ಕರ್ನಾಟಕ

ಮೈಸೂರು ದಸರಾ ಉದ್ಘಾಟನೆಗೆ ಕಡಿದಾಳ್ ಶಾಮಣ್ಣ ನಕಾರ ! ಯಾಕಾಗಿ ಅವರು ಆಹ್ವಾನ ತಿರಸ್ಕರಿಸಿದರು …ಮುಂದೆ ಓದಿ..

Pinterest LinkedIn Tumblr

kadidala shamanna

ಬೆಂಗಳೂರು, ಸೆ.21: ವಿಶ್ವ ವಿಖ್ಯಾತ ಮೈಸೂರು ದಸರಾವನ್ನು ಚಿಂತಕ, ಪ್ರಗತಿಪರ ರೈತ ಮುಖಂಡ ಕಡಿದಾಳ್ ಶಾಮಣ್ಣ ಅವರು ಉದ್ಘಾಟಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯರವರು ಆಹ್ವಾನ ನೀಡಿದ್ದಾರೆ. ಆದರೆ ಸರ್ಕಾರದ ಈ ಆಹ್ವಾನವನ್ನು ಶಾಮಣ್ಣ ಅವರು ತಿರಸ್ಕರಿಸಿದ್ದಾರೆ.

ಮೈಸೂರು ದಸರಾ ಉದ್ಘಾಟಿಸುವಂತೆ ಕಡಿದಾಳ್ ಶಾಮಣ್ಣ ಅವರನ್ನು ಕೋರಲಾಗಿದೆ. ದಸರಾ ಉತ್ಸವ ಸಮಿತಿಯ ಕೋರಿಕೆಯನ್ನು ಶಾಮಣ್ಣ ಅವರು ಒಪ್ಪುವ ವಿಶ್ವಾಸವನ್ನು ಕಂದಾಯ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಶ್ರೀನಿವಾಸ್ ಪ್ರಸಾದ್‌ರವರು ವ್ಯಕ್ತಪಡಿಸಿದರು.

ಸಚಿವರು ಈ ವಿಚಾರ ತಿಳಿಸಿದ ಮರು ಗಳಿಗೆಯಲ್ಲಿ ಸರ್ಕಾರದ ಆಹ್ವಾನವನ್ನು ತಿರಸ್ಕರಿಸಿದ್ದಾರೆ. ರಾಜ್ಯದಲ್ಲಿ ಉಂಟಾಗಿರುವ ಬರ ಹಾಗೂ ಆತ್ಮಹತ್ಯೆ ಮಾಡಿಕೊಳ್ಳದಂತೆ ರೈತರಲ್ಲಿ ಆತ್ಮಸ್ಥೈರ್ಯ ತುಂಬಲು ಈ ಬಾರಿ ದಸರಾವನ್ನು ಸರಳವಾಗಿ ಆಚರಿಸಿ ರೈತರಿಂದ ದಸರಾ ಉದ್ಘಾಟಿಸಲು ನಿರ್ಧರಿಸಲಾಗಿದೆ ಎಂದು ಹೇಳಿದರು.

ದಸರಾ ಉತ್ಸವದಲ್ಲಿ ಪಾಲ್ಗೊಳ್ಳುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಅಧಿಕೃತ ಆಹ್ವಾನ ನೀಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ವಿ. ಶ್ರೀನಿವಾಸಪ್ರಸಾದ್, ಬರ ಹಿನ್ನೆಲೆಯಲ್ಲಿ ಈ ಬಾರಿಯ ಮೈಸೂರು ದಸರಾವನ್ನು ಸರಳ ಹಾಗೂ ಸಾಂಪ್ರದಾಯಿಕವಾಗಿ ನಡೆಸುವ ತೀರ್ಮಾನ ಕೈಗೊಳ್ಳಲಾಗಿದೆ. ಅದರಂತೆ ಯಾವುದೇ ಅದ್ದೂರಿ, ಆಡಂಬರವಿಲ್ಲದೆ ಈ ಬಾರಿಯ ದಸರಾ ಅಕ್ಟೋಬರ್ 15 ರಿಂದ 24ರ ವರೆಗೂ ನಡೆಯಲಿದೆ ಎಂದು ಅವರು ಹೇಳಿದರು.

ಬರದ ಹಿನ್ನೆಲೆಯಲ್ಲಿ ದಸರಾ ಉತ್ಸವದ ಖರ್ಚು ಈ ಬಾರಿ 4 ಕೋಟಿಗೆ ಮಿತಿಗೊಳಿಸಲಾಗಿದ್ದು, ಪ್ರತಿ ವರ್ಷ 15 ಕೋಟಿಗೂ ಹೆಚ್ಚು ರೂ.ಗಳನ್ನು ಈ ಉತ್ಸವಕ್ಕಾಗಿ ವೆಚ್ಚ ಮಾಡಲಾಗುತ್ತಿತ್ತು ಎಂದರು.

ಸರಳ ದಸರಾ ಆಚರಣೆ ಹಿನ್ನೆಲೆಯಲ್ಲಿ ಈ ಬಾರಿ ಮೈಸೂರಿನಲ್ಲಿ ಆಕರ್ಷಣೀಯವಾದ ದೀಪಾಲಂಕಾರ ಇರುವುದಿಲ್ಲ, ದಸರಾ ಮೆರವಣಿಗೆ ಸಾಗುವ ಮಾರ್ಗದಲ್ಲಿ ಮಾತ್ರ ದೀಪಾಲಂಕಾರ ಇರುತ್ತದೆ. ಜತೆಗೆ ದಸರಾ ಕ್ರೀಡೆಗಳನ್ನು ಜಿಲ್ಲಾ ಮಟ್ಟದ ಮಟ್ಟಿಗೆ ಸೀಮಿತಗೊಳಿಸಲಾಗಿದೆ ಎಂದರು.

ಪ್ರಖ್ಯಾತ ಕಲಾವಿದರಿಗೆ ಆಹ್ವಾನ ಇಲ್ಲ

ದಸರಾ ಉತ್ಸವದ ಸಂದರ್ಭದಲ್ಲಿ ಪ್ರತಿದಿನ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ದೇಶದ ದೊಡ್ಡ ಕಲಾವಿದರನ್ನು ಕರೆಸಿ ಕಾರ್ಯಕ್ರಮ ನೀಡಲಾಗುತ್ತಿತ್ತು. ಈ ಬಾರಿ ಸ್ಥಳೀಯ ಕಲಾವಿದರುಗಳೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಡಲಿದ್ದಾರೆ. ಜಂಬೂಸವಾರಿಯ ಮೆರವಣಿಗೆಯಲ್ಲೂ ಸಹ ಸ್ಥಳೀಯ ಕಲಾವಿದರೆ ಪಾಲ್ಗೊಳ್ಳುತ್ತಾರೆ ಎಂದರು.

ಪ್ರತಿ ವರ್ಷ ಯುವ ದಸರಾಗೆ 4 ಕೋಟಿ ರೂ.ಗಳನ್ನು ಖರ್ಚು ಮಾಡಲಾಗುತ್ತಿತ್ತು. ಈ ಬಾರಿ ಯುವ ದಸರಾ ಇರುವುದಿಲ್ಲ ಎಂದು ಸಚಿವ ಶ್ರೀನಿವಾಸಪ್ರಸಾದ್ ಹೇಳಿದರು.

ದಸರಾಗೆ ಅಗತ್ಯ ಸಿದ್ದತೆಗಳು ನಡೆದಿದ್ದು, ಈಗಾಗಲೇ ದಸರಾದಲ್ಲಿ ಪಾಲ್ಗೊಳ್ಳುವಂತೆ ಇಂದು ಬೆಳಿಗ್ಗೆ ರಾಜ್ಯಪಾಲ ವಜುಬಾಯಿ ರೂಢಾವಾಲಾರವರನ್ನು ಭೇಟಿ ಮಾಡಿ ಆಹ್ವಾನ ನೀಡಿದ್ದೇವೆ. ನಂತರ ಮುಖ್ಯಮಂತ್ರಿಗಳಿಗೂ ಅಧಿಕೃತ ಆಹ್ವಾನ ನೀಡಲಾಗಿದ್ದು, ಮಧ್ಯಾಹ್ನದ ನಂತರ ಉಚ್ಥ ನ್ಯಾಯಾಯಯದ ಮುಖ್ಯ ನ್ಯಾಯಮೂರ್ತಿಗಳಿಗೂ ಆಹ್ವಾನ ನೀಡಲಾಗುವುದು. ಅದೇ ರೀತಿ ಮೈಸೂರಿನ ಅರಸ ಪರಂಪರೆಯ ಉತ್ತರಾಧಿಕಾರಿಯಾಗಿರುವ ಯದುವೀರ್‌ ಒಡೆಯರ್‌ರವರನ್ನು ದಸರಾ ಉತ್ಸವದಲ್ಲಿ ಪಾಲ್ಗೊಳ್ಳುವಂತೆ ಸರ್ಕಾರ ಆಹ್ವಾನ ನೀಡಲಿದೆ ಎಂದು ಅವರು ಹೇಳಿದರು.

ಆಹ್ವಾನ

ಇದಕ್ಕೂ ಮೊದಲು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ವಿ. ಶ್ರೀನಿವಾಸ್‌ಪ್ರಸಾದ್ ನೇತೃತ್ವದ ದಸರಾ ಆಚರಣಾ ಸಮಿತಿ ನಿಯೋಗ ಮುಖ್ಯಮಂತ್ರಿ ಸಿದ್ದರಾಮಯ್ಯರವರನ್ನು ವಿಧಾನಸೌಧದಲ್ಲಿರುವ ಅವರ ಕಚೇರಿಯಲ್ಲಿ ಭೇಟಿ ಮಾಡಿ ದಸರಾ ಉತ್ಸವದಲ್ಲಿ ಪಾಲ್ಗೊಳ್ಳುವಂತೆ ಆಹ್ವಾನ ನೀಡಿತು.

ಸಚಿವ ಮಹದೇವಪ್ರಸಾದ್, ಮೈಸೂರಿನ ಶಾಸಕರುಗಳಾದ ಎಂ.ಕೆ. ಸೋಮಶೇಖರ್, ತನ್ವೀರ್‌ಸೇಠ್, ಜಿ.ಪಂ. ಅಧ್ಯಕ್ಷೆ ಡಾ. ಪುಷ್ಪ, ಜಿಲ್ಲಾಧಿಕಾರಿ ಶಿಖ ಸೇರಿದಂತೆ ಹಲವರು ಈ ನಿಯೋಗದಲ್ಲಿದ್ದರು.

Write A Comment