ಕರ್ನಾಟಕ

ಮಹಾದಾಯಿಗೆ ಹೋರಾಟಕ್ಕೆ ದೇವೇಗೌಡ, ಮೊಯಿಲಿ ಬೆಂಬಲ; ಪ್ರಧಾನಿ ಮಧ್ಯಸ್ಥಿಕೆಗೆ ಆಗ್ರಹ

Pinterest LinkedIn Tumblr

HDD-AND-MOILYಹುಬ್ಬಳ್ಳಿ: ಮಹಾದಾಯಿ ಯೋಜನೆ ಅನುಷ್ಠಾನಕ್ಕಾಗಿ ಆಗ್ರಹಿಸಿ ಮುಂಬೈ ಕರ್ನಾಟಕ ಭಾಗದ ನಾಲ್ಕು ಜಿಲ್ಲೆಗಳ ರೈತರು  ನಡೆಸಿರುವ ಹೋರಾಟ ಮುಂದುವರಿದಿದೆ.

ಶುಕ್ರವಾರ ಜೆಡಿಎಸ್ ರಾಷ್ಟ್ರೀಯ ಘಟಕದ ಅಧ್ಯಕ್ಷ ದೇವೇಗೌಡ ಹಾಗೂ ಕಾಂಗ್ರೆಸ್‌ ಸಂಸದ ವೀರಪ್ಪ ಮೊಯಿಲಿ ರಂಗ ಪ್ರವೇಶ ಮಾಡಿದ್ದು, ಪ್ರಧಾನಿ ಮಧ್ಯಸ್ಥಿಕೆಗೆ ಆಗ್ರಹಿಸಿದ್ದಾರೆ.

ಬೆಳಗಾವಿ, ಧಾರವಾಡ ಹಾಗೂ ಗದಗ  ಜಿಲ್ಲೆಗಳಿಗೆ ಭೇಟಿ ನೀಡಿದ ದೇವೇಗೌಡರು, ಬೆಳಗಾವಿ ಜಿಲ್ಲೆ ಖಾನಾಪುರ ತಾಲ್ಲೂಕಿನ ಕಣಕುಂಬಿಗೆ ತೆರಳಿ ಅಲ್ಲಿ ಈಗಾಗಲೇ ಕೈಗೊಂಡಿರುವ ಕಳಸಾ– ಮಲಪ್ರಭಾ ನಾಲೆ ನಿರ್ಮಾಣ ಕಾಮಗಾರಿ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದರು. ಬಳಿಕ ನರಗುಂದ ಮತ್ತು ನವಲಗುಂದಕ್ಕೆ ತೆರಳಿ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿದರು.

‘ಯೋಜನೆಗೆ ಸಂಬಂಧಿಸಿದಂತೆ ನ್ಯಾಯಮಂಡಳಿಯ  ಅಂತಿಮ ತೀರ್ಪು ಬರುವವರೆಗೆ ಕಾಯದೆ, ಮಧ್ಯಂತರ ಆದೇಶದ ಮೂಲಕ ನೀರು ಒದಗಿಸುವಂತೆ ರಾಜ್ಯ ಸರ್ಕಾರ ಪ್ರಧಾನಿಗೆ ಕೋರಬೇಕು’ ಎಂದು ಬೆಳಗಾವಿಯಲ್ಲಿ ದೇವೇಗೌಡರು ಸುದ್ದಿಗಾರರಿಗೆ ತಿಳಿಸಿದರು.

“ನರಗುಂದದಲ್ಲಿ ಹೋರಾಟ ನಡೆದಾಗಲೆಲ್ಲ ಸರ್ಕಾರ ಪಲ್ಲಟಗೊಂಡಿದ್ದು, ಇದನ್ನು ಸರ್ಕಾರ ಅರಿಯಬೇಕು” ಎಂದರು.

ನವಲಗುಂದದಲ್ಲಿ ರೈತರನ್ನುದ್ದೇಶಿಸಿ ಮಾತನಾಡಿದ ವೀರಪ್ಪ ಮೊಯಿಲಿ, ನ್ಯಾಯಮಂಡಳಿಯ ಹೊರತಾಗಿ ಗೋವಾ, ಮಹಾರಾಷ್ಟ್ರ ಮತ್ತು ಕರ್ನಾಟಕದ ನಡುವೆ ರಾಜಿ ನಡೆಸಲು ಪ್ರಧಾನಿ ಮಧ್ಯಸ್ಥಿಕೆ ವಹಿಸಬೇಕು ಎಂದು ಆಗ್ರಹಿಸಿದರು.

ರೈತ ಆತ್ಮಹತ್ಯೆಗೆ ಯತ್ನ
ನರಗುಂದದಲ್ಲಿ ನಡೆಯುತ್ತಿರುವ ಧರಣಿ ಸ್ಥಳಕ್ಕೆ ದೇವೇಗೌಡ ಭೇಟಿ ನೀಡಿದ ಸಂದರ್ಭದಲ್ಲಿ ರೈತರೊಬ್ಬರು ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆಯಿತು.

ಆತ್ಮಹತ್ಯೆಗೆ ಯತ್ನಿಸಿ, ತೀವ್ರ ಅಸ್ವಸ್ಥಗೊಂಡ ಕೊಣ್ಣೂರು ಗ್ರಾಮದ ರಾಮನಗೌಡ ಪಾಟೀಲ (45)ಅವರನ್ನು ಹುಬ್ಬಳ್ಳಿಯ ಕಿಮ್ಸ್‌ ಆಸ್ಪತ್ರೆಗೆ ದಾಖಲಿಸಲಾಗಿದೆ.

Write A Comment