ಕರ್ನಾಟಕ

ಕಲ್ಬುರ್ಗಿ ಹತ್ಯೆ ಪ್ರಕರಣದಲ್ಲಿ ಪನ್ಸಾರೆ ಕೊಲೆ ಪ್ರಕರಣದ ಕಿಂಗ್ ಪಿನ್ ರುದ್ರೇಗೌಡ ಪಾಟೀಲ್‌ ಭಾಗಿಯಾಗಿರುವ ಶಂಕೆ ! ತನಿಖೆಯನ್ನು ಚುರುಕುಗೊಳಿಸಿದ ಸಿಐಡಿ

Pinterest LinkedIn Tumblr

kalburgi

ಬೆಂಗಳೂರು,ಸೆ.20: ವಿಶ್ರಾಂತ ಕುಲಪತಿ ಡಾ.ಎಂ.ಎಂ. ಕಲ್ಬುರ್ಗಿ ಹತ್ಯೆ ಪ್ರಕರಣದ ತನಿಖೆಯನ್ನು ಸಿಐಡಿ ಪೊಲೀಸರು ತೀವ್ರಗೊಳಿಸಿದೆ. ಮಹಾರಾಷ್ಟ್ರದ ವಿಚಾರವಾದಿ ಗೋವಿಂದ ಪನ್ಸಾರೆ ಅವರ ಕೊಲೆ ಪ್ರಕರಣದ ಕಿಂಗ್ ಪಿನ್ ಆಗಿರುವ ರುದ್ರೇಗೌಡ ಪಾಟೀಲ್‌ಗೆ ರಾಷ್ಟ್ರೀಯ ತನಿಖಾ ದಳ ರೆಡ್‌ಕಾರ್ನರ್ ನೋಟಿಸ್ ನೀಡಿದ್ದು, ಕಲ್ಬುರ್ಗಿ ಹತ್ಯೆಯಲ್ಲೂ ಈತನ ಕೈವಾಡ ಇರುವ ಬಲವಾದ ಶಂಕೆ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ಸಿಐಡಿ ಪೊಲೀಸರು ತಮ್ಮ ತನಿಖೆಯನ್ನು ಚುರುಕುಗೊಳಿಸಿದ್ದಾರೆ.

ಕಲ್ಬುರ್ಗಿ ಹತ್ಯೆಯಾದ ಸಂದರ್ಭದಲ್ಲಿ ರುದ್ರೇಗೌಡ ಪಾಟೀಲ್ ಬೆಳಗಾವಿ-ಕಲ್ಬುರ್ಗಿ ನಡುವೆ ಪ್ರಯಾಣಿಸಿರುವುದು ಮತ್ತು ಅದೇ ದಿನದಿಂದ ನಾಪತ್ತೆ ಆಗಿರುವುದು ದೂರವಾಣಿ ಕರೆಗಳಿಂದ ಪೊಲೀಸರಿಗೆ ಮಾಹಿತಿ ದೊರೆತಿದೆ. ಈ ಹಿನ್ನಲೆಯಲ್ಲಿ ಕಲ್ಬುರ್ಗಿ ಹತ್ಯೆಯಲ್ಲಿ ಈತನ ಕೈವಾಡ ಇರುವ ಬಗ್ಗೆ ಬಲವಾದ ಶಂಕೆ ವ್ಯಕ್ತವಾಗಿದ್ದು, ಸಿಐಡಿ ಅಧಿಕಾರಿಗಳು ಈತನ ಬೆನ್ನತ್ತಿದ್ದಾರೆ. ಪನ್ಸಾರೆ ಹತ್ಯೆಯ ಪ್ರಮುಖ ಆರೋಪಿಯಾಗಿರುವ ಮಹಾರಾಷ್ಟ್ರ ಮೂಲದ ಪಾಟೀಲ್ ಪತ್ತೆಗೆ ರಾಷ್ಟ್ರೀಯ ತನಿಖಾ ದಳ, ಸಿಐಡಿ ಹಾಗೂ ಸಿಬಿಐ ಅಧಿಕಾರಿಗಳು ಶೋಧ ಕಾರ್ಯ ಮುಂದುವರೆಸಿದ್ದಾರೆ.

ಪ್ರಧಾನ ಸಂಚುಕೋರರು ಎನ್ನಲಾದ ಸನಾತನ ಸಂಸ್ಥೆಯ ನಾಲ್ವರು ಆರೋಪಿಗಳನ್ನು ಈಗಾಗಲೇ ಬಂಧಿಸಿ ವಿಚಾರಣೆಗೆ ಒಳಪಡಿಸಲಾಗಿದೆ. ಪನ್ಸಾರೆ ಮತ್ತು ಕಲ್ಬುರ್ಗಿ ಹತ್ಯೆಗೆ ಸಾಮ್ಯ ಇರುವ ಹಿನ್ನೆಲೆಯಲ್ಲಿ ಎರಡೂ ರಾಜ್ಯಗಳ ತನಿಖಾ ತಂಡಗಳು ತನಿಖೆಯನ್ನು ತೀವ್ರಗೊಳಿಸಿ ಶಂಕಿತರ ವಿಚಾರಣೆಯನ್ನು ನಡೆಸುತ್ತಿದ್ದಾರೆ.

Write A Comment