ಕರ್ನಾಟಕ

ಇಂದಿರಾಗಾಂಧಿ-ರಾಜೀವ್‌ಗಾಂಧಿ ಹೆಸರಿನ ಅಂಚೆ ಚೀಟಿ ಕೈ ಬಿಡುವ ನಿರ್ಧಾರ : ‘ಉಗ್ರ’ಪ್ಪ ಆಕ್ರೋಶ

Pinterest LinkedIn Tumblr

ugrappaಬೆಂಗಳೂರು, ಸೆ.18- ಮಾಜಿ ಪ್ರಧಾನಿಗಳಾದ ಇಂದಿರಾಗಾಂಧಿ ಮತ್ತು ರಾಜೀವ್‌ಗಾಂಧಿಯವರ ಹೆಸರಿನ ಅಂಚೆಚೀಟಿ ಕೈ ಬಿಟ್ಟು ಜನಸಂಘದ ಶ್ಯಾಮ್‌ಪ್ರಕಾಶ್ ಮುಖರ್ಜಿ ಹಾಗೂ ದೀನ್‌ದಯಾಳ್ ಉಪಾಧ್ಯ ಅವರ ಅಂಚೆಚೀಟಿ ಹೊರತರುವ ಆದೇಶವನ್ನು ಕೇಂದ್ರ ಸರ್ಕಾರ ವಾಪಸ್ ಪಡೆಯಬೇಕೆಂದು ವಿಧಾನ ಪರಿಷತ್ ಸದಸ್ಯ ಉಗ್ರಪ್ಪ ಇಂದಿಲ್ಲಿ ಆಗ್ರಹಿಸಿದರು.

ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಬಿಜೆಪಿ ದ್ವೇಷದ ರಾಜಕಾರಣ ಮಾಡುತ್ತಿದೆ. ಶ್ಯಾಮ್ ಪ್ರಕಾಶ್ ಮುಖರ್ಜಿ ಮತ್ತು ದೀನ್‌ದಯಾಳ್ ಉಪಾಧ್ಯ ಅವರು ರಾಷ್ಟ್ರಕ್ಕಾಗಿ ಮಾಡಿದ ತ್ಯಾಗ-ಬಲಿದಾನ ಏನು ಎಂದು ಪ್ರಶ್ನಿಸಿದರು.

ಇಂದಿರಾಗಾಂಧಿ ಕುಟುಂಬ ರಾಷ್ಟ್ರ ಹಾಗೂ ಸಮಾಜಕ್ಕಾಗಿ ಸಾಕಷ್ಟು ತ್ಯಾಗ ಮಾಡಿದೆ. ಸ್ವಾತಂತ್ರ್ಯ ಚಳುವಳಿಯಲ್ಲಿ ಅವರ ಕುಟುಂಬದ ಕೊಡುಗೆಯನ್ನು ಅಲ್ಲಗಳೆಯಲಾಗದು. ಆ ಸಂದರ್ಭದಲ್ಲಿ ಆರ್‌ಎಸ್‌ಎಸ್ ಮತ್ತು ಜನಸಂಘ ಬ್ರಿಟಿಷರ ಪರವಾಗಿತ್ತು ಎಂದರು.

ಕೇಂದ್ರ ಸರ್ಕಾರ ಇಂದಿರಾಗಾಂಧಿಯವರ ಕುಟುಂಬದ ಮೇಲೆ ಸೇಡು ತೀರಿಸಿಕೊಳ್ಳುವುದನ್ನು ಕೈ ಬಿಡಬೇಕು. ಇದನ್ನು ಜನತೆ ಸಹಿಸುವುದಿಲ್ಲ ಎಂದು ಅವರು ಹೇಳಿದರು.

ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಕೆ.ಎಸ್.ಈಶ್ವರಪ್ಪ ಅವರಿಗೆ ಮಾನಸಿಕ ಚಿಕಿತ್ಸೆ ನೀಡಬೇಕಿದೆ. ರಾಜ್ಯ ಬಿಜೆಪಿಯಲ್ಲಿ ಐದಾರು ಗುಂಪುಗಳಿದ್ದು, ಅದನ್ನು ಮರೆಮಾಚಲು ರೈತ ಚೈತನ್ಯ ಯಾತ್ರೆ ನಡೆಸಿದರೇ ಹೊರತು ಎಳ್ಳಷ್ಟೂ ರೈತರ ಪರ ಕಾಳಜಿ ಇಲ್ಲ. ಒಂದು ವೇಳೆ ಇದ್ದಿದ್ದರೆ ರಾಜಕೀಯ ಬೇಳೆ ಬೇಯಿಸುವುದನ್ನು ನಿಲ್ಲಿಸಿ ಕೇಂದ್ರದಿಂದ ಬರ ಪೀಡಿತ ರಾಜ್ಯಕ್ಕೆ ವಿಶೇಷ ಅನುದಾನ ಕೊಡಿಸುತ್ತಿದ್ದರು ಎಂದು ಟೀಕಿಸಿದರು.

ಪರಿಷತ್ ಸದಸ್ಯ ಎಚ್.ಎಂ.ರೇವಣ್ಣ ಮಾತನಾಡಿ, ಈಶ್ವರಪ್ಪ ಒಮ್ಮೆ ಮಾತನಾಡಿ ನಂತರ ವಾಪಸು ಪಡೆಯುತ್ತಾರೆ. ಇಂತಹ ವಿಚಾರಕ್ಕೆ ಅವರಿಗೆ ಡಾಕ್ಟರೇಟ್ ನೀಡಬಹುದು. ನೀಡುವ ಹೇಳಿಕೆಗಳು ಸಮಾಜದ ಚಿಂತನೆ ಪರವಾಗಿರಬೇಕು. ಅವರು ಆಡುವ ಮಾತಿನ ಮೇಲೆ ಎಚ್ಚರವಿರಬೇಕು ಎಂದರು.

ಬಿಜೆಪಿಯವರು ಕಾಮಾಲೆ ಕಣ್ಣಿನಿಂದ ನೋಡುವುದನ್ನು ಬಿಡಬೇಕು. ರಾಜೀವ್‌ಗಾಂಧಿ ಹಾಗೂ ಇಂದಿರಾಗಾಧಿ ಹೆಸರಿನ ಅಂಚೆ ಚೀಟಿ ಕೈ ಬಿಡುತ್ತಿರುವುದು ಸರಿಯಲ್ಲ. ಇಂದಿರಾಗಾಂಧಿ ಕುಟುಂಬವನ್ನು ಹೊರಗಿಟ್ಟು ರಾಷ್ಟ್ರದ ಅಭಿವೃದ್ಧಿ ನೋಡಲಾಗದು ಎಂದು ಅವರು ಹೇಳಿದರು.

Write A Comment