರೂ. ವೆಚ್ಚದಲ್ಲಿ ಕಸಾಯಿಖಾನೆ ಸ್ಥಾಪಿಸಲು ಉದ್ದೇಶಿಸಲಾಗಿದೆ. ಶಾಲೆಗಳಲ್ಲಿ ಮಕ್ಕಳ ಭದ್ರತೆ ಹಾಗೂ ಸುರಕ್ಷತೆ ದೃಷ್ಟಿಯಿಂದ ಮಕ್ಕಳ ಸುರಕ್ಷತಾ ನೀತಿಯನ್ನು ಜಾರಿಗೆ ತರಲು ತೀರ್ಮಾನಿಸಿದ್ದು, ಸುರಕ್ಷತಾ ನೀತಿಯ ಮಾರ್ಗಸೂಚಿಗಳಿಗೆ ಸಂಪುಟ ಅನುಮೋದನೆ ನೀಡಿದೆ. ಎತ್ತಿನ ಹೊಳೆ ಕುಡಿಯುವ ನೀರಿನ ಯೋಜನೆಯಿಂದ ಉಂಟಾಗುವ ಸಾಮಾಜಿಕ ಪರಿಣಾಮಗಳ ಅಧ್ಯಯನಕ್ಕೂ ಒಪ್ಪಿಗೆ ನೀಡಲಾಗಿದೆ. ಮುಖ್ಯಮಂತ್ರಿಗಳ ನಗರೋತ್ಥಾನ ಯೋಜನೆಯಡಿ ಬೆಂಗಳೂರು ಅಭಿವೃದ್ಧಿಗೆ ಒಂದು ಸಾವಿರ ಕೋಟಿ ರೂ.ಗಳ ಕ್ರಿಯಾಯೋಜನೆಗೆ ಘಟನೋತ್ತರ ಅನುಮೋದನೆ ನೀಡಲು ಒಪ್ಪಿಗೆ ಸೂಚಿಸಲಾಗಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.

Write A Comment