ಬೆಂಗಳೂರು, ಸೆ.19-ಕಳಸಾ-ಬಂಡೂರಿ ಹೋರಾಟ ದಿನದಿಂದ ದಿನಕ್ಕೆ ಪ್ರಬಲವಾಗುತ್ತಿರುವ ಹಿನ್ನೆಲೆಯಲ್ಲಿ ಯೋಜನೆ ಅನುಷ್ಠಾನ ಮಾಡುವ ಸಂಬಂಧ ಪ್ರಧಾನ ಮಂತ್ರಿ ನರೇಂದ್ರ ಮೋದಿಗೆ ಮತ್ತೊಮ್ಮೆ ವಸ್ತು ಸ್ಥಿತಿ ಮನವರಿಕೆ ಮಾಡಿಕೊಡಲು ಬಿಜೆಪಿ ತೀರ್ಮಾನಿಸಿದೆ. ಈ ಹಿಂದೆ ಸರ್ವಪಕ್ಷಗಳ ನಿಯೋಗ ದೆಹಲಿಗೆ ತೆರ ಳಿದ ವೇಳೆ ಪ್ರಧಾನಿ ಮೋದಿ ಕರ್ನಾಟಕ, ಗೋವಾ ಹಾಗೂ ಮಹಾರಾಷ್ಟ್ರ ಮುಖ್ಯಮಂತ್ರಿಗಳು ಸಭೆ ನಡೆಸಿ ಸಮಸ್ಯೆಯನ್ನು ಇತ್ಯರ್ಥ ಪಡಿಸಿಕೊಳ್ಳುವಂತೆ ಸಲಹೆ ಮಾಡಿದ್ದರು. ಆದರೆ, ಸಮಸ್ಯೆ ದಿನದಿಂದ ದಿನಕ್ಕೆ ಬಿಗಡಾಯಿಸುತ್ತಿದ್ದು, ಯೋಜನೆ ಅನುಷ್ಠಾನಕ್ಕೆ ಒತ್ತಾಯಿಸಿ ಉತ್ತರ ಕರ್ನಾಟಕದಲ್ಲಿ ಕಳೆದ 66 ದಿನಗಳಿಂದ ನಿರಂತರ ಪ್ರತಿಭಟನೆ ನಡೆಯುತ್ತಿದೆ. ಇಂದು ಸಂಜೆ ನಡೆಯಲಿರುವ ಪಕ್ಷದ ಪ್ರಮುಖರ ಸಭೆ(ಕೋರ್ಕಮಿಟಿ)ಯಲ್ಲಿ ಕಳಸಾ-ಬಂಡೂರಿ ಕುಡಿಯುವ ನೀರು ಯೋಜನೆಯನ್ನು ಅನುಷ್ಠಾನ ಮಾಡಲು ಪ್ರಧಾನಿಗೆ ಮತ್ತೊಮ್ಮೆ ಮನವರಿಕೆ ಮಾಡಿಕೊಡಲು ದೆಹಲಿಗೆ ತೆರಳಲು ಬಿಜೆಪಿ ಒಂದು ಸಾಲಿನ ನಿರ್ಣಯ ಕೈಗೊಳ್ಳಲಿದೆ.
ಕೇಂದ್ರವನ್ನು ಪ್ರತಿನಿಧಿಸುವ ರಾಜ್ಯದ ಸಚಿವರಾದ ವೆಂಕಯ್ಯನಾಯ್ಡು, ಡಿ.ವಿ.ಸದಾನಂದಗೌಡ, ಅನಂತ್ಕುಮಾರ್, ಜಿ.ಎಂ.ಸಿದ್ದೇಶ್ವರ್, ಪಕ್ಷದ ರಾಷ್ಟ್ರೀಯ ಉಪಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರು ಇದರ ನೇತೃತ್ವ ವಹಿಸಲಿದ್ದಾರೆ. ಬಿಜೆಪಿ ನಿಯೋಗದ ಜತೆಗೆ ಸಂಸದರು, ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್, ಕೆ.ಎಸ್.ಈಶ್ವರಪ್ಪ, ಆರ್.ಅಶೋಕ್, ಮಾಜಿ ಸಚಿವರು ಮತ್ತು ಕೆಲವು ಪ್ರಮುಖರು ದೆಹಲಿಗೆ ತೆರಳಿ ಪ್ರಧಾನಿಗೆ ಈ ಯೋಜನೆಯ ಅನಿವಾರ್ಯತೆಯನ್ನು ಮನವರಿಕೆ ಮಾಡಿಕೊಡಲಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
ಪಕ್ಷಕ್ಕೆ ನಷ್ಟ:
ಕಳೆದ ಎರಡು ತಿಂಗಳಿನಿಂದ ಉತ್ತರ ಕರ್ನಾಟಕದಲ್ಲಿ ನಡೆಯುತ್ತಿರುವ ಹೋರಾಟದಿಂದ ಈ ಭಾಗದಲ್ಲಿ ಬಿಜೆಪಿಗೆ ಭಾರಿ ನಷ್ಟವಾಗಲಿದೆ ಎಂದು ರಾಜ್ಯ ನಾಯಕರು ಪ್ರಧಾನಿಗೆ ಮನವರಿಕೆ ಮಾಡಿಕೊಡಲಿದ್ದಾರೆ.
ಬಿಜೆಪಿಗೆ ಉತ್ತರ ಕರ್ನಾಟಕ ಭದ್ರ ನೆಲೆಯಾಗಿದೆ. ವಿಧಾನಸಭೆ ಮತ್ತು ಲೋಕಸಭೆ ಚುನಾವಣೆಯಲ್ಲಿ ನಮಗೆ ಈ ಭಾಗದಿಂದಲೇ ಹೆಚ್ಚು ಜನಪ್ರತಿನಿಧಿಗಳು ಆಯ್ಕೆಯಾಗಿದ್ದಾರೆ. ಈಗ ಮಹದಾಯಿ ನದಿ ನೀರನ್ನು ಕಳಸಾ-ಬಂಡೂರಿ ನಾಲಾ ಮೂಲಕ ಅನುಷ್ಠಾನ ಮಾಡಲು ಕೇಂದ್ರವೇ ಮುಂದಾಗಬೇಕೆಂದು ಜನರ ಒತ್ತಾಸೆಯಾಗಿದೆ. ಪ್ರಧಾನಿ ಹಿಂದೇಟು ಹಾಕಿದರೆ ನಮಗೆ ಈ ಭಾಗದಲ್ಲಿ ನೆಲೆಯಿಲ್ಲದಂತಾಗುತ್ತದೆ ಎಂಬ ಆತಂಕ ಸ್ಥಳೀಯ ನಾಯಕರಿಗೆ ಎದುರಾಗಿದೆ.
ಈಗಾಗಲೇ ಈ ಹೋರಾಟಕ್ಕೆ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಬೆಂಬಲ ಸೂಚಿಸಿ ಪ್ರಧಾನಿಯೇ ಮಧ್ಯಸ್ಥಿಕೆ ವಹಿಸಬೇಕೆಂದು ಹೇಳಿದ್ದಾರೆ. ಇನ್ನು ಆಡಳಿತಾರೂಢ ಕಾಂಗ್ರೆಸ್ ಯೋಜನೆ ವಿಳಂಬಕ್ಕೆ ಬಿಜೆಪಿಯೇ ಕಾರಣ ಎಂದು ಅಪಪ್ರಚಾರ ನಡೆಸಿದೆ. ಕೇಂದ್ರ ಸರ್ಕಾರ ಮೂರು ರಾಜ್ಯಗಳ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ, ಲಕ್ಷ್ಮಿಪರ್ಸೆಕರ್, ದೇವೇಂದ್ರ ಫಡ್ನವೀಸ್ ಅವರನ್ನು ಸಭೆಗೆ ಆಹ್ವಾನಿಸಿ ವಸ್ತು ಸ್ಥಿತಿಯ ಚರ್ಚೆ ನಡೆಸಿ ಸಮಸ್ಯೆ ಬಗೆಹರಿಸುವಂತೆ ಕೋರಲಿದೆ. ಮುಂದಿನ ವಾರ ಬಿಜೆಪಿಯ ನಿಯೋಗ ಪ್ರಧಾನಮಂತ್ರಿ ಭೇಟಿಗೆ ಸಮಯಾವಕಶವನ್ನು ಕೊರುವ ಸಂಭವವಿದೆ. ಅಮೇರಿಕ ಪ್ರವಾಸ ತೆರಳುವ ಮುನ್ನವೇ ಭೇಟಿಗೆ ಯಡಿಯೂರಪ್ಪ ದೆಹಲಿಗೆ ತೆರಳಲಿದ್ದಾರೆ ಎಂದು ತಿಳಿದು ಬಂದಿದೆ. ಉಳಿದಂತೆ ಇಂದಿನ ಸಭೆಯಲ್ಲಿ ಪ್ರಮುಖವಾಗಿ ಸ್ಥಳೀಯ ಸಂಸ್ಥೆ ಚುನಾವಣೆ, ಪಕ್ಷ ಸಂಘಟನೆ, ಎರಡನೇ ಹಂತದ ರೈತ ಚೈತನ್ಯ ಯಾತ್ರೆ, ಸರ್ಕಾರದ ಜನವಿರೋಧಿ ನೀತಿಗಳನ್ನು ರಾಜ್ಯಾದ್ಯಂತ ಜನರ ಬಳಿ ಕೊಂಡೊಯ್ಯಲು ತೀರ್ಮಾನಿಸಲಾಗಿದೆ.