ಕರ್ನಾಟಕ

ಲೋಡ್‌ಶೆಡ್ಡಿಂಗ್‌ ಅವಧಿ ಶೀಘ್ರದಲ್ಲೇ ಕಡಿಮೆ ಆಗುವ ನಿರೀಕ್ಷೆ

Pinterest LinkedIn Tumblr

powerಬೆಂಗಳೂರು: ಉಡುಪಿ ಉಷ್ಣ ವಿದ್ಯುತ್‌ ಸ್ಥಾವರ (ಯುಪಿಸಿಎಲ್‌) ಹಾಗೂ ಬಳ್ಳಾರಿ ಉಷ್ಣ ವಿದ್ಯುತ್‌ ಸ್ಥಾವರಗಳಿಂದ (ಬಿಟಿಪಿಎಸ್‌) ಪ್ರತಿ ನಿತ್ಯ ಸಾವಿರ ಮೆಗಾವಾಟ್‌ಗೂ ಅಧಿಕ ವಿದ್ಯುತ್‌ ರಾಜ್ಯಕ್ಕೆ ಲಭ್ಯವಾಗುತ್ತಿರುವುದರಿಂದ ಲೋಡ್‌ಶೆಡ್ಡಿಂಗ್‌ ಅವಧಿ ಶೀಘ್ರದಲ್ಲೇ ಕಡಿಮೆ ಆಗುವ ನಿರೀಕ್ಷೆ ಇದೆ.

‘ಯುಪಿಸಿಎಲ್‌ ಘಟಕ  ಹಾಗೂ ಬಿಟಿಪಿಎಸ್‌  ಘಟಕಗಳಲ್ಲಿ  ಕಾಣಿಸಿಕೊಂಡಿದ್ದ ತಾಂತ್ರಿಕ ದೋಷಗಳನ್ನು ಸರಿಪಡಿಸಲಾಗಿದೆ.  ಯುಪಿಸಿಎಲ್‌ ಘಟಕದಲ್ಲಿ 500 ಮೆಗಾವಾಟ್‌ ವಿದ್ಯುತ್‌ ಉತ್ಪಾದಿಸಲಾಗುತ್ತಿದೆ. ಅಲ್ಲಿನ ಇನ್ನೊಂದು ಘಟಕವೂ ಕೆಲವೇ ದಿನಗಳಲ್ಲಿ ದುರಸ್ತಿಯಾಗಲಿದೆ. ಬಿಟಿಪಿಎಸ್‌ನ ಎರಡು ಘಟಕಗಳಿಂದ ತಲಾ  500 ಮೆಗಾವಾಟ್‌ ವಿದ್ಯುತ್‌ ಲಭಿಸಲಿದೆ. ಒಂದು ಘಟಕದಿಂದ ಈಗಾಗಲೇ ವಿದ್ಯುತ್‌ ಪೂರೈಕೆ ಆಗುತ್ತಿದೆ’  ಎಂದು ಕರ್ನಾಟಕ ವಿದ್ಯುತ್‌ ಪ್ರಸರಣ ನಿಗಮದ (ಕೆಪಿಟಿಸಿಎಲ್) ವ್ಯವಸ್ಥಾಪಕ ನಿರ್ದೇಶಕ ಜಾವೇದ್‌ ಅಖ್ತರ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ಈ ಎರಡೂ ಸ್ಥಾವರಗಳಿಂದ ಪೂರ್ಣ ಪ್ರಮಾಣದ ವಿದ್ಯುತ್‌ ಲಭ್ಯವಾದ ಬಳಿಕ ರಾಜ್ಯದ ವಿದ್ಯುತ್‌ ಅಭಾವ ಬಹುತೇಕ ನೀಗಲಿದೆ.  ತಮಿಳುನಾಡಿನಿಂದ ವಿದ್ಯುತ್‌ ಖರೀದಿಸುವ ಬಗ್ಗೆಯೂ ಪ್ರಯತ್ನ ನಡೆದಿದೆ. ಕೇಂದ್ರದ ಗ್ರಿಡ್‌ನಿಂದ ರಾಜ್ಯಕ್ಕೆ ಹೆಚ್ಚುವರಿ ವಿದ್ಯುತ್‌ ಪೂರೈಸುವಂತೆಯೂ ಕೋರಿದ್ದೇವೆ’ ಎಂದು ವಿವರಿಸಿದರು.

ರಾಜ್ಯದಲ್ಲಿ ಬರ ಪರಿಸ್ಥಿತಿ ಇರುವಾಗಲೇ ಯುಪಿಸಿಎಲ್‌ ಹಾಗೂ ಬಿಟಿಪಿಎಸ್ ಘಟಕಗಳಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿತ್ತು. ಮಳೆ ಕೊರತೆಯಿಂದಾಗಿ ಜಲಾಶಯಗಳೂ ಭರ್ತಿ ಆಗಿರಲಿಲ್ಲ. ಹಾಗಾಗಿ ವಿದ್ಯುತ್‌ ಕಡಿತ ಮಾಡುವ  ಪರಿಸ್ಥಿತಿ ಸೃಷ್ಟಿಯಾಗಿತ್ತು.

ಯುಪಿಸಿಎಲ್‌, ಬಿಟಿಪಿಎಸ್‌ನಿಂದ ಪೂರ್ಣ ಪ್ರಮಾಣದ ವಿದ್ಯುತ್‌ ಲಭ್ಯವಾದರೆ ಬೆಂಗಳೂರಿನಲ್ಲಿ ಲೋಡ್‌ಶೆಡ್ಡಿಂಗ್‌ ಅವಧಿ ಇಳಿಕೆ ಮಾಡುವ ಬಗ್ಗೆಯೂ ಬೆಸ್ಕಾಂ ಚಿಂತನೆ ನಡೆಸಿದೆ.

‘ಯುಪಿಸಿಎಲ್‌ ಹಾಗೂ ಬಿಟಿಪಿಎಸ್‌ನಲ್ಲಿ ಹದಗೆಟ್ಟಿದ್ದ ಘಟಕಗಳು ದುರಸ್ತಿ ಆಗಿರುವುದು ಗಮನಕ್ಕೆ ಬಂದಿದೆ. ಈ  ಸ್ಥಾವರಗಳಿಂದ ನಿರಂತರವಾಗಿ ವಿದ್ಯುತ್‌ ಪೂರೈಕೆಯಾದರೆ, ರಾಜಧಾನಿಯಲ್ಲಿ ವಿದ್ಯುತ್‌ ಕಡಿತದ ಅವಧಿ ಮರುನಿಗದಿ ಮಾಡುತ್ತೇವೆ’ ಎಂದು ಬೆಸ್ಕಾಂ ಎಂ.ಡಿ ಪಂಕಜ್‌ ಕುಮಾರ್‌ ಪಾಂಡೆ ತಿಳಿಸಿದರು.

Write A Comment